ಆಸರೆ ಕಾಲನಿ ಸೌಲಭ್ಯಕ್ಕೆ ಒತ್ತಾಯ
ರಾಯಚೂರು: ಪ್ರವಾಹ ಪೀಡಿತ ರಘುನಾಥನಹಳ್ಳಿಯ ಆಸರೆ ಕಾಲನಿಗೆ ಕುಡಿಯುವ ನೀರು ಒದಗಿಸುವಂತೆ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಒತ್ತಾಯಿಸಿದೆ.
ಈ ಕುರಿತು ಇತ್ತೀಚೆಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ರಘುನಾಥನ ಹಳ್ಳಿಯನ್ನು 2009ರ ಪ್ರವಾಹದ ನಂತರದಲ್ಲಿ ಆಸರೆ ಕಾಲನಿಗೆ ಸ್ಥಳಾಂತರಿಸಲಾಗಿದೆ. ಆಸರೆ ಗ್ರಾಮಕ್ಕೆ ಸಣ್ಣ ನೀರಾವರಿ ಯೋಜನೆ ಅಡಿ 18 ಲಕ್ಷ ವೆಚ್ಚದ ಕೆರೆ ನಿರ್ಮಿಸಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಯೋಜಿಸಲಾಗಿತ್ತು.
ಕೆರೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದರೂ ಇದುವರೆಗೆ ಆಸರೆ ಗ್ರಾಮಕ್ಕೆ ಕುಡಿಯುವ ನೀರು ದೊರೆಯುತ್ತಿಲ್ಲ. ಸಂಬಂಧಿಸಿ ಇಲಾಖೆಯ ಕಳಪೆ ಕಾಮಗಾರಿಯ ಫಲವಾಗಿ ಆಸರೆ ನಿವಾಸಿಗಳು ನೀರಿಗಾಗಿ ಅಲೆದಾಡುವಂತಾಗಿದೆ. ಕಾರಣ ಜಿಲ್ಲಾಡಳಿತ ಕೂಡಲೇ ಆಸರೆ ಕಾಲನಿ ನಿವಾಸಿಗಳಿಗೆ ಸಮರ್ಪಕ ನೀರೊದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಆಸರೆ ಕಾಲನಿಗೆ ಸಂಪರ್ಕ ರಸ್ತೆ, ಚರಂಡಿ ಸೌಲಭ್ಯ, ಶೌಚಾಲಯ, ಕಿಟಕಿ, ಬಾಗಿಲು ದುರಸ್ತಿಗೊಳಿಸಬೇಕು. ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಮನೆಗಳ ಸುತ್ತ ಬೆಳೆದಿರುವ ಮುಳ್ಳಿನ ಗಿಡಕಂಟೆಗಳನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದರು. ಈ ವೇಳೆ ಸಂಘದ ಪ್ರಮುಖರಾದ ಪರಪ್ಪ, ರಾಮಣ್ಣ ಸೇರಿ ಅನೇಕರಿದ್ದರು.