ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಶಿಕ್ಷಣದಿಂದ ದೇಶದ ಪ್ರಗತಿ

Vishwanath S
Updated On : 15 Sept 2013, 11:57 am

ಕ.ಪ್ರ. ವಾರ್ತೆ  ರಾಯಚೂರು  ಸೆ.14
ಶಿಕ್ಷಣ ವ್ಯಾಪಾರವಲ್ಲ ಬದಲಿಗೆ ಶಿಕ್ಷಣದ ಮೂಲಕ ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕ ಪರಿಸರ ನಿರ್ಮಿಸುವ ಕಾರ್ಯ ಶಿಕ್ಷಕರದ್ದಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಶಂಕ್ರಪ್ಪ ಅವರು ಹೇಳಿದರು.
ನಗರದ ರಂಗಮಂದಿರದಲ್ಲಿ ಶನಿವಾರ ಮಾನವಿಯ ರಾಷ್ಟ್ರಕವಿ ಕುವೆಂಪು ಸಾಮಾಜಿಕ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ್ದ ಶೈಕ್ಷಣಿಕ ಹಾಗೂ ಜಾನಪದ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ದೇಶಕ್ಕೆ ಜ್ಞಾನವಂತರನ್ನು ನೀಡುವ ಕಾರ್ಯ ಶಿಕ್ಷಣ ಕ್ಷೇತ್ರದ್ದಾಗಿದೆ ಎಂದು ಹೇಳಿದರು.
ಕಾರ್ಯ ಶ್ಲಾಘನೀಯ: ದೇಶದ ಪ್ರಗತಿಗೆ ಸಮರ್ಥ ವ್ಯಕ್ತಿಗಳನ್ನು ರೂಪಿಸುವ ಕಾರ್ಯ ಶಿಕ್ಷಣದಿಂದಾಗಬೇಕಿದೆ. ಈ ನಿಟ್ಟಿನಲ್ಲಿ ಬಹುದೊಡ್ಡ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರ ಜತೆಜತೆಗೆ ಪರಿಸರ ಪ್ರೇಮಿ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುವ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದರು.
ರಾಷ್ಟ್ರಕವಿ ಕುವೆಂಪು ಸಾಮಾಜಿಕ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, ಶಾಲೆಗಳಲ್ಲಿ ಮಕ್ಕಳಿಗೆ ಕೇವಲ ಬೋಧನೆಯಷ್ಟೇ ಅಲ್ಲ ಅದರ ಜತೆಜತೆಗೆ ಪರಿಸರದ ಬಗ್ಗೆ ಮಕ್ಕಳಲ್ಲಿ ಕಾಳಜಿ ಮೂಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದಂಥ ಶಿಕ್ಷಕರಿಗೆ ಪ್ರೋತ್ಸಾಹಿಸುವ ಉದ್ದೇಶದಿಂದಲೇ ಪ್ರತಿಷ್ಠಾನವು ಪರಿಸರ ಪ್ರೇಮಿ ಶಿಕ್ಷಕರನ್ನೂ ಸನ್ಮಾನಿಸುತ್ತಿದೆ ಎಂದು ತಿಳಿಸಿದರು.
ಬಹುಮಾನ ವಿತರಣೆ: ಸಮಾರಂಭದಲ್ಲಿ ಜಿಲ್ಲೆಯ ಉತ್ತಮ ಪರಿಸರ ಪ್ರೇಮಿ ಶಿಕ್ಷಕರಿಗೆ ಹಾಗೂ ತೊಗಲುಗೊಂಬೆ ಮತ್ತು ಬಯಲಾಟ ಕಲಾವಿದ ಲಕ್ಷ್ಮಣ ಸಿಳ್ಳೆಕ್ಯಾತ ಅವರನ್ನು ಸನ್ಮಾನಿಸಲಾಯಿತು. ಜಾನಪದ ಗಾಯನ ಸ್ಪರ್ಧೆಯ ವಿಜೇತ ಬಿ.ಎಡ್, ಡಿಎಡ್ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಜಾನಪದ ಅಳಿವು- ಉಳಿವು ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಚಲುವರಾಜು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ರಾಜ್ಯ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಿ.ತಿಮ್ಮಣ್ಣ ವಹಿಸಿದ್ದರು.
ಸಾರ್ವಜನಿಕ ಶಿಕ್ಷಣ ಇಲಾಖೆ ವಿಶ್ರಾಂತ ಉಪನಿರ್ದೇಶಕ ಶೇಷಗಿರಿರಾವ್ ಕುಲಕರ್ಣಿ, ಕುರುಬ ಸಂಘದ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಏಗನೂರು, ತಿಮ್ಮಪ್ಪ, ಶರಣಪ್ಪ ಗೋನಾಳ ಸೇರಿ ಅನೇಕರಿದ್ದರು.
ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ಜನತೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement