ಅಪರಾಧ ತಡೆಗೆ ಜಾಗೃತಿ ಸಭೆ ಯಶಸ್ವಿ
ರಾಯಚೂರು: ನಗರದ ಮಾರ್ಕೆಟ್ ಯಾರ್ಡ್ ಪ್ರದೇಶದ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಗಳ ಅಪರಾಧ ತಡೆ ಹಿನ್ನೆಲೆಯ ಸಭೆಯನ್ನು ಕರೆಯಲಾಗಿತ್ತು. ಕಳವು, ದರೋಡೆ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಅಂಥ ಘಟನೆಗಳು ಮರುಕಳಿಸದಂತೆ ತಡೆಯುವ ನಿಟ್ಟಿನಲ್ಲಿ ಜನತೆಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಪಿಎಸ್ಸೈ ಬೇಬಿ ವಾಲಿಕಾರ್, ಅಪರಿಚಿತರನ್ನು ಮನೆಯೊಳಗೆ ಕರೆದುಕೊಳ್ಳಬಾರದು. ಪರಸ್ಥಳಕ್ಕೆ ತೆರಳುವ ಮೊದಲು ಆಯಾ ಪ್ರದೇಶದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.ಈ ಸಭೆಯಲ್ಲಿ ಸಿಪಿಐ ಪಂಪನಗೌಡ ಸೇರಿ ಪೊಲೀಸ್ ಸಿಬ್ಬಂದಿ ಮತ್ತು ಜನತೆ ಪಾಲ್ಗೊಂಡಿದ್ದರು.
20ರಂದು ಡಿಸಿ ಕಚೇರಿ ಮುಂದೆ ಪ್ರತಿಭಟನೆ
ಲಿಂಗಸ್ಗೂರು: ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ಸಂಘಟನೆ ನೇತೃತ್ವದಲ್ಲಿ ಸೆ. 20ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಕ್ಷಾ ಖಾದ್ರಿ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆ ಆಧಾರದ ಮತ್ತು ಅರೆ ಸರಕಾರಿ ವಿಭಾಗದ ಕಾರ್ಮಿಕರಿಗೆ ಮಾಸಿಕ ಕನಿಷ್ಠ ರು. 10 ಸಾವಿರ ವೇತನ ನಿಗದಿಗೊಳಿಸಬೇಕು. ಗುತ್ತಿಗೆ, ಗೌರವಧನ, ಪ್ರೋತ್ಸಾಹಧನ ಆಧಾರದಲ್ಲಿ ದುಡಿಸಿಕೊಳ್ಳುತ್ತಿರುವುದನ್ನು ಸ್ಥಗಿತಗೊಳಿ 10 ವರ್ಷ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿದ ಎಲ್ಲ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಬೆಲೆ ಏರಿಕೆ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು. ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.ಕಾರ್ಮಿಕರಿಗೆ ಖಾತ್ರಿ ಪಿಂಚಣಿ ಜಾರಿ ಮಾಡಬೇಕು. ಎಪಿಎಲ್, ಬಿಪಿಎಲ್ ಯೋಜನೆ ಕೈಬಿಟ್ಟು ಎಲ್ಲ ಕುಟುಂಬಗಳಿಗೆ ರು. 1ಗೆ ಕೆಜಿಯಂತೆ 35 ಕೆಜಿ ಅಕ್ಕಿ ವಿತರಬೇಕು ಸೇರಿದಂತೆ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಗುವುದೆಂದು ಅವರು ತಿಳಿಸಿದರು. ಸಿಐಟಿಯುನ ಎಂ.ಸಿ.ಲಿಂಗಪ್ಪ, ಹಮಾಲಿ ಫೆಡರೇಷನ್ನ ಶಿವಪ್ಪ, ಬಿಸಿಯೂಟ ನೌಕರರ ಸಂಘದ ಯಲ್ಲಮ್ಮ, ಗ್ರಾಪಂ ನೌಕರರ ಸಂಘದ ಶಿವರೆಡ್ಡಿ ಗೌಡೂರು ಸೇರಿದಂತೆ ಇದ್ದರು.
ಸಮಾರೋಪ
ರಾಯಚೂರು: ನಗರದ ಹೇರೂರು ಚಂದ್ರರಾಯಗೌಡ ಮಲ್ಹಾರ್ ಸಿದ್ದಪ್ಪಗೌಡ ಕರೆಡ್ಡಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ರೂಢಿಪಾಠಗಳ ಸಮಾರೋಪ ಸಮಾರಂಭ ಆಯೋಜಿಸಲಾಗಿತ್ತು. ಅಧ್ಯಕ್ಷತೆಯನ್ನು ರಾಮಕೃಷ್ಣ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಈರನಗೌಡ ಪಾಟೀಲ್, ಕೆ.ಉತ್ತಪ್ಪ, ಮಂಜುನಾಥ್ ಪಾಟೀಲ್ ವಟಗಲ್, ಪ್ರೌಢಶಾಲೆ ಸಹಶಿಕ್ಷಕ ಐ.ಬಿ. ಸಿಂಪಗೇರಿ ಸೇರಿ ಬೋಧಕ ವರ್ಗ ಪಾಲ್ಗೊಂಡಿದ್ದರು.
ಆತ್ಮಹತ್ಯೆಗೆ ಯತ್ನ; ನಾಗರಿಕರಿಂದ ರಕ್ಷಣೆ
ರಾಯಚೂರು: ತಾಲೂಕಿನ ಶಕ್ತಿನಗರದ ಬಳಿ ಶುಕ್ರವಾರ ಬೆಳಗ್ಗೆ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಅಣ್ಣ ತಂಗಿಯನ್ನು ರಕ್ಷಿಸಿದ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದವರನ್ನು ಯದ್ಲಾಪುರ ಗ್ರಾಮದ ಮೌನೇಶ್ ಮತ್ತು ಗೌರಮ್ಮ ಎಂದು ಗುರ್ತಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಇವರು ಕೃಷ್ಣಾ ನದಿಯ ಸೇತುವೆ ಮೇಲಿನಿಂದ ನದಿಗೆ ಹಾರಿದ್ದು, ಇದನ್ನು ಕಂಡ ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ. ಅವರನ್ನು ಆರ್ ಟಿಪಿಎಸ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮೋದಿ ಆಯ್ಕೆ; ಸಂಭ್ರಮಾಚರಣೆ
ಮಸ್ಕಿ: ಬಿಜೆಪಿಯ ಸಂಸದೀಯ ಮಂಡಳಿಯಲ್ಲಿ ಬಿಜೆಪಿಯ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಿದ್ದಕ್ಕೆ ಪಟ್ಟಣದಲ್ಲಿ ಶುಕ್ರವಾರ ಸಂಜೆ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಿಸಿದರು. ಪಟ್ಟಣದ ಕನಕವೃತ್ತದ ಹತ್ತಿರ ಕಾರ್ಯಕರ್ತರು ಜಮಾಯಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ನರೇಂದ್ರ ಮೋದಿಯವರ ಪರ ಘೋಷಣೆ ಕೂಗಿದರು. ಮಸ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂಗಮೇಶ ಹತ್ತಿಗುಡ್ಡ, ಪ್ರಧಾನ ಕಾರ್ಯದರ್ಶಿ ಕೆ.ಶರಣಪ್ಪ ವಕೀಲ, ಆದಪ್ಪ ಮೇದಾರ, ಯುವ ಮೋರ್ಚಾ ಅಧ್ಯಕ್ಷ ಶಿವಪುತ್ರಪ್ಪ ವಕೀಲರು, ಪ್ರಾಣೇಶ ವಕೀಲರು, ವೀರಣ್ಣ ವಕೀಲ, ಶರಣಪ್ಪ ನೀಡಿಗೋಳ, ವೀರನಗೌಡ ನೀಡಿಗೋಳ ಸೇರಿ ಅನೇಕರಿದ್ದರು.
ಮೀನು ಸಾಕಾಣಿಕೆ ಕ್ಷೇತ್ರೋತ್ಸವ ಇಂದು
ರಾಯಚೂರು: ಇಲ್ಲಿನ ರಾಯಚೂರು ಕೃಷಿ ವಿವಿ, ಕೃಷಿ ಸಂಶೋಧನಾ ಕೇಂದ್ರ ಧಡೇಸ್ಗೂರು ಹಾಗೂ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಹೈದರಾಬಾದ್ ಇವರ ಸಂಯುಕ್ತಾಶ್ರಯದಲ್ಲಿ ಸಿಂಧನೂರು ತಾಲೂಕಿನ ಧಡೇಸ್ಗೂರು ಗ್ರಾಮದ ಕೃಷಿ ಸಂಶೋಧನಾ ಕೇಂದ್ರದಲ್ಲಿ ಸೆ.14ರಂದು ಪಂಜರದಲ್ಲಿ ಮೀನು ಮರಿ ಸಾಕಾಣಿಕೆ ಕ್ಷೇತ್ರೋತ್ಸವ ಆಯೋಜಿಸಲಾಗಿದೆ. ಬೆಳಗ್ಗೆ 11ಕ್ಕೆ ಸಿಂಧನೂರು ಶಾಸಕ ಬಾದರ್ಲಿ ಹಂಪನಗೌಡ ಕಾರ್ಯಕ್ರಮ ಉದ್ಘಾಟಿಸುವರು. ಕೃಷಿ ವಿವಿ ಕುಲಪತಿ ಡಾ. ಬಿ.ವಿ. ಪಾಟೀಲ್ ಅಧ್ಯಕ್ಷತೆ ವಹಿಸುವರು. ವಿವಿ ಸಂಶೋಧನಾ ನಿರ್ದೇಶಕ ಡಾ. ಬಿ.ಎಸ್. ಜನಗೌಡರ್, ವಿಸ್ತರಣಾ ನಿರ್ದೇಶಕ ಡಾ. ಕೆ.ಪಿ. ವಿಶ್ವನಾಥ, ಸಹ ಸಂಶೋಧನಾ ನಿರ್ದೇಶಕ ಡಾ. ಐ.ಶಂಕರಗೌಡ ಪಾಲ್ಗೊಳ್ಳಲಿದ್ದಾರೆಂದು ವಿವಿ ಪ್ರಕಟಣೆ ತಿಳಿಸಿದೆ.
ವರ್ಗಾವಣೆ ರದ್ದು
ರಾಯಚೂರು: ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹೆಬೂಬ್ ಪಾಷಾ ಮೂಲಿಮನಿ ಅವರ ವರ್ಗಾವಣೆ ಆದೇಶ ರದ್ದುಗೊಳಿಸಿರುವ ರಾಜ್ಯ ಸರ್ಕಾರ ಅವರು ಈ ಮೊದಲು ಕಾರ್ಯನಿರ್ವಹಿಸುತ್ತಿದ್ದ ಸ್ಥಳದಲ್ಲೇ ಮುಂದುವರಿಯಲು ಸೂಚಿಸಿದೆ ಎಂದು ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಮಲ್ಲಿಕಾರ್ಜುನ್ ಮತ್ತು ಖಜಾಂಚಿ ಲಕ್ಷ್ಮಪ್ಪ ತಿಳಿಸಿದ್ದಾರೆ. ಮೂಲಿಮನಿ ಅವರನ್ನು ಕೊಪ್ಪಳ ಜಿಲ್ಲೆಯ ಯಲಬುರ್ಗಾಕ್ಕೆ ವರ್ಗಾಯಿಸಿ ಕಳೆದ ತಿಂಗಳು ಸರ್ಕಾರ ಆದೇಶಿಸಿತ್ತು. ಅದನ್ನು ಖಂಡಿಸಿ ಆ. 20ರಂದು ಜಿಲ್ಲಾ ಸರ್ಕಾರಿ ನೌಕರರ ಸಂಘ ಪ್ರತಿಭಟನೆ ನಡೆಸಲಾಗಿತ್ತು.