ಸರ್ವಧರ್ಮ ಸಮನ್ವಯತೆ ಮೂಡಿಸಿ: ಇಬ್ರಾಹಿಂ ಸಲಹೆ
ಕನ್ನಡಪ್ರಭ ವಾರ್ತೆ ರಾಯಚೂರು ಸೆ.8
ದೇಶದಲ್ಲಿ ಸರ್ವಧರ್ಮ ಸಮನ್ವಯಕ್ಕೆ ಕಲುಷಿತ ರಾಜಕೀಯ ವ್ಯವಸ್ಥೆ ಧಕ್ಕೆ ತಂದಿದೆ. ಇಂಥ ಅವ್ಯವಸ್ಥೆ ಸರಿಪಡಿಸಿ ಸರ್ವಧರ್ಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಗೌರವ ಭಾವನೆ ಮೂಡಿಸುವ ಅವಶ್ಯಕತೆಯಿದೆ ಎಂದು ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಹೇಳಿದರು.
ನಗರದ ರಂಗಮಂದಿರದಲ್ಲಿ ಭಾನುವಾರ ಕಲಾ ಸಂಕುಲ ಸಂಸ್ಥೆಯಿಂದ ಆಯೋಜಿಸಿದ್ದ ಗುಲ್ಬರ್ಗ ವಿಭಾಗ ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿ, ರಾಜಕೀಯ ವ್ಯಕ್ತಿಗಳು ಧರ್ಮ, ಜಾತಿ ಹೆಸರಿನಲ್ಲಿ ಒಡೆದು ಆಳುವ ಪರಿಪಾಠ ಹೆಚ್ಚಾಗಿದೆ. ಜಾತಿ ಓಲೈಕೆಯ ರಾಜಕಾರಣದಿಂದಾಗಿ ಸಾಮಾಜಿಕ ವ್ಯವಸ್ಥೆಗೆ ಹಾನಿಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಪುಸ್ತಕಮನೆ ಹರಿಹರಪ್ರಿಯ, ಶಿಕ್ಷಕರು ಮಕ್ಕಳಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರಲ್ಲಿದ್ದಂಥ ಆದರ್ಶಗಳನ್ನು ಬಿತ್ತುವ ಕಾರ್ಯ ಮಾಡಬೇಕು. ಜೀವನದ ಮೌಲ್ಯಗಳನ್ನು ಮೂಡಿಸುವುದು ಅವಶ್ಯಕ ಎಂದರು.
ವೈಜ್ಞಾನಿಕದ ಸಾಧಕ- ಬಾಧಕ ತಿಳಿಸಿ: ಜಾಗತೀಕರಣ, ಉದಾರೀಕರಣದ ನೆಪದಲ್ಲಿ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಅನೇಕ ಸಾಧನಗಳು ದೇಶದಲ್ಲಿ ಲಭ್ಯವಿವೆ. ಕಂಪ್ಯೂಟರ್ ಮತ್ತಿತರೆ ಉಪಕರಣಗಳ ಸಾಧಕ ಬಾಧಕಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕಿದೆ. ವೈಜ್ಞಾನಿಕ ಪ್ರಗತಿಯಿಂದ ಲಾಭ ನಷ್ಟವೂ ಇದೆ ಎಂಬುದನ್ನು ಮನವರಿಕೆ ಮಾಡಿಕೊಡುವ ಕಾರ್ಯ ಶಿಕ್ಷಕರು ಮಾಡಲೆಂದು ಸಲಹೆ ನೀಡಿದರು.
ಮಕ್ಕಳಲ್ಲಿ ಅಧ್ಯಯನಕ್ಕೆ ಹೆಚ್ಚಿನ ಆಸಕ್ತಿ ಮೂಡಿಸುವ ಮೂಲಕ ಕನ್ನಡ ಕೃತಿಗಳನ್ನು ಓದುವ ಹವ್ಯಾಸ ವ್ಯಕ್ತವಾಗುವಂತೆ ಗಮನ ಸೆಳೆಯಬೇಕು. ನಿರಂತರ ಅಧ್ಯಯನ, ಪರಿಶ್ರಮದಿಂದಾಗುವ ಲಾಭಗಳ ತಿಳಿ ಹೇಳುವ ಕಾರ್ಯ ಶಿಕ್ಷಕರು ಮಾಡುವಂತೆ ಕರೆ ನೀಡಿದರು.
ಶಾಸಕರಾದ ಡಾ. ಶಿವರಾಜ್ ಪಾಟೀಲ್, ತಿಪ್ಪರಾಜು ಹವಾಲ್ದಾರ್, ವೆಂಕಟೇಶ್ ನಾಯಕ್, ನಗರಸಭೆ ಸದಸ್ಯರಾದ ಪವನಕುಮಾರ್, ಯಲ್ಲಪ್ಪ, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಅಯ್ಯಪ್ಪ ತುಕ್ಕಾಯಿ, ರವೀಂದ್ರ ಜಲ್ದಾರ್ ಮತ್ತಿತರರು ಇದ್ದರು.
ಪ್ರಶಸ್ತಿ ಪ್ರದಾನ: ಈ ವೇಳೆ ಅನೇಕರಿಗೆ ಗುಲ್ಬರ್ಗ ವಿಭಾಗ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ವಿವಿಧೆಡೆಯಿಂದ ನೂರಾರು ಸಂಖ್ಯೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.