ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಹೈ-ಕ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ

Vishwanath S
Updated On : 14 Sept 2013, 12:19 pm

ಕನ್ನಡಪ್ರಭ ವಾರ್ತೆ  ಸಿಂಧನೂರು  ಸೆ.13
ಹಿಂದುಳಿದ ಹೈದ್ರಾಬಾದ್ ಕರ್ನಾಟಕ ಪ್ರದೇಶದ ರಾಯಚೂರು ಜಿಲ್ಲೆಯಲ್ಲಿ ರಸ್ತೆಗಳ ಅಭಿವೃದ್ಧಿ ಹಾಗೂ ನೀರಾವರಿ ಯೋಜನೆಗಳ ವಿಸ್ತರಣೆಗೆ ಸರ್ಕಾರ ಬದ್ಧವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಶಾಸಕ ಹಂಪನಗೌಡ ಬಾದರ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಉತ್ಸುಕರಾಗಿದ್ದಾರೆ. ರಸ್ತೆ, ನೀರಾವರಿ ವಿಸ್ತರಣೆ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ ಎಂದರು.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕರೆಸಿ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಸಿಂಧನೂರು ತಾಲೂಕು ವೇಗವಾಗಿ ಬೆಳೆಯುತ್ತಿರುವ ತಾಲೂಕಾಗಿದೆ. ಇಲ್ಲಿ ಕ್ರೀಡಾಂಗಣದ ಅವಶ್ಯಕತೆ ಮನಗಂಡು ಚಾಲನೆ ನೀಡಿಸಿದ್ದಾರೆ. ಅಭಿವೃದ್ಧಿ ಹೊಂದುತ್ತಿರುವ ತಾಲೂಕಿನಲ್ಲಿ ಕ್ರೀಡೆಗಳಲ್ಲಿ ಅತ್ಯುನ್ನತ ಸ್ಥಾನ ತಲುಪಲಿ ಎಂದು ಹೇಳಿದರು.
ಜಿಲ್ಲೆಯಲ್ಲಿ ಮಾದರಿ ಕ್ರೀಡಾಂಗಣ ನಿರ್ಮಾಣ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಕ್ರೀಡೆಗಳು ಮಾನವನ ಅವಿಭಾಜ್ಯ ಅಂಗ. ಕ್ರೀಡೆಗಳಿಗೂ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಸಿಂಧನೂರಿನ ಕ್ರೀಡಾಂಗಣದಲ್ಲಿ ಸಿಂಥೆಟಿಕ್‌ಟ್ರ್ಯಾಕ್ ಹಾಗೂ ಒಳಾಂಗಣ ಕ್ರೀಡಾಂಗಣ ನಿರ್ಮಾಣದ ಗುರಿಯನ್ನು ಹೊಂದಲಾಗಿದೆ. ಯುವಕರಿಂದ ಅತ್ಯುತ್ತಮ ಕ್ರೀಡಾಪಟುಗಳು ಹೊರಹೊಮ್ಮಲಿದ್ದಾರೆ. ಜಿಲ್ಲೆಯಲ್ಲಿಯೇ ಮಾದರಿ ಕ್ರೀಡಾಂಗಣ ನಿರ್ಮಾಣದ ಮಾಡುವುದಾಗಿ ಭರವಸೆ ನೀಡಿದರು.
ಶಾಸಕ ಪ್ರತಾಪಗೌಡ ಪಾಟೀಲ್ ಕ್ರೀಡಾ ಜ್ಯೋತಿ ಸ್ವೀಕರಿಸಿ ನಂತರ ಮಾತನಾಡಿ, ಕ್ರೀಡಾಪಟುಗಳಿಗೆ ಸೋಲು- ಗೆಲವು ಮುಖ್ಯವಲ್ಲ. ಸ್ಪರ್ಧಾತ್ಮಕ ಮನೋಭಾವನೆ ಅಗತ್ಯವಾಗಿದೆ. ಕ್ರೀಡೆಗಳಿಂದ ಸದೃಢ ಆರೋಗ್ಯ ಹಾಗೂ ಮನಸ್ಸು ಹೊಂದಲು ಸಾಧ್ಯ ಎಂದರು.
ಕ್ರೀಡಾ ಧ್ವಜಾರೋಹಣ: ನಗರಸಭಾಧ್ಯಕ್ಷ ಜಾಫರ ಜಾಹಗೀರದಾರ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮೇಶ ಮದ್ಲಾಪುರ, ಸದಸ್ಯರಾದ ಶಿವನಗೌಡ ಎಲೆಕೂಡ್ಲಿಗಿ, ಎಪಿಎಂಸಿ ಅಧ್ಯಕ್ಷ ಸಣ್ಣ ಕರಿಯಪ್ಪ ವಕೀಲರು ಹರೇಟನೂರು, ಉಪಾಧ್ಯಕ್ಷ ರಾಮಣ್ಣ ಹುಡಾ, ತಾಪಂ ಅಧ್ಯಕ್ಷೆ ಬಸಮ್ಮ ಕೊಟ್ರಪ್ಪ, ಉಪಾಧ್ಯಕ್ಷ ನಾಗಪ್ಪ ಗೋಮರ್ಸಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎ.ವಸಂತಕುಮಾರ, ಮುಖಂಡರಾದ ಲಿಂಗರಾಜ ಪಾಟೀಲ್, ಎಂ.ಕಾಳಿಂಗಪ್ಪ, ಎನ್.ಶಿವನಾಗಪ್ಪ, ತಿಮ್ಮಯ್ಯ ನಾಯಕ, ಅಶೋಕ ಭೂಪಾಲ, ಮಲ್ಲನಗೌಡ ಕನ್ನಾರಿ, ಎಸ್.ಪಿ. ಎಂ.ಎನ್. ನಾಗರಾಜ, ಡಿಡಿಪಿಐ ಪರಮೇಶ್ವರ, ಸಹಾಯಕ ಆಯುಕ್ತ ಟಿ.ಯೋಗೇಶ, ಜಿಲ್ಲಾ ಯುವಜನ ಸೇವಾ ಹಾಗೂ ಕ್ರೀಡಾಧಿಕಾರಿ ಆರ್.ಎಸ್. ಕಲಬುರ್ಗಿ, ತಾಪಂ ಇಒ ರಮೇಶ ತಳವಾರ, ಜಿಪಂ ಎಇಇ ಬಿ.ಆರ್. ಗೌಡೂರು ಮತ್ತಿತರರು ಇದ್ದರು.
ಕೆಯುಡಬ್ಲ್ಯೂಎಸ್ ಎಂಜಿನಿಯರ್‌ಗೆ ಸಚಿವ ತರಾಟೆ
ಸಿಂಧನೂರು: ಕಾಮಗಾರಿ ನಿರ್ವಹಣೆಯಲ್ಲಿನ ವಿಳಂಬಕ್ಕೆ ರಾಯಚೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಕೆಯುಡಬ್ಲ್ಯೂಎಸ್‌ಡಿಬಿ) ಕಾರ್ಯನಿರ್ವಾಹಕ ಎಂಜಿನಿಯರ್ ಯೂನಿಸ್‌ಪಾಷಾ ಅವರನ್ನು ಜಿಲ್ಲಾ ಉಸ್ತುವಾರಿ, ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ ಪಾಟೀಲ್ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ನಡೆಯಿತು.
ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆ ನಗರಕ್ಕೆ ಆಗಮಿಸಿದ್ದ ಸಚಿವರನ್ನು ಶಾಸಕ ಹಂಪನಗೌಡ ಬಾದರ್ಲಿ ನಿವಾಸದಲ್ಲಿ ಭೇಟಿಯಾಗಿದ್ದ ಕೆಯುಡಬ್ಲ್ಯೂಎಸ್ ಕಾರ್ಯನಿರ್ವಾಹಕ ಎಂಜಿನಿಯರ್ ಮತ್ತು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರೊಂದಿಗೆ ಚರ್ಚಿಸಿದ ಸಚಿವರು ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿನ 80 ಲಕ್ಷ ವೆಚ್ಚದ ಒಳಚರಂಡಿ ಕಾಮಗಾರಿ 3 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವು ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹಾಲಪ್ಪ ಅವರಿಗೆ ಈ ಕಾಮಗಾರಿಯ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ಯೂನಸ್‌ಪಾಷಾ ಸಚಿವರಿಗೆ ತಿಳಿಸಿದರು.
ಸುಮ್ಮನೆ ಕುಳ್ಳಿರಿಸಿ ಸಂಬಳ ಕೊಡಬೇಕೇ?: ಇದಲ್ಲದೆ ಬೇರೆ ಕೆಲಸ ಏನು ಮಾಡುತ್ತಿದ್ದಾರೆಂದು ಕೇಳಿದ ಸಚಿವರು, ಒಂದು ಕೆಲಸ ಮಾಡಲು ನಿಮಗೆಷ್ಟು ವರ್ಷ ಬೇಕು, ಎರಡು ತಿಂಗಳ ಹಿಂದೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಇನ್ನೂ ಕೆಲಸ ಆರಂಭ ಮಾಡಿಲ್ಲ. ಸರ್ಕಾರ ನಿಮ್ಮನ್ನು ಕುಳ್ಳಿರಿಸಿ ಸಂಬಳ ಕೊಡಬೇಕೇನು ಎಂದು ಪ್ರಶ್ನಿಸಿದ ಅವರು, ತಕ್ಷಣ ಅಮಾನತಿಗೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದರು.
  ಅಧಿಕಾರಿಗಳ ಸಹಾಯಕ್ಕೆ ಬಂದ ಶಾಸಕ ಹಂಪನಗೌಡ ಬಾದರ್ಲಿ ಈಗಾದರೂ ಕೆಲಸ ಪ್ರಾರಂಭ ಮಾಡಿ ಎಂದು ಬುದ್ಧಿಮಾತು ಹೇಳಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎ.ವಸಂತಕುಮಾರ, ನಗರಸಭೆ ಅಧ್ಯಕ್ಷ ಜಾಫರ್ ಜಾಗೀರದಾರ, ತಾಪಂ ಅಧ್ಯಕ್ಷೆ ಬಸಮ್ಮ ಕೊಟ್ರಪ್ಪ, ಜಿಪಂ ಸದಸ್ಯ ಶಿವನಗೌಡ ಎಲೆಕೂಡ್ಲಿಗಿ, ಮುಖಂಡರಾದ ಎನ್.ಶಿವನಾಗಪ್ಪ, ಎಂ.ಕಾಳಿಂಗಪ್ಪ, ಲಿಂಗರಾಜ ಹಂಚಿನಾಳ, ಬಸನಗೌಡ ಬಾದರ್ಲಿ, ಶ್ರೀದೇವಿ ಶ್ರೀನಿವಾಸ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement