ಹಲ್ಲೆಗೈದು ದರೋಡೆ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಸೆ.7
ಲಿಂಗಸ್ಗೂರು ಪಟ್ಟಣದ ಹೊರವಲಯದ ಪಂಪ್ ಹೌಸ್ ಹತ್ತಿರ, ಶಿವಾನಂದ ಲೇಔಟ್ ಹಾಗೂ ಕೆಪಿಟಿಸಿಎ ಲ್ ವಸತಿ ಸಂಕೀರ್ಣ ಬಡಾವಣೆಗಳಲ್ಲಿ ಅಪರಿಚಿತ ದರೋಡೆಕೋರರ ತಂಡ ದರೋಡೆ ನಡೆಸಿದೆ.
ಮನೆಗಳಿಗೆ ನುಗ್ಗಿ ಕುಟುಂಬದವರ ಮೇಲೆ ಹಲ್ಲೆ ಎಸಗಿ, ಅಮೂಲ್ಯ ವಸ್ತುಗಳನ್ನು ದೋಚಿ ದರೋಡೆಕೋರರು ಪರಾರಿಯಾದ ಘಟನೆ ಶುಕ್ರವಾರ ಮಧ್ಯರಾತ್ರಿ ಜರುಗಿದೆ.
ಪುರಸಭೆ ವ್ಯಾಪ್ತಿಯ ಪಂಪ್‌ಹೌಸ್ ಹತ್ತಿರದ ಶಿವಲಿಂಗ ದೇವೇಂದ್ರಪ್ಪ ಮೇಗಳಮನಿ ಅವರ ಮನೆ ಬಾಗಿಲ ಕೊಂಡಿ ಮುರಿದ ಅಪರಿಚಿತ ದರೋಡೆಕೋರರು ಮನೆ ಒಳಗೆ ಪ್ರವೇಶಿಸಿ ಹಾಲ್‌ನಲ್ಲಿ ಮಲಗಿದ್ದ ಶಿವಲಿಂಗ ಅವರ ತಾಯಿ ಅಮರಮ್ಮ ದೇವೇಂದ್ರಪ್ಪ ಅವರಿಗೆ ಬಡಿಗೆ, ಕಲ್ಲಿನಿಂದ ಹೊಡೆದು ಆಕೆಯ ಮೇಲಿನ 5 ಗ್ರಾಂ ಬೆಂಡೋಲಿ ಮತ್ತು 2 ಗ್ರಾಂ ಉಂಗುರ ಸೇರಿ ಒಟ್ಟು ರು. 18ಸಾವಿರ ಬೆಲೆಯ ಚಿನ್ನದ ಆಭರಣ ದರೋಡೆ ಮಾಡಿದ್ದಾರೆ. ಮನೆಯಲ್ಲಿ ಚೀರಾಡುವ ಶಬ್ದದ ಕೇಳಿದ ಪಕ್ಕದ ಮನೆಯ ಚಾಂದ್‌ಪಾಶಾ ಮತ್ತು ಮಲ್ಲೇಶ ಇವರಿಗೆ ಆರೋಪಿಗಳು ಕಲ್ಲು ತೂರಾಟ ನಡೆಸಿ ಅವರನ್ನು ಗಾಯಗೊಳಿಸಿ ಪರಾರಿಯಾಗಿದ್ದಾರೆ.
ಥಳಿತ: ಅದರಂತೆ ಪಟ್ಟಣದ ಶಿವಾನಂದ ಲೇಔಟ್‌ನ ಅಮೃತ ಬಸವರಾಜ ಕಸಬಾ ಲಿಂಗಸ್ಗೂರು ಇವರ ಮನೆಯ ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿದ ಅಪರಿಚಿತ ದರೋಡೆಕೋರರು ಅಮೃತ ಅವರ ತಾಯಿ ಮಹಾದೇವಿ ಸಿದ್ಧಪ್ಪ ಎಂಬುವರಿಗೆ ಪೈಸೆ ಲಾವೋ, ಪೈಸೆ ಲಾವೋ ಎಂದು ಕೇಳಿದ್ದಾರೆ. ಇದಕ್ಕೆ ತಿರಸ್ಕರಿಸಿದ ಪರಿಣಾಮ ದರೋಡೆಕೋರರು ಅವರ ತಲೆಗೆ ಮತ್ತು ಹಣೆಗೆ ಬಡಿಗೆಯಿಂದ ಹೊಡೆದಿದ್ದಾರೆ.
ಬಿಡಿಸಲು ಬಂದ ಅಮೃತ ಅವರಿಗೂ ಮುಖ ಮತ್ತು ಹಣೆಗೆ ಬಡಿಗೆಯಿಂದ ಹೊಡೆದು ಗಾಯಗೊಳಿಸಿ ಕೊರಳಲ್ಲಿದ್ದ ಒಂದು ತೊಲೆ ಚಿನ್ನದ ತಾಳಿ, ಅವರ ತಾಯಿ ಬಳಿಯಿದ್ದ ರು. 900 ನಗದು ಹಣ ದೋಚಿ ಮನೆ ಬಾಗಿಲನ್ನು ಹೊರಗಡೆಯಿಂದ ಕೊಂಡಿ ಹಾಕಿ ಪರಾರಿಯಾಗಿದ್ದಾರೆ.
ಬೀಗ ಮುರಿದು ದರೋಡೆ: ಅದೇ ರೀತಿ ಕೆಪಿಟಿಸಿಎಲ್ ವಸತಿ ಸಂಕೀರ್ಣದಲ್ಲಿ ವಾಸವಿರುವ ಎಂಜಿನೀಯರ್ ದೊಡ್ಡ ಬಸವರಾಜ ವೀರಭದ್ರಪ್ಪ ಎಂಬುವರು ತಮ್ಮ ಮನೆಗೆ ಬೀಗ ಹಾಕಿ ರಾತ್ರಿ ಪಾಳಿಯ ಕರ್ತವ್ಯಕ್ಕೆ ತೆರಳಿದ ಸಮಯದಲ್ಲಿ ಮನೆಗೆ ಹಾಕಿದ ಬೀಗ ಮುರಿದು ಮನೆಯೊಳಗೆ ಪ್ರವೇಶಿಸಿ, ಮನೆಯಲ್ಲಿದ್ದ 4 ತೊಲೆ 2 ಗ್ರಾಂ ಚಿನ್ನದ ಆಭರಣ ಮತ್ತು 7 ತೊಲೆ ಬೆಳ್ಳಿ ಆಭರಣ ಸೇರಿ ಒಟ್ಟು ರು. 1.22 ಲಕ್ಷ ಮೌಲ್ಯದ ಆಭರಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಶುಕ್ರವಾರ ಮಧ್ಯರಾತ್ರಿ ಜರುಗಿದ ಈ ಮೂರು ಘಟನೆಗಳ ಕುರಿತು ಲಿಂಗಸ್ಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅದೇರೀತಿ ನಗರದ ಹೊರವಲಯದ ಜಿಪಂ ಮಾಜಿ ಉಪಾಧ್ಯಕ್ಷ ಪಾಮಯ್ಯ ಮುರಾರಿ ಅವರ ಮನೆಗೆ ಆಗಮಿಸಿದ ದರೋಡೆಕೋರರು ಮನೆಯ ಕಂಪೌಂಡ್ ಗೇಟ್ ತೆಗೆದು ದ್ವಾರ ಬಾಗಿಲಿನ ಸೆಂಟರ್ ಲಾಕ್ ತೆಗೆಯುತ್ತಿದ್ದಂತೆ ಮನೆಯವರು ಎಚ್ಚೆತ್ತುಕೊಂಡಿದ್ದಾರೆ. ದರೋಡೆಕೋರರು ಬಾಗಿಲು ತೆಗೆದು ಒಳಗೆ ಪ್ರವೇಶಿಸುವಷ್ಟರಲ್ಲಿ ಮುರಾರಿ, ಬಾಗಿಲು ಬಿಗಿಯಾಗಿ ಒತ್ತಿ ಹಿಡಿದು ಕಳ್ಳರು ಬಂದಿದ್ದಾರೆಂದು ಮನೆ ಅಕ್ಕಪಕ್ಕದವರನ್ನು ಕರೆಯಲು ಆರಂಭಿಸಿದ್ದಾರೆ.
ಅಷ್ಟಕ್ಕೂ ಬಿಡದ ದರೋಡೆಕೋರರು ಬಾಗಿಲು ತಳ್ಳಾಟದಲ್ಲಿ ತೊಡಗಿದ್ದಾರೆ. ಅಷ್ಟರಲ್ಲಿ ಮನೆಯ ಅಕ್ಕಪಕ್ಕ ಮನೆಯವರು ಎಚ್ಚೆತ್ತುಕೊಳ್ಳುತ್ತಿದ್ದಂತೆ ದರೋಡೆಕೋರರು ಪರಾರಿಯಾಗಿದ್ದಾರೆ.
ತಕ್ಷಣ ದೂರವಾಣಿ (ಮೊಬೈಲ್) ಮೂಲಕ ಪೊಲೀಸರಿಗೆ ಮಾಹಿತಿ ನೀಡಲಾಯಿತು. ತಕ್ಷಣ ಕಾರ್ಯ ಪ್ರವೃತ್ತರಾದ ಪಿಎಸ್‌ಐ ಸಿದ್ಧರಾಮಯ್ಯ ಹಾಗೂ ಪೊಲೀಸರು ಪಾಮಯ್ಯ ಮುರಾರಿ ಮನೆಗೆ ಆಗಮಿಸಿ ಪರಿಶೀಲನೆ ನಡೆಸಿದರು ಎಂದು ಜಿಪಂ ಮಾಜಿ ಉಪಾಧ್ಯಕ್ಷ ಪಾಮಯ್ಯ ಮುರಾರಿ ವಿವರಿಸಿದರು.
ತಪಾಸಣೆ: ನಂತರ ದರೋಡೆಯಾದ ಮನೆಗಳಿಗೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ತಾಸುಗಟ್ಟಲೆ ತಪಾಸಣೆ ನಡೆಸಿದರು. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ ಸದಲಗಿ, ಸಿಪಿಐಗಳಾದ ಪಂಚಾಕ್ಷರಯ್ಯ, ಕರುಣೇಶಗೌಡ, ಐ.ಬಿ. ಅಲ್ಲಿಸಾಬ ಮತ್ತಿತರರು ದರೋಡೆಯಾದ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಲ್ಲದೆ ಲಿಂಗಸ್ಗೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಾದ ಹಲ್ಲೆಗೊಳಗಾದ ವ್ಯಕ್ತಿಗಳನ್ನು ಭೇಟಿ ಮಾಡಿ ಪರಿಶೀಲನೆ ನಡೆಸಿದರು.
ಎಸ್‌ಪಿ ಸ್ಪಷ್ಟನೆ: ಲಿಂಗಸ್ಗೂರು ಪಟ್ಟಣದಲ್ಲಿ ಶುಕ್ರವಾರ ಮಧ್ಯರಾತ್ರಿ ಸುಮಾರಿಗೆ ಅಪರಿಚಿತ ದರೋಡೆಕೋರರು ದರೋಡೆ ನಡೆಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ದರೋಡೆಕೋರರ ಪತ್ತೆಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ಡಿವೈಎಸ್‌ಪಿ ಹಾಗೂ ಸಿಪಿಐ ನೇತೃತ್ವದ ವಿಶೇಷ ತಂಡ ರಚಿಸಲಾಗಿದೆ. ಇದಕ್ಕೂ ಹಿಂದಿನ ರಾತ್ರಿ ಬಳ್ಳಾರಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಇದೇ ರೀತಿ ಪ್ರಕರಣ ಜರುಗಿದ್ದು, ಇದೇ ತಂಡ ಲಿಂಗಸ್ಗೂರು ಪಟ್ಟಣದಲ್ಲಿ ದರೋಡೆ ನಡೆಸಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ.
ಲಿಂಗಸ್ಗೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಅಧಿಕಾರಿಗಳ ಸಹಕಾರ ಪಡೆಯಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಿ ಶೀಘ್ರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಮನೆಗೆ ನುಗ್ಗಿ ಮಹಿಳೆಯನ್ನು ಬೆದರಿಸಿ ಕಳವು
ರಾಯಚೂರು: ನಗರದ ನಿಜಲಿಂಗಪ್ಪ ಕಾಲನಿಯಲ್ಲಿ ಹಾಡಹಗಲೇ ಒಂಟಿ ಮಹಿಳೆಯಿದ್ದ ಮನೆಗೆ ನುಗ್ಗಿದ ಕಳ್ಳನೊಬ್ಬ ಚಿನ್ನಾಭರಣ ದೋಚಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಕಾಲನಿಯ ನಿವಾಸಿ ಶಾಮಲಾ ಎಂಬುವವರ ಮನೆಗೆ ನುಗ್ಗಿದ ಕಳ್ಳ ಮಹಿಳೆಯನ್ನು ಬೆದರಿಸಿ ಮನೆಯಲ್ಲಿದ್ದ ಒಟ್ಟು 6 ತೊಲೆ ಚಿನ್ನಾಭರಣ ದೋಚಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.ಈ ಕುರಿತು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಹೊಲದಲ್ಲಿ ಹಾವು ಕಚ್ಚಿ ರೈತನ ಸಾವು
ರಾಯಚೂರು: ಸಿಂಧನೂರಿನ ರೈತನೊಬ್ಬ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿದ್ದರಿಂದ ಮೃತಪಟ್ಟಿದ್ದಾನೆ.
ಮೃತನನ್ನು ಮಾರೆಪ್ಪ ಎಂದು ಗುರುತಿಸಲಾಗಿದೆ. ಈತ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಆತನ ಕೈಗೆ ಹಾವು ಕಚ್ಚಿದ್ದು, ಕೂಡಲೇ ಸಿಂಧನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.