ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ದೇಶಕ್ಕೆ ಅಭಿವೃದ್ಧಿ ಪಥ ತೋರಿದವರು ಸರ್. ಎಂ.ವಿ.

Vishwanath S
Updated On : 15 Sept 2013, 1:20 am

ದೇಶದ ಅಭಿವೃದ್ಧಿ, ಶಿಸ್ತು, ಪ್ರಾಮಾಣಿಕತೆಗೆ ಹೆಸರಾದ ಸರ್. ಎಂ.ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆಯನ್ನು ಸಾರ್ಥಕವಾಗಿ ಆಚರಿಸುವ ನಿಟ್ಟಿನಲ್ಲಿ ಅವರ ಜನ್ಮದಿನವಾದ ಸೆ.15ರಂದು ಎಂಜಿನೀಯರುಗಳ ದಿನವೆಂದು ಘೋಷಿಸಲಾಗಿದೆ. ಇದು ವಿಭೂತಿ ಪುರುಷನಿಗೆ ಸಂದ ಗೌರವ. ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಬೇಕೆಂಬ ಮಹದಾಸೆ ಹೊಂದಿದ್ದ ಗಾಂಧೀಜಿ ಮತ್ತು ಸರ್. ಎಂ.ವಿಶ್ವೇಶ್ವರಯ್ಯನವರು ಅನ್ಯೋನ್ಯವಾಗಿದ್ದರು. ಕೃಷ್ಣರಾಜಸಾಗರ ಮತ್ತು ಭದ್ರಾವತಿ ಉಕ್ಕಿನ ಕಾರ್ಖಾನೆಗಳು ಕನ್ನಡ ನಾಡಿಗೆ ವಿಶ್ವೇಶ್ವರಯ್ಯನವರು ನೀಡಿದ ಅತ್ಯಂತ ಮಹತ್ವದ ಕೊಡುಗೆಗಳಾಗಿವೆ. ಗಾಂಧೀಜಿ ಎರಡೂ ಸ್ಥಳಗಳಿಗೆ ಭೇಟಿ ನೀಡಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೆ, ದೇಶದಲ್ಲಿ ಗ್ರಾಮೀಣ ಉದ್ಯೋಗಗಳು ಹೇಗಿರಬೇಕು, ಹೇಗೆ ತಲುಪಿಸಬೇಕೆಂಬ ಬಗ್ಗೆ ಕಾರ್ಯ ಯೋಜನೆ ಸಿದ್ಧಪಡಿಸಿದ್ದರು.
ಸಂಭಾವನೆ ಸ್ವೀಕರಿಸಿರಲಿಲ್ಲ: 1937ರಲ್ಲಿ ಒರಿಸ್ಸಾ ಪ್ರಾಂತ್ಯದಲ್ಲಿ ಮಹಾನದಿ ಮತ್ತು ಉಪನದಿಗಳಲ್ಲಿ ಭಾರೀ ಪ್ರವಾಹ ಉಂಟಾಗಿತ್ತು. ಅಸಂಖ್ಯ ಜನರು ಅಸುನೀಗಿದ್ದರು. ಗಾಂಧೀಜಿ ಪ್ರವಾಹ ಪ್ರದೇಶಕ್ಕೆ ಭೇಟಿ ಕೊಟ್ಟು ಇಂತಹ ಅನಾಹುತಗಳಿಂದ ಪಾರಾಗಲು ಹಾಗೂ ತಡೆಯಲು ವಿಶ್ವೇಶ್ವರಯ್ಯನವರಿಂದ ಮಾತ್ರ ಸಾಧ್ಯ ಎಂದು ತಿಳಿದು ಅವರನ್ನು ಕರೆಯಿಸಿ ವಿವರಿಸಿದರು. ಆಗ ತಾಂತ್ರಿಕ ವರದಿ ಸಿದ್ಧಪಡಿಸಿ ಒರಿಸ್ಸಾ ಸರ್ಕಾರಕ್ಕೆ ಕೊಟ್ಟರು. ಅದು ಅನುಷ್ಠಾನವೂ ಆಯಿತು. ಆದರೆ ಒರಿಸ್ಸಾ ಸರ್ಕಾರ ಸಂಭಾವನೆ ಕೊಟ್ಟರೂ ವಿಶ್ವೇಶ್ವರಯ್ಯನವರು ಸ್ವೀಕರಿಸಲಿಲ್ಲ. ಗಾಂಧೀಜಿ ಮೇಲಿನ ಪ್ರೀತಿಯಿಂದ ಕೆಲಸ ಮಾಡಿದ್ದು ಎಂದು ನಿರಾಕರಿಸಿದ್ದರು.
ಭಿನ್ನಾಭಿಪ್ರಾಯವಿದ್ದರೂ ಉತ್ತಮ ಸ್ನೇಹಿತರು: ಗಾಂಧೀಜಿ ವಯಸ್ಸಿನಲ್ಲಿ ವಿಶ್ವೇಶ್ವರಯ್ಯ ಅವರಿಗಿಂತ ಚಿಕ್ಕವರು. ಇಬ್ಬರೂ ದೇಶದ ಕಣ್ಮಣಿಗಳಂತಿದ್ದರು. ಶಿಸ್ತು, ಪ್ರಾಮಾಣಿಕತೆ, ಸುಂದರ ಕನಸುಗಳನ್ನು ಹೊಂದಿದ್ದರು. ಗ್ರಾಮೀಣ ಪ್ರದೇಶಗಳ ಜನರಿಗೆ ಅನುಕೂಲವಾಗಲು ಗೃಹ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳಿಗೆ ಗಾಂಧೀಜಿ ಹೆಚ್ಚು ಒತ್ತು ಕೊಡುತ್ತಿದ್ದರು. ಇದರಿಂದ ಸ್ವಯಂ ಉದ್ಯೋಗದಲ್ಲಿ ತೊಡಗಿದಂತಾಗುತ್ತದೆ ಎಂಬ ಪರಿಕಲ್ಪನೆ ಅವರದ್ದಾಗಿತ್ತು. ಆದರೆ ವಿಶ್ವೇಶ್ವರಯ್ಯನವರು ಅದಕ್ಕೆ ತದ್ವಿರುದ್ಧವಾಗಿದ್ದರು. ಜನರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ದೊರಕಬೇಕಾದರೆ ದೇಶದ ಪ್ರಗತಿಗೆ ಬೃಹತ್ ಕೈಗಾರಿಕೆಗಳ ಅಗತ್ಯವಿದೆ ಎಂದು ವಿಶ್ವೇಶ್ವರಯ್ಯನವರು ಹೇಳುತ್ತಿದ್ದರು. ತಾತ್ವಿಕವಾಗಿ ಇಬ್ಬರಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಅತ್ಯಂತ ಉತ್ತಮ ಸ್ನೇಹಿತರಾಗಿದ್ದರು.
ಅಭಿವೃದ್ಧಿ ಕಾರ್ಯದಲ್ಲಿ ಮೊದಲಿಗರು: ವಿಶ್ವೇಶ್ವರಯ್ಯನವರು ನೀರಾವರಿ ಮತ್ತು ವಿದ್ಯುತ್ ಉತ್ಪಾದನೆಗೆ ಹೆಚ್ಚು ಒತ್ತು ನೀಡಿದ್ದರು. ಕಾವೇರಿ ನೀರು ಮೈಸೂರು, ಮಂಡ್ಯ ಜಿಲ್ಲೆಗಳ ರೈತರಿಗೆ ಉಪಯೋಗವಾಗಲು 1911ರಲ್ಲಿ ಯೋಜನೆ ರೂಪಿಸಿದರು. ಅದರಂತೆ 1931ರಲ್ಲಿ ಕೃಷ್ಣರಾಜಸಾಗರ ಜಲಾಶಯ ಪೂರ್ಣಗೊಳಿಸಿದರು. ಸಿಮೆಂಟು, ಕಬ್ಬಿಣಕ್ಕೆ ಬದಲಾಗಿ ಸುಣ್ಣ ಮತ್ತು ಬೆಲ್ಲ, ಉಸುಕು ಹಾಕಿ ಅರೆದು ಸುರ್ಕಿಗಾರೆ ತಯಾರಿಸಿ ಆಣೆಕಟ್ಟು ಕಟ್ಟಲಾಗಿದೆ. ಇಂದು ಮೈಸೂರು, ಮಂಡ್ಯ ಭಾಗದಲ್ಲಿ ಹಸಿರು ಕಾಣುತ್ತಿರುವುದು ಇವರಿಂದಲೇ.
ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತದ ವೈಭವ ಆಕರ್ಷಿಸುವಂತಿತ್ತು. ವಿದ್ಯುತ್ ಸಂಪನ್ಮೂಲ ಹೆಚ್ಚಿಸಲು ಯೋಜನೆ ರೂಪಿಸಿದರು. ಶರಾವತಿ ಜಲವಿದ್ಯುತ್ ಯೋಜನೆ ಪೂರ್ಣಗೊಳಿಸಿ ಇದರಿಂದ ನಮ್ಮ ರಾಜ್ಯಕ್ಕೆ ಪೂರೈಕೆ ಮಾಡುವ ಘಟಕ ತಂದುಕೊಟ್ಟ ಕೀರ್ತಿ ವಿಶ್ವೇಶ್ವರಯ್ಯನವರಿಗೆ ಸಲ್ಲುತ್ತದೆ.
1913ರಲ್ಲಿ ರೈಲು ಮಾರ್ಗ ನಿರ್ಮಿಸುವ ಕುರಿತು ಯೋಚಿಸಿದ್ದರು. ಮೈಸೂರು, ಶಿವಮೊಗ್ಗ, ಬೆಂಗಳೂರಿಂದ ರೈಲು ಸಂಪರ್ಕ ಕಲ್ಪಿಸಿಕೊಟ್ಟ ಕೀರ್ತಿ ಕೂಡ ಇವರದ್ದೇ. ಅಣೆಕಟ್ಟುಗಳನ್ನು ನಿರ್ಮಿಸಬೇಕೆಂದಾಗ ಅಧಿಕಾರಿ ವರ್ಗ ವಿಶ್ವೇಶ್ವರಯ್ಯನವರ ಬಳಿ ಬರುತ್ತಿತ್ತು. ಅವರ ಸಲಹೆ, ಮಾರ್ಗದರ್ಶನಗಳಿಲ್ಲದೆ ಕೆಲಸ ಮುಂದುವರಿಯುತ್ತಿರಲಿಲ್ಲ. 1947ರಲ್ಲಿ ನಿರ್ಮಿಸಿದ ತುಂಗಭದ್ರಾ ಜಲಾಶಯ, ತಿಪ್ಪಗೊಂಡನಹಳ್ಳಿ ಜಲಾಶಯ, ಲಕ್ಕವಳ್ಳಿ ಅಣೆಕಟ್ಟೆ ಯೋಜನೆಗಳು ಅವರ ಪ್ರತಿಭೆ ಸಾರುವ ಪ್ರತೀಕವಾಗಿವೆ. ಮೈಸೂರು ವಿಶ್ವವಿದ್ಯಾಲಯವೂ ಇವರ ಕೊಡುಗೆಯಾಗಿದ್ದು, 1923ರಲ್ಲಿ 90 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಭದ್ರಾವತಿ ಕಬ್ಬಿಣ ಕಾರ್ಖಾನೆಯಿಂದ ಅಮೆರಿಕಕ್ಕೆ ಕಬ್ಬಿಣ ರಫ್ತು ಮಾಡಲಾಗುತ್ತಿತ್ತು.
ಸಾಲು ಸಾಲು ಪ್ರಶಸ್ತಿಗಳು: 1883ರಲ್ಲಿ ಪುಣೆ ಎಂಜಿನೀಯರಿಂಗ್ ಕಾಲೇಜಿನಿಂದ ಸಂದ ಜೇಮ್ಸ್ ಬರ್ಕಲೇ ಚಿನ್ನದ ಪದಕ. 1904 ರಲ್ಲಿ ಲಂಡನ್ ಸಿವಿಲ್ ಎಂಜಿನಿಯರಿಂಗ್ ಸಂಸ್ಥೆಯ ಗೌರವ ಸದಸ್ಯತ್ವ. ಕೈಸರ್-ಎ-ಹಿಂದ್ ಪ್ರಶಸ್ತಿ. 1915ರಲ್ಲಿ ಬ್ರಿಟಿಷ್ ಸರ್ಕಾರ ನೀಡುವ ನಾಗರಿಕ ಪದವಿ. ಸರ್ ಗೆ ಭಾಜನ. 1921ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಸೈನ್ಸ್ ಗೌರವ. 1931ರಲ್ಲಿ ಮುಂಬೈ ವಿವಿಯಿಂದ ಡಾಕ್ಟರ್ ಆಫ್ ಲೇಟರ್ಸ್ ಗೌರವ. 1937ರಲ್ಲಿ ಬನಾರಸ್ ಹಿಂದೂ ವಿವಿಯಿಂದ ಡಾಕ್ಟರ್ ಆಫ್ ಲಿಟರೇಚರ್. 1943ರಲ್ಲಿ ಭಾರತೀಯ ಎಂಜಿನಿಯರ್ ಸಂಸ್ಥೆಗೆ ಅಜೀವ ಸದಸ್ಯತ್ವಕ್ಕೆ ಆಯ್ಕೆ. 1944ರಲ್ಲಿ ಅಲಹಾಬಾದ್ ವಿವಿಯಿಂದ ಡಾಕ್ಟರ್ ಆಫ್ ಸೈನ್ಸ್ ಗೌರವ.   1948ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಲೆಟರ್ಸ್ ಗೌರವ. 1955ರಲ್ಲಿ ಭಾರತ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಪದವಿ ಭಾರತ ರತ್ನ ಪ್ರಧಾನ. 1958ರಲ್ಲಿ ಬೆಂಗಾಲದ ರಾಯಲ್ ಏಶಿಯಾಟಿಕ್ ಸೌಸೈಟಿ ಕೌನ್ಸಿಲ್‌ನಿಂದ ದುರ್ಗಾ ಪ್ರಸಾದ ಖೇತಾನ್ ಸ್ಮಾರಕ ಚಿನ್ನದ ಪದಕ. 1959ರಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಫೆಲೋಶಿಪ್‌ಗೆ ಪಾತ್ರರಾಗಿದ್ದಾರೆ.
ಜೀವನ: ವಿಶ್ವೇಶ್ವರಯ್ಯನವರ ಪೂರ್ವಜರು ಆಂಧ್ರಪದೇಶದ ಕರ್ನೂಲ ಜಿಲ್ಲೆಯ ಮೋಕ್ಷಗುಂಡಂ ಎಂಬ ಹಳ್ಳಿಯಿಂದ ಕರ್ನಾಟಕಕ್ಕೆ ವಲಸೆ ಬಂದು ಚಿಕ್ಕಬಳ್ಳಾಪುರ ತಾಲೂಕು ಮುದ್ದೇನಹಳ್ಳಿಯಲ್ಲಿ ನೆಲೆನಿಂತರು.  ಇವರದ್ದು ಮುಲಕುನಾಡು ಬ್ರಾಹ್ಮಣ ಕುಟುಂಬ. ಶ್ರೀನಿವಾಸ ಶಾಸ್ತ್ರಿ, ವೆಂಕಟಲಕ್ಷ್ಮೀ ದಂಪತಿಯ 6 ಜನ ಮಕ್ಕಳಲ್ಲಿ ಎರಡನೆಯವರು ವಿಶ್ವೇಶ್ವರಯ್ಯನವರು. ಹುಟ್ಟಿದ್ದು 1860ರ ಸೆ.15ರಂದು. ಕಾವೇರಿ ನದಿಗೆ ಅಡ್ಡಲಾಗಿ ಕನ್ನಂಬಾಡಿ ಅಣೆಕಟ್ಟು ಕಟ್ಟಿರುವುದು ಅವರ ಮಹತ್ಸಾಧನೆ. ಬೆಂಗಳೂರಿನ ಬಾಡಿಗೆ ಮನೆಯಲ್ಲಿ ವಾಸವಿದ್ದ ವಿಶ್ವೇಶ್ವರಯ್ಯನವರು 1962ರ ಏ.14ರಂದು ಕೊನೆಯುಸಿರೆಳೆದರು. 101 ವರ್ಷ ಸುದೀರ್ಘ ಕಾಲ ಬದುಕಿದ ಸರ್. ಎಂ.ವಿಶ್ವೇಶ್ವರಯ್ಯ ಜೀವನದ ನಡೆ- ನುಡಿ ಇಂದಿನ ಯುವ ಪೀಳಿಗೆಗೆ ಮಾದರಿಯಾಗಲಿ.


 -ಅಮರೇಶಸ್ವಾಮಿ ಬಲ್ಲಟಗಿ, ಲಿಂಗಸ್ಗೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement