13ರಂದು ಉಸ್ತುವಾರಿ ಸಚಿವರಿಂದ ಕ್ರೀಡಾಕೂಟ ಉದ್ಘಾಟನೆ: ಶಾಸಕ ಬಾದರ್ಲಿ
ಸಿಂಧನೂರು: ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ಸೆ. 13ರಂದು ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಕ್ರೀಡಾಕೂಟ ಉದ್ಘಾಟಿಸುವರು ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ಅವರು ಭಾನುವಾರ ತಾಲೂಕು ಕ್ರೀಡಾಂಗಣಕ್ಕೆ ಭೇಟಿ ನೀಡಿ ಕ್ರೀಡಾಂಗಣದ ಸ್ವಚ್ಛತೆ ಹಾಗೂ ಅಭಿವೃದ್ಧಿ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸೆ.13ರಂದು ತಾಲೂಕಿನ ರಾಮತ್ನಾಳ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ, ರಾಗಲಪರ್ವಿ ಗ್ರಾಮದಲ್ಲಿ ಆರ್‌ಎಂಎಸ್ ಯೋಜನೆಯಡಿ ರು. 3 ಕೋಟಿ ವೆಚ್ಚದಲ್ಲಿ ಗ್ರಾಪಂ ಕಾರ್ಯಾಲಯದ ಶಂಕುಸ್ಥಾಪನೆ, ಗಾಂಧೀನಗರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಡಿಗಲ್ಲು ಸಮಾರಂಭಗಳನ್ನು ಏರ್ಪಡಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸುವರು ಎಂದು ಹೇಳಿದರು.
ಜಿಪಂ ಎಇಇ ಬಿ.ಆರ್. ಗೌಡರ, ಕ್ರೀಡಾಧಿಕಾರಿ ಎನ್.ಬಿ. ಕರಂಡಿ, ಯುವಜನಾ ಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಗದ್ದೆಪ್ಪ, ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ, ಪುರಸಭೆ ಮಾಜಿ ಸದಸ್ಯ ಶಿವಕುಮಾರ ಜವಳಿ, ಶಿಕ್ಷಕ ಎಚ್.ಎಫ್. ಮಸ್ಕಿ, ಅಮರೇಶ, ವಿಠಲ, ಶ್ರೀನಿವಾಸ, ಹಾತೀಫ್ ಅಲಿ, ಎಸ್.ಎಸ್. ಹಿರೇಮಠ, ಎಂ.ಎಂ. ಸುಣಗಾರ ಮತ್ತಿತರಿದ್ದರು.