ಬಸವಕಲ್ಯಾಣದಲ್ಲಿ ವಚನ ವಿವಿ ಸ್ಥಾಪನೆ ನನ್ನ ಕನಸು
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ ಸೆ.15
ಬಸವಕಲ್ಯಾಣದಲ್ಲಿ ಸುಮಾರು 12 ವರ್ಷಗಳಿಂದ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂಬುದು ನಮ್ಮ ದೊಡ್ಡ ಕನಸಾಗಿದೆ ಎಂದು ಭಾಲ್ಕಿ ಬಸವಲಿಂಗ ಪಟ್ಟದೇವರು ನುಡಿದರು.
ನಗರದ ಬಸವೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯಾಲಯದಲ್ಲಿ ಭಾನುವಾರ ಶರಣ ಸಾಹಿತ್ಯ ಸಂಶೋಧನಾ ಕೇಂದ್ರದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪನೆ ಪೂರ್ವಭಾವಿ ಸಿದ್ಧತಾ ಸಭೆಯ ನೇತೃತ್ವ ವಹಿಸಿ ಮಾತನಾಡಿ, ವಚನ ಸಾಹಿತ್ಯವೇ ನಮ್ಮ ಜೀವಾಳವಾಗಿದೆ. ಆದರೆ ಸಾಮರಸ್ಯ ವೈದಿಕ ಸಂಸ್ಕೃತಿಗೆ ಮೊರೆ ಹೋಗುವಂತಾಗಿದೆ. ಇದರಿಂದ ವಚನ ಸಾಹಿತ್ಯ ಸಂಪರ್ಕ ದೂರವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ವಚನ ವಿದ್ಯೆ ಕಲಿಕೆಗೆ ಸ್ಥಳಾವಕಾಶ ಸಿಗುತ್ತಿಲ್ಲ: ಕಲ್ಯಾಣದ ಕನಸು ನನಸಾಗಬೇಕಾದರೆ ಯಾವುದೆ ವ್ಯಕ್ತಿಗೆ ಸೀಮಿತವಾಗದೆ ಎಲ್ಲರ ಮನಸ್ಸಿಗೆ ಮುಟ್ಟುವಂತ ಕೆಲಸ ಮಾಡಬೇಕಾಗಿದೆ. ವಚನ ಸಾಹಿತ್ಯದಿಂದಲೇ ಲಿಂಗಾಯತರಿಗೆ ಧಾರ್ಮಿಕ ಮಾನ್ಯತೆ ಸಿಗುತ್ತಿಲ್ಲ ಎಂದರು. ಜಾಗತಿಕ ಮಟ್ಟದಲ್ಲಿ ವರ್ಗ ಭೇದವಿಲ್ಲದೆ ಸಮಾನತೆ ಸಾರುವ ವಚನ ಸಾಹಿತ್ಯಕ್ಕೆ ಮಹತ್ವ ಕೊಡಬೇಕಾಗಿದೆ. ಆದರೆ ವಚನ ವಿದ್ಯೆಯು ಕಲಿಯಬೇಕಾದರೆ ಎಲ್ಲೂ ಸ್ಥಳಾವಕಾಶ ಸಿಗದಂತಾಗಿದೆ.
ಶರಣರ ಪುಣ್ಯಸ್ಥಳದಲ್ಲಿ ವಚನ ಸಾಹಿತ್ಯಕ್ಕಾಗಿ ಅನೇಕ ಶರಣರು ತಮ್ಮ ಜೀವ ಬಲಿದಾನದಿಂದ ರಕ್ತಪಾತವಾದ ಈ ಪುಣ್ಯಭೂಮಿಯಲ್ಲಿ ವಚನ ವಿವಿ ಸ್ಥಾಪಿಸುವ ಕುರಿತು ದೃಢ ಸಂಕಲ್ಪ ಹೊಂದಿರುವುದಾಗಿ ಅವರು ತಿಳಿಸಿದರು.
ಎಲ್ಲರ ಸಲಹೆ ಪಡೆದು ಮುಂದಿನ ಪ್ರಯತ್ನ: ಈಗಾಗಲೇ ಬಸವಕಲ್ಯಾಣ ಬಳಿ 16 ಎಕರೆ ಭೂಮಿ ಖರೀದಿಸಿದ್ದು, ಅದು ಬಸವಕಲ್ಯಾಣದಿಂದಲೇ ನಾಡಿಗೆ ಬೆಳಕಾದರೆ ಮಹತ್ವ ಬರುತ್ತದೆ. ಇದರಂಗವಾಗಿ ಪ್ರಥಮ ಸಭೆ ಕರೆದು ಸವಿಸ್ತಾರವಾಗಿ ಚರ್ಚಿಸಿದ ನಂತರ ಮುಂಬರುವ ದಿನಗಳಲ್ಲಿ ಗುಲ್ಬರ್ಗ ಮತ್ತು ಬೆಂಗಳೂರಿನಲ್ಲಿ ಸಭೆ ಕರೆದು ಎಲ್ಲರ ಸಲಹೆ ಪಡೆದ ನಂತರ ಮುಂದಿನ ಚಟುವಟಿಕೆ ಪ್ರಾರಂಭಿಸುವುದಾಗಿ ನುಡಿದರು.
ಎಲ್ಲರ ಸಹಕಾರ, ಬೆಂಬಲ ಬೇಕು. ಈಗಾಗಲೇ ವಚನ ಸಾಹಿತ್ಯ ಮೇಲೆ ಎಂ.ಎ ತರಬೇತಿ ಪ್ರಾರಂಭಿಸಲಾಗಿದೆ. ಗುರಿ ಮತ್ತು ಮಾರ್ಗ ಸರಳವಾಗಿದ್ದರೆ ನಾವು ಏನೆಲ್ಲ ಸಾಧನೆ ಮಾಡಬಹುದು. ಈ ಕುರಿತಂತೆ ಹಿರಿಯ ತಜ್ಞರ, ಸಾಹಿತ್ಯಾಭಿಮಾನಿಗಳ ಸಲಹೆ, ಅಭಿಪ್ರಾಯ ಅಗತ್ಯವಿದೆ ಎಂದರು.
ವಚನ ಅಧ್ಯಯನ ಅವಶ್ಯ: ಗುಲ್ಬರ್ಗ ವಿವಿ ಕುಲಪತಿ ಪ್ರೊ. ಈ.ಟಿ. ಪುಟ್ಟಣಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಯಕವೇ ಕೈಲಾಸ ಎಂಬ ತತ್ವ ಕೊಟ್ಟವರು ಬಸವಣ್ಣ. ಕಳಬೇಡ, ಕೊಲಬೇಡ... ಎಂಬ ವಚನ ಹೇಳಿ ಸಮಾಜ ತಿದ್ದಿದ್ದ ಬಸವಣ್ಣನವರು ಸರಳ ಕನ್ನಡದಲ್ಲಿ ವಚನಗಳು ರಚಿಸಿ ಮಾನವ ಕುಲಕ್ಕೆ ದಾರಿ ದೀಪವಾಗಿದ್ದಾರೆ. ಅಂತಹ ಶರಣರ ವಚನಗಳು ಅವುಗಳ ಅಧ್ಯಯನ ಮಾಡುವುದು ಅವಶ್ಯಕ ಎಂದರು.
12ನೇ ಶತಮಾನ ಮರುಕಳಿಸಬೇಕಾಗಿದೆ ರಾಜ್ಯ- ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆಯಬಹದು ಎಂದು ಸಲಹೆ ನೀಡಿದ ಅವರು, ಖಾಸಗಿಯಾಗಿ ಕೂಡ ವಿಶ್ವವಿದ್ಯಾಲಯ ನಡೆಸಬಹುದು. ಇಲ್ಲಿನ ಸಂಶೋಧನೆ ವಿಭಾಗದಲ್ಲಿ ಪರೀಕ್ಷೆಗಳನ್ನು ನಡೆಸಬಹುದು. ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕಾದರೆ ಅದಕ್ಕೆ ತಕ್ಕಂತೆ ಮೊದಲು ತಜ್ಞರ ಸಮಿತಿ ನೇಮಕ ಮಾಡಬೇಕು. 100ರಿಂದ 1 ಸಾವಿರ ಎಕರೆ ವಿಶಾಲವಾದ ಭೂಮಿ ಅಗತ್ಯ ಎಂದು ಹೇಳಿದರು.
ನಮ್ಮೆಲ್ಲರ ಸಹಕಾರವಿದೆ: ಕೌಠಾದ ಸಿದ್ದರಾಮ ಶರಣ ಬೆಲ್ದಾಳ ಮಾತನಾಡಿ, ವಿಶ್ವಕ್ಕೆ ಸಂದೇಶ ಸಾರಿದ ಬಸವಣ್ಣನವರ ಈ ಪುಣ್ಯಸ್ಥಳದಲ್ಲಿ ಇಂತಹ ಮಹಾಕಾರ್ಯ ಸಾಧಿಸುವ ಕಾಯಕಲ್ಪಕ್ಕೆ ನಮ್ಮೆಲ್ಲರ ಸಹಕಾರವಿದೆ ಎಂದು ನುಡಿದರು. ಹುಲಸೂರು ಶಿವಾನಂದ ಸ್ವಾಮಿ, ಅನುಭವ ಮಂಟಪ ಸಂಚಾಲಕ ವಿ.ಸಿದ್ದರಾಮಣ್ಣ, ಬೀದರ್ನ ಅಕ್ಕ ಅನ್ನಪೂರ್ಣ, ಇದ್ದರು.
ಈ ವೇಳೆ ಸಾಹಿತಿ ವೀರೇಂದ್ರ ಸಿಂಪಿ, ದೇಶಾಂಶ ಹುಡಗಿ, ಗದಗೆಪ್ಪ ಹಲಶೆಟ್ಟೆ, ಪತ್ರಕರ್ತ ಮಾಣಿಕ ಭೂರೆ, ಶಿವರಾಜ ಕನಶೆಟ್ಟಿ, ರಘುಶಂಖ ಭಾತಂಬ್ರಾ, ವಚನಾ ಪಾಟೀಲ್, ಅಶೋಕ ಮೈನಾಳೆ, ಎಂ.ಜಿ. ಗಂಗನಪಳ್ಳಿ, ಪಂಚಾಕ್ಷರಿ ಸ್ವಾಮಿ, ಡಾ. ಗವಿಸಿದ್ದಪ್ಪ ಪಾಟೀಲ್, ಕಾಶೆಪ್ಪ ಭಾಲ್ಕೆ, ವೈಜಿನಾಥ ಕಾಮಶೆಟ್ಟಿ, ಡಾ. ಸೋಮನಾಥ, ರಮೇಶ, ಚಂದ್ರಕಾಂತ ನಿರ್ಮಳೆ, ಪ್ರಭುಲಿಂಗಯ್ಯಾ ಟಂಕಸಾಲಿಮಠ ಪಾಲ್ಗೊಂಡು ಸಲಹೆ, ಅಭಿಪ್ರಾಯ ತಿಳಿಸಿದರು.
ಬಸವ ದಳದ ಜಿಲ್ಲಾಧ್ಯಕ್ಷ ಬಾಬುವಾಲಿ ಸ್ವಾಗತಿಸಿದರು. ಪ್ರೊ. ಚಂದ್ರಕಾಂತ ಬಿರಾದಾರ ನಿರೂಪಿಸಿದರು. ಗುರುಬಸವ ದೇವರು ವಂದಿಸಿದರು.