ವರ್ಗಾವಣೆ ನೀತಿಗೆ ತಿದ್ದುಪಡಿ ತರಲು ನಮೋಶಿ ಒತ್ತಾಯ
ಸಿಂಧನೂರು: ಸರ್ಕಾರ ವರ್ಗಾವಣೆ ನೀತಿಗೆ ಕೂಡಲೇ ತಿದ್ದುಪಡಿ ತರಬೇಕೆಂದು ಮಾಜಿ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಒತ್ತಾಯಿಸಿದರು.
ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಕೆಪಿಎಸ್ಸಿ ನೇಮಕಾತಿಯ ಹಗರಣಗಳು, ಸರ್ಕಾರದ ವರ್ಗಾವಣೆ ಹಗರಣಗಳಿಂದಾಗಿ ಜನತೆ ರೋಸಿ ಹೋಗಿದ್ದಾರೆ. ಸರ್ಕಾರ ವರ್ಗಾವಣೆ ನೀತಿಗೆ ತುರ್ತಾಗಿ ತಿದ್ದುಪಡಿಯನ್ನು ತರಬೇಕು. ಇಲ್ಲದಿದ್ದರೆ ಅಮಾಯಕರು ಬಲಿಪಶುವಾಗುತ್ತಾರೆ ಎಂದರು.
ತಾವು ಸಿಂಧನೂರು ತಾಲೂಕಿನಲ್ಲಿ ಬುಧವಾರ ಅನೇಕ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಉಪನ್ಯಾಸಕರ ಕುಂದು ಕೊರತೆಗಳನ್ನು ವಿಚಾರಣೆ ಮಾಡಿರುವುದಾಗಿ ಹೇಳಿದ ನಮೋಶಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಪದವಿ ಕಾಲೇಜುಗಳನ್ನು ಹೆಚ್ಚು ಮಂಜೂರಾತಿ ನೀಡಿತು. ಆದರೆ ಕಾಂಗ್ರೆಸ್ ಸರ್ಕಾರ ಆ ಕಾಲೇಜುಗಳಿಗೆ ಉಪನ್ಯಾಸಕರನ್ನು ನೇಮಕ ಮಾಡಲು ಮೀನಮೇಷ ಮಾಡುತ್ತಿದೆ. ಶೇ.80 ರಷ್ಟು ಅತಿಥಿ ಉಪನ್ಯಾಸಕರೆ ವಿವಿಧ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ ಅವರ ವೇತನದಲ್ಲೂ ತಾರತಮ್ಯ ನೀತಿ ಅನುಸರಿಸುತ್ತಿದೆ. ಯುಜಿಸಿಗೆ ಅರ್ಹರಾದ ಉಪನ್ಯಾಸಕರಿಗೆ 10 ಸಾವಿರ ಮಾಸಿಕ ಸಂಬಳ, ಸ್ನಾತಕೋತ್ತರ ಪದವಿ ಪಡೆದು ಎಂ.ಫಿಲ್. ಮಾಡಿಕೊಂಡವರಿಗೆ 8 ಸಾವಿರ ಮಾಸಿಕ ಸಂಬಳ ನೀಡುತ್ತಿದೆ.
ಈ ತಾರತಮ್ಯ ಸರಿಯಲ್ಲ. ಆಂಧ್ರಪ್ರದೇಶದಲ್ಲಿ ಅತಿಥಿ ಉಪನ್ಯಾಸಕರಿಗೆ ರು. 21 ಸಾವಿರ ಮಾಸಿಕ ಸಂಬಳ ನೀಡಲಾಗುತ್ತಿದೆ ಎಂದು ಹೇಳಿದರು.
ಸರ್ಕಾರ ಖಾಲಿ ಇರುವ 2800 ಉಪನ್ಯಾಸಕರ ಹುದ್ದೆಗಳನ್ನು ಕೂಡಲೇ ನೇಮಕ ಮಾಡಿಕೊಳ್ಳಬೇಕು. ಅತಿಥಿ ಉಪನ್ಯಾಸಕರಿಗೆ ಕಳೆದ ವರ್ಷದ 3 ತಿಂಗಳ ಬಾಕಿ ವೇತನವನ್ನು ಪಾವತಿಸಬೇಕು. ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ ಅವರ ಸೇವೆಯನ್ನು ಗಣನೆಗೆ ತೆಗೆದುಕೊಂಡು ನೇಮಕಾತಿ ಮಾಡಿಕೊಳ್ಳಬೇಕು. ನೇಮಕಾತಿಯಲ್ಲಿ ವಯಸ್ಸಿನ ನಿರ್ಭಂದನೆಯನ್ನು 40 ವಯಸ್ಸಿನವರಿಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.