ಜಿಲ್ಲೆಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
ಕ.ಪ್ರ. ವಾರ್ತೆ ರಾಯಚೂರು ಸೆ.14
ರಾಜ್ಯದ ವಿವಿಧ 16 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು 2013- 14ನೇ ಸಾಲಿನಿಂದ ರಾಯಚೂರು ಸೇರಿದಂತೆ ಇನ್ನೂ 6 ಜಿಲ್ಲೆಗಳಿಗೆ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೈ.ಕ. ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಕೆ. ಬೂದಪ್ಪಗೌಡ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಕಳೆದ 31 ವರ್ಷಗಳಿಂದ ರಾಜ್ಯದ ವಿವಿಧ ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿದೆ. ಪ್ರಸಕ್ತ ವರ್ಷದಿಂದ ರಾಯಚೂರು ಜಿಲ್ಲೆಯಲ್ಲೂ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ನಿರ್ಧರಿಸಿದ್ದು, ಅದರಂತೆ ಸೆ.18ರಂದು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ.ವೀರೇಂದ್ರ ಹೆಗ್ಗಡೆ ನಗರದಲ್ಲಿ ಯೋಜನೆಗೆ ಚಾಲನೆ ನೀಡಲಿದ್ದಾರೆಂದು ತಿಳಿಸಿದರು.
ಸೆ.18ರಂದು ನಗರದ ರಾಜೇಂದ್ರ ಗಂಜ್ನಲ್ಲಿ ಬೆಳಗ್ಗೆ 10.30ಕ್ಕೆ ಯೋಜನೆಗೆ ಚಾಲನೆ ನೀಡಲಾಗುತ್ತಿದ್ದು, ಸಮಾರಂಭದಲ್ಲಿ ಶಾಸಕರಾದ ಡಾ.ಶಿವರಾಜ್ ಪಾಟೀಲ್, ತಿಪ್ಪರಾಜು ಹವಾಲ್ದಾರ್, ವೆಂಕಟೇಶ ನಾಯಕ ಮತ್ತಿತರರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಸಿಬ್ಬಂದಿ ನೇಮಕ: ಜಿಲ್ಲೆಯಲ್ಲಿ ಈಗಾಗಲೇ ಮೇ ತಿಂಗಳಿನಲ್ಲಿ ಐದು ತಾಲೂಕುಗಳಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಆರಂಭಿಸಿದ್ದು, ಈಗ ಐದು ಜನ ಯೋಜನಾಧಿಕಾರಿಗಳು, ಐದು ಯೋಜನಾ ಕಚೇರಿಗಳು, ಐವರು ಕಚೇರಿ ಪ್ರಬಂಧಕರು, ಐವರು ಕಿರು ಆರ್ಥಿಕ ವ್ಯವಹಾರ ಪ್ರಬಂಧಕರು, 38 ಜನ ಮೇಲ್ವಿಚಾರಕರು, 9 ಜನ ಕೃಷಿ ಮತ್ತು ಹೈನುಗಾರಿಕೆ ಮೇಲ್ವಿಚಾರಕರು, ಐವರು ಜ್ಞಾನವಿಕಾಸ ಸಮನ್ವಯಾಧಿಕಾರಿಗಳು, ಐವರು ಆಂತರಿಕ ಲೆಕ್ಕ ಪರಿಶೋಧಕರು, 20 ಜನ ಕಚೇರಿ ಸಿಬ್ಬಂದಿ ಸೇರಿ ಅನೇಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಯೋಜನೆಯ ವಿವಿಧ ಕಾರ್ಯಗಳಿಗೆ ಒಟ್ಟು 109 ಕಾಯಂ ಮತ್ತು 179 ಜನಸೇವಾ ಪ್ರತಿನಿಧಿಗಳನ್ನು ನೇಮಿಸಲಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರ ಸಂಘಟನೆ, ಮಧ್ಯಮ ವರ್ಗದ ಬಡವರ್ಗದ ಮತ್ತು ಗ್ರಾಮೀಣ ಮಹಿಳೆಯರ ಸಂಘಟನೆ ಹಾಗೂ ಸಬಲೀಕರಣವನ್ನು ಮುಖ್ಯಗುರಿಯಾಗಿಸಿಕೊಂಡು ಮಹಿಳಾ ಸ್ವಸಹಾಯ ಸಂಘಗಳ ರಚನೆ, ಕಿರು ಆರ್ಥಿಕ ವ್ಯವಹಾರ, ಆಧುನಿಕ ಕೃಷಿ ಪದ್ಧತಿಗೆ ಪೂರಕವಾಗಬಲ್ಲ ಅನೇಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿಕೆ ಚಟುವಟಿಕೆ ನಡೆಸಲಾಗುತ್ತದೆ ಎಂದರು.
ವಿವಿಧ ಕಾರ್ಯಕ್ರಮಗಳು: ಸ್ವಉದ್ಯೋಗ ಚಟುವಟಿಕೆ, ಆರೋಗ್ಯ ವಿಮಾ ಕಾರ್ಯಕ್ರಮ ಜಾರಿ, ಪಿಂಚಣಿ, ಕೃಷಿ ಸಂವರ್ಧನೆ, ಸಾಮಾಜಿಕ ಅರಣ್ಯೀಕರಣ, ಜಲಾನಯನ ಅಭಿವೃದ್ಧಿ, ಪರ್ಯಾಯ ಇಂಧನ ವ್ಯವಸ್ಥೆಗಳು, ಜೀವ ವಿಮೆ, ಜನಜಾಗೃತಿ, ಮದ್ಯ ವರ್ಜನ ಶಿಬಿರಗಳು ಸೇರಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರುವ ಕಾರ್ಯವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 14500 ಪ್ರಗತಿ ಬಂಧು ಸ್ವಸಹಾಯ ಸಂಘಗಳ ರಚನೆ, ರು. 145 ಕೋಟಿ ಸಾಲ ವಿತರಣೆ, 14500 ಸಂಘಗಳ ಖಾತೆ ತೆರೆಯುವುದು, 150 ಜ್ಞಾನ ವಿಕಾಸ ಕೇಂದ್ರ ರಚನೆ, 3ಸಾವಿರ ಶೌಚಾಲಯ ನಿರ್ಮಾಣ, 500 ಗೋಬರ್ ಗ್ಯಾಸ್ ಅನಿಲ ಘಟಕಗಳ ಸ್ಥಾಪನೆ, 2 ಸಾವಿರ ರೈತ ಕುಟುಂಬಗಳಲ್ಲಿ ಹೈನುಗಾರಿಕೆ ಮತ್ತು ಪಶುಸಂಗೋಪನೆಗೆ ತೊಡಗಿಸುವುದು, 150 ರೈತ ಕೃಷಿ ತರಬೇತಿಗಳು, 600 ಸೋಲಾರ್ ವಿದ್ಯುದೀಪ ಅಳವಡಿಕೆ ಗುರಿ ಹೊಂದಿದೆ ಎಂದು ಹೇಳಿದರು. ಕೃಷಿಗೆ ಸಂಬಂಧಿಸಿ ಆರು ವಿಚಾರ ಸಂಕಿರಣಗಳು, 1 ಸಾವಿರ ಕುಟುಂಬಗಳಿಗೆ ಸ್ವಉದ್ಯೋಗಕ್ಕಾಗಿ ತರಬೇತಿ ಮತ್ತು ಆರ್ಥಿಕ ವ್ಯವಸ್ಥೆ, 150 ನಿರ್ಗತಿಕರಿಗೆ ಮಾಸಾಶನ ಒದಗಿಸುವುದು, 900 ಕುಟುಂಬಗಳಿಗೆ ಕೃಷಿ ಹಾಗೂ ಇತರೆ ಚಟುವಟಿಕೆಗಳಿಗೆ ನೀರಾವರಿ ವ್ಯವಸ್ಥೆ ಕಲ್ಪಿಸುವ ಉದ್ದೇಶವಿದೆ ಎಂದರು.
ಹೆಗ್ಗಡೆಯವರ ಮೆರವಣಿಗೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಈ ಎಲ್ಲ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಸೆ.18ರಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ.ವೀರೇಂದ್ರ ಹೆಗ್ಗಡೆ ಅವರು ನಗರಕ್ಕೆ ಆಗಮಿಸಲಿದ್ದಾರೆ. ಅಂದು ಬೆಳಗ್ಗೆ 10ಕ್ಕೆ ನಗರದಲ್ಲಿ ಮೆರವಣಿಗೆ ನಡೆಸಿ ನಂತರದಲ್ಲಿ ರಾಜೇಂದ್ರ ಗಂಜ್ನಲ್ಲಿ ನಡೆಯುವ ಸಮಾರಂಭದಲ್ಲಿ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆಂದು ಹೇಳಿದರು.
ಜಿಲ್ಲೆಗೆ ಮೊಟ್ಟ ಮೊದಲ ಬಾರಿಗೆ ಶ್ರೀ ವೀರೇಂದ್ರ ಹೆಗ್ಗಡೆ ಅವರು ಆಗಮಿಸಲಿರುವ ಹಿನ್ನೆಲೆಯಲ್ಲಿ ಸಮಾರಂಭದಲ್ಲಿ ನಗರದ ಎಲ್ಲ ಜನತೆ ಪಾಲ್ಗೊಂಡು ಯಶಸ್ವಿಗೊಳಿಸಲು ಮನವಿ ಮಾಡಿ, ಸುಮಾರು ಐದು ಸಾವಿರ ಜನ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು.
ಈ ಸಂದರ್ಭ ಪ್ರಮುಖರಾದ ಸದಾನಂದ ಪ್ರಭು, ರಾಮಚಂದ್ರ ಪ್ರಭು, ಆರ್. ತಿಮ್ಮಯ್ಯ, ಕಮಲ್ ಕುಮಾರ್, ಜಂಬಣ್ಣ ಯಕ್ಲಾಸಪುರ, ಬಂಡೇಶ ವಲ್ಕಂದಿನ್ನಿ, ಹರವಿ ನಾಗನಗೌಡ ಸೇರಿ ಅನೇಕರಿದ್ದರು.