ಉತ್ತಮ ಫಸಲಿನ ಕನಸೀಗ ನುಚ್ಚುನೂರು
ವಿಶೇಷ ವರದಿ
ರಾಯಚೂರು: ಕಳೆದೆರಡು ವರ್ಷಗಳ ಭೀಕರ ಬರದಿಂದ ತತ್ತರಿಸಿದ್ದ ರೈತರಿಗೆ ಪ್ರಸಕ್ತ ವರ್ಷಾರಂಭದಲ್ಲಿ ಸುರಿದ ಸಮರ್ಪಕ ಮಳೆ ಸಂತಸ ತಂದಿತ್ತು. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ರೈತರಲ್ಲಿ ಬೆಳೆ ಹಾನಿಯ ಭೀತಿ ಮೂಡಿದೆ. ಬೆಳೆ ಕೈಗೆ ಬರುವ ಹೊತ್ತಿಗೆ ಸುರಿಯುತ್ತಿರುವ ಭಾರೀ ಮಳೆಗೆ ಬೆಳೆ ಹಾಳಾಗುತ್ತಿರುವುದು ರೈತರ ಆತಂಕ ಹೆಚ್ಚಿಸಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ರಾಯಚೂರು ನಗರ ಸೇರಿದಂತೆ ಜಿಲ್ಲಾದ್ಯಂತ ದಿನವೂ ರಾತ್ರಿಯಾಗುತ್ತಿದ್ದಂತೆಯೇ ಧಾರಾಕಾರ ಮಳೆ ಸುರಿಯುತ್ತಿದ್ದು, 2009ರ ಪ್ರವಾಹ ಪರಿಸ್ಥಿತಿಯ ಕರಾಳ ನೆನಪು ರೈತರಲ್ಲಿ ಉಂಟು ಮಾಡಿದೆ. ದಿನವಿಡೀ ಬಿರುಬಿಸಿಲಿನ ವಾತಾವರಣವಾದರೆ ರಾತ್ರಿಯಾಗುತ್ತಿದ್ದಂತೆಯೇ ಧಾರಾಕಾರ ಮಳೆ ಸುರಿಯುತ್ತಿರುವುದು ರೈತರೂ ಸೇರಿದಂತೆ ಜಿಲ್ಲೆಯ ಜನತೆಯಲ್ಲಿ ಆತಂಕ ಮೂಡಿಸಿದೆ.
ಧಾರಾಕಾರ ಮಳೆ: ಕಳೆದ ಕೆಲ ದಿನಗಳಿಂದ ಜಿಲ್ಲೆಯ ಬಹುತೇಕ ಎಲ್ಲೆಡೆ ಸುರಿಯುತ್ತಿರುವ ಮಳೆಯು ಹತ್ತಿ, ಸೂರ್ಯಕಾಂತಿ ಸೇರಿ ತರಕಾರಿ ಬೆಳೆಗಳಿಗೆ ಭಾರೀ ಹಾನಿಯುಂಟು ಮಾಡಿದೆ. ರಾಯಚೂರು ತಾಲೂಕಿನ ಗ್ರಾಮಗಳಾದ ಗುರ್ಜಾಪುರ,ಅರಷಿಣಗಿ, ಮೀರಾಪೂರ, ಕಡಗಂದೊಡ್ಡಿ, ಚಂದ್ರಬಂಡಾ ಮತ್ತಿತರೆಡೆ ರೈತರು ಹತ್ತಿ, ಸೂರ್ಯಕಾಂತಿ, ಟೊಮೆಟೋ, ಹೂಕೋಸು ಸೇರಿ ವಿವಿಧ ಬೆಳೆದಿದ್ದು, ಈ ಬೆಳೆ ಕೈಗೆ ಬರುವ ಹೊತ್ತಿಗೆ ಧಾರಾಕಾರ ಮಳೆಯಾಗುತ್ತಿದೆ.
ಇದರಿಂದಾಗಿ ಈಗಾಗಲೇ ಮೀರಾಪುರ ಸುತ್ತಲಿನ ಸುಮಾರು 800 ಎಕರೆ ಪ್ರದೇಶದಲ್ಲಿ ಬೆಳೆದು ನಿಂತ ಹತ್ತಿ ಹಾಗೂ ಸೂರ್ಯಕಾಂತಿಗೆ ಭಾರೀ ಹಾನಿಯಾಗಿದೆ. ಹತ್ತಿ ಬೆಳೆಯ ಹೂ ಮತ್ತು ಕಾಯಿ ಮಳೆಯ ಹೊಡೆತಕ್ಕೆ ಸಿಲುಕಿ ನೆಲಕ್ಕುರುಳಿವೆ. ಅದೇ ರೀತಿ ಸೂರ್ಯಕಾಂತಿ ಕಾಳುಕಟ್ಟಿದ್ದು, ಸೂರ್ಯಕಾಂತಿಯ ಹೂವು ನೆಲಕ್ಕೊರಗಿದ್ದು, ಮಳೆಯ ನೀರು ಹೊಲದಲ್ಲಿ ನಿಂತಿದ್ದರಿಂದ ನೀರಿನಲ್ಲಿ ಮುಳುಗಿ ನಷ್ಟದ ಭೀತಿ ತಂದಿದೆ.
ಬೆಳೆ ಕೊಳೆಯುವ ಭೀತಿ: ಇನ್ನು ತಾಲೂಕಿನ ಕಡಗಂದೊಡ್ಡಿ, ಚಂದ್ರಬಂಡಾ ಮತ್ತಿತರೆ ಪ್ರದೇಶದಲ್ಲಿ ಉತ್ತಮ ಫಸಲಿನ ಹಾಗೂ ಸಮರ್ಪಕ ಬೆಲೆಯ ನಿರೀಕ್ಷೆಯಲ್ಲಿದ್ದ ಹೂಕೋಸು, ಟೊಮೆಟೋ, ಈರುಳ್ಳಿ ಬೆಳೆಗಾರರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಧಾರಾಕಾರ ಮಳೆಗೆ ಹೂಕೋಸು ಹೂವು ಬಿಡುವ ಹಂತದಲ್ಲಿಯೇ ಬೆಳೆ ಹಾನಿಗೀಡಾದರೆ, ಈರುಳ್ಳಿ ಬೆಳೆದ ಹೊಲಗಳಲ್ಲಿ ನೀರು ನಿಂತಿದ್ದರಿಂದ ಕೊಳೆತು ಹೋಗುವ ಸಾಧ್ಯತೆಯಿದೆ.
ಈರುಳ್ಳಿ ರೈತರ ಗೋಳು: ಈ ಕುರಿತು “OÚ«ÚsÚ®Úúڒ¥æàM¦Væ ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ರೈತರು ಈರುಳ್ಳಿಗೆ ಒಳ್ಳೆಯ ಬೆಲೆ ಮಾರುಕಟ್ಟೆಯಲ್ಲಿದೆ ಎಂದು ನಾಟಿ ಮಾಡಿದ್ದರು. ಆದರೆ ಸದ್ಯದ ಮಳೆಯಿಂದಾಗಿ ಈರುಳ್ಳಿ ಕೊಳೆಯುವ ಭೀತಿಯಿದೆ. ಈ ಹಿನ್ನೆಲೆಯಲ್ಲಿ ಈರುಳ್ಳಿ ನೆಲದಿಂದ ಕಿತ್ತು ಒಣಗಿಸುವ ಕಾರ್ಯದಲ್ಲಿದ್ದಾರೆ. ಹೊಲಗಳಲ್ಲಿ ನೀರು ಸಂಗ್ರಹವಾಗಿರುವುದು ಹೊಲಗಳಿಗೆ ತೆರಳದಂತೆ ಮಾಡಿದೆ. ಹೀಗಾಗಿ ಬೆಳೆ ಹಾನಿ ನಿಶ್ಚಿತ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ತಾಲೂಕಿನ ವಿವಿಧೆಡೆ ರೈತರು ಬೆಳೆದಿದ್ದ ಟೊಮೆಟೋ ಬೆಳೆಯು ಮಳೆಯ ಹೊಡೆತಕ್ಕೆ ಸಿಲುಕಿ ಹಾಳಾಗಿದೆ. ಭರ್ಜರಿ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ವರ್ಷಧಾರೆಯಿಂದ ನಷ್ಟದ ಹೊರೆ ಹೆಚ್ಚುವ ಲಕ್ಷಣ ಸ್ಪಷ್ಟವಾಗಿದೆ. ಕಳೆದೆರಡು ವರ್ಷದ ಭೀಕರ ಬರದಿಂದ ತತ್ತರಿಸಿದ್ದ ರೈತರು ಪ್ರಸಕ್ತ ವರ್ಷವಾದರೂ ಲಾಭ ಕಾಣುವ ಕನಸು ನುಚ್ಚುನೂರಾಗಿದೆ.
ಪರಿಹಾರದ ಭರವಸೆ: ಈ ಕುರಿತು “OÚ«ÚsÚ®ÚúڒOæQ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ಮಳೆಯ ಹಾನಿಯ ಅಂದಾಜು ಕಾರ್ಯ ಆರಂಭಗೊಂಡಿದೆ. ಸಮೀಕ್ಷೆಗೆ ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದು, ಸರ್ಕಾರಕ್ಕೆ ಈ ಬಗ್ಗೆ ವರದಿ ಸಲ್ಲಿಸಿ ಪರಿಹಾರಕ್ಕೆ ಮನವಿ ಮಾಡಲಾಗುತ್ತದೆ ಎಂದಿದ್ದಾರೆ.