ಉಸ್ತುವಾರಿ ಸಚಿವರಿಂದ ಮಳೆ ಹಾನಿ ಪರಿಶೀಲನೆ
ರಾಯಚೂರು: ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಶುಕ್ರವಾರ ತಾಲೂಕಿನಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಹಾನಿ ಪರಿಶೀಲಿಸಿದರು.
ಈ ವೇಳೆ ಅವರು ಜೆ.ಮಲ್ಲಾಪುರದಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಮನೆ ಕುಸಿದು ಪ್ರಾಣ ಕಳೆದುಕೊಂಡ ನಾಗಪ್ಪ ಕಬ್ಬೇರ್ ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಸರ್ಕಾರದಿಂದ ಮಂಜೂರಾದ ಪರಿಹಾರ 1.50 ಲಕ್ಷ ಮೊತ್ತದ ಚೆಕ್ ಹಸ್ತಾಂತರಿಸಿದರು.
ಆನಂತರ ಗ್ರಾಮಸ್ಥರಿಂದ ಮಳೆಯಿಂದಾದ ಹಾನಿಯ ಬಗ್ಗೆ ಮಾಹಿತಿ ಪಡೆದರು. ಜೇಗರಕಲ್ ಗ್ರಾಮದ ಶಾಲೆಯಲ್ಲಿ 900 ವಿದ್ಯಾರ್ಥಿಗಳಿದ್ದು, ಕೇವಲ 7 ಜನ ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಕೊರತೆಯಾಗಿದೆ ಎಂದು ಗ್ರಾಮದ ಪ್ರಮುಖರು ಸಚಿವರಿಗೆ ದೂರಿದರು.
ಜೇಗರಕಲ್ ಶಾಲೆ ಶಿಕ್ಷಕರ ನೇಮಕಕ್ಕೆ ಒತ್ತಾಯ: ಶಾಲೆಯಿಂದ ಇತ್ತೀಚೆಗೆ ವರ್ಗವಾಗಿ ಹಾಗೂ ನಿಯೋಜನೆ ಮೇರೆಗೆ ತೆರಳಿದ ಶಿಕ್ಷಕರನ್ನು ಮರಳಿ ಜೇಗರಕಲ್ ಶಾಲೆಗೆ ನೇಮಿಸಬೇಕು. ಮಕ್ಕಳಿಗೆ ಅಗತ್ಯ ಶಿಕ್ಷಣ ದೊರೆಯುವಂತೆ ಕೂಡಲೇ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳೊಂದಿಗೆ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಿದರು.
ಅದೇ ರೀತಿ ಜೇಗರಕಲ್ ಗ್ರಾಮದಲ್ಲಿರುವ 30 ಹಾಸಿಗೆ ಸುಸಜ್ಜಿತ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಗ್ರಾಮಸ್ಥರು ಸಚಿವರಿಗೆ ದೂರಿದರು. ಸುಸಜ್ಜಿತ ಆಸ್ಪತ್ರೆ ಮತ್ತು ವಿವಿಧ ಸೌಲಭ್ಯಗಳಿದ್ದರೂ ಇಬ್ಬರು ಮಾತ್ರ ವೈದ್ಯರಿದ್ದಾರೆ. ಅವರೂ ಸಹ ರಾತ್ರಿ ವೇಳೆ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಆಸ್ಪತ್ರೆಯಲ್ಲಿ ಕೇವಲ ನರ್ಸ್ ಗಳೇ ಎಲ್ಲ ತರಹದ ಚಿಕಿತ್ಸೆ ನೀಡುವಂಥ ಸ್ಥಿತಿಯಿದೆ ಎಂದು ಆರೋಪಿಸಿದರು.
ಕ್ರಮ ಕೈಗೊಳ್ಳುವ ಭರವಸೆ: ಈ ಹಿನ್ನೆಲೆಯಲ್ಲಿ ಕೂಡಲೇ ಜೇಗರಕಲ್ ಆಸ್ಪತ್ರೆಗೆ ವೈದ್ಯರನ್ನು ನೇಮಿಸಬೇಕು. ಜನತೆಗೆ ಅಗತ್ಯ ವೈದ್ಯಕೀಯ ಸೇವೆಗಳನ್ನು ಒದಗಿಸುವಂತೆ ಆಗ್ರಹಿಸಿದರು. ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ನಂತರ ಸಚಿವ ಪಾಟೀಲ್ ಇತ್ತೀಚೆಗೆ ಸುರಿದ ಮಳೆಯಿಂದ ಕೊಚ್ಚಿ ಹೋಗಿರುವ ಮೀರಾಪುರ ಗ್ರಾಮದ ಬಳಿಯ ಹಳ್ಳದ ಮೇಲಿನ ಸೇತುವೆ ಸ್ಥಳಕ್ಕೆ ಭೇಟಿ ನೀಡಿ ಮಳೆಯಿಂದಾದ ಬೆಳೆ ಹಾನಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್, ಶಾಸಕ ಪ್ರತಾಪಗೌಡ ಪಾಟೀಲ್, ಜಿಪಂ ಉಪಾಧ್ಯಕ್ಷ ಕೆ.ಶರಣಪ್ಪ, ನಗರಸಭೆ ಮಾಜಿ ಸದಸ್ಯ ಕೆ.ಶಾಂತಪ್ಪ, ಅಮರೇಗೌಡ ಹಂಚಿನಾಳ, ಸಹಾಯಕ ಆಯುಕ್ತೆ ಮಂಜುಶ್ರೀ, ಹೆಚ್ಚುವರಿ ಎಸ್ಪಿ ಅಶೋಕ ಸದಲಗಿ, ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಸೈ ರಮೇಶ್ ಮೇಟಿ ಸೇರಿ ಅನೇಕರಿದ್ದರು.