ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮುಂದುವರೆದ ಕುಂಭದ್ರೋಣ

Lingaraj Badiger
Updated On : 16 Sept 2013, 10:57 am

ಕನ್ನಡಪ್ರಭ ವಾರ್ತೆ  ರಾಯಚೂರು  ಸೆ.15
ನಗರ ಸೇರಿದಂತೆ ಜಿಲ್ಲಾದ್ಯಂತ ಶನಿವಾರ ರಾತ್ರಿಯಿಡೀ ಸುರಿದ ಕುಂಭದ್ರೋಣ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ನಗರದಲ್ಲಿ ಐದು ಜೋಪಡಿಗಳು ಕುಸಿದು ಇಬ್ಬರಿಗೆ ಗಾಯಗಳಾಗಿವೆ. ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ರಾತ್ರಿಯಿಡೀ ಆತಂಕದಲ್ಲಿಯೇ ಕಳೆದರು.
ನಗರದಲ್ಲಿ ಶನಿವಾರ ತಡರಾತ್ರಿ ಆರಂಭಗೊಂಡ ಮಳೆಯು ಧಾರಾಕಾರ ಸುರಿದಿದ್ದರಿಂದ ನಗರದ ಬಸವನಬಾವಿ ವೃತ್ತ, ನೀರಬಾವಿ ಕುಂಟಾ, ಜಲಾಲ್ ನಗರದಲ್ಲಿನ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದ್ದರಿಂದ ಐದು ಜೋಪಡಿಗಳು ಕುಸಿದು ಬಿದ್ದಿದ್ದು, ಭೀಮಣ್ಣ ಮತ್ತು ಪದ್ದಮ್ಮ ಎಂಬುವವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರವಾಹ ಪರಿಸ್ಥಿತಿ: ನಗರದಲ್ಲಿ ಶನಿವಾರ ರಾತ್ರಿಯಿಡೀ ಗುಡುಗು ಮಿಂಚಿನಿಂದ ಕೂಡಿದ ಭಾರೀ ಮಳೆಯಾಗಿದ್ದು, ಮಳೆಯಿಂದಾಗಿ ಜಲಾಲ್ ನಗರದಲ್ಲಿ ಮಳೆಯ ನೀರು ನುಗ್ಗಿ ಆಹಾರ ಧಾನ್ಯ ಮತ್ತು ಪಾತ್ರೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
 ನಗರದ ಬಸವಬಾವಿ ವೃತ್ತದಿಂದ ರಾಜೇಂದ್ರ ಗಂಜ್ ಗೆ ಸಂರ್ಪಕ ಕಲ್ಪಿಸುವ ಮಾರ್ಗದ ಇಕ್ಕೆಲಗಳಲ್ಲಿರುವ ಅನೇಕ ವಾಣಿಜ್ಯ ಮಳಿಗೆಗಳಿಗೆ ಮಳೆಯ ನೀರು ನುಗ್ಗಿದ್ದರಿಂದ ಸಿಮೆಂಟ್ ಸೇರಿ ಅನೇಕ ಸಾಮಗ್ರಿ ಹಾಳಾಗಿವೆ.
ನಗರದಲ್ಲಿ ಭಾನುವಾರ ಬೆಳಗಿನ ಜಾವ 1 ಗಂಟೆಯಿಂದಲೇ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅನೇಕರ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಆತಂಕದಲ್ಲಿಯೇ ರಾತ್ರಿ ಕಳೆದಿದ್ದಾರೆ. ಮತ್ತೆ ಕೆಲವರು ಬೆಳಗಾಗುವವರೆಗೆ ಮನೆಗೆ ನುಗ್ಗಿದ ನೀರು ಹೊರಹಾಕುವ ಕಾರ್ಯ ಮಾಡಿ ಕಾಲಕಳೆದಿದ್ದಾರೆ.
ಈ ಮಧ್ಯೆ ಭಾರೀ ಮಳೆಯಿಂದ ನಗರದಲ್ಲಿ ಶನಿವಾರ ರಾತ್ರಿಯಿಂದ ಭಾನುವಾರ ಬೆಳಗಿನ ವರೆಗೆ ಅನೇಕ ಕಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಬಸವನಬಾವಿ ವೃತ್ತದಿಂದ ರಾಜೇಂದ್ರ ಗಂಜ್ ಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಭಾನುವಾರ ಮಧ್ಯಾಹ್ನದವರೆಗೆ ರಸ್ತೆ ಮೇಲೆ ಭಾರೀ ಪ್ರಮಾಣದ ನೀರು ಹರಿದಿದ್ದರಿಂದ ವಾಹನಗಳ ಸವಾರರು ಪ್ರಯಾಸಪಡುತ್ತಲೇ ಸಂಚರಿಸುವಂತಾಯಿತು.
ಆಕ್ರೋಶ: ಅದೇ ರೀತಿ ಪಾದಚಾರಿಗಳೂ ಸಹ ಮಳೆಯ ನೀರಿನಲ್ಲಿಯೇ ಸಾಗಿದ್ದು ಕಂಡುಬಂದಿತು. ಭಾನುವಾರ ಬೆಳಗಿನ ಜಾವದಿಂದಲೇ ನಗರದಲ್ಲಿ ಮಳೆಯಿಂದಾಗಿ ಆತಂಕದ ಪರಿಸ್ಥಿತಿಯಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಂತ್ರಸ್ತರ ನೆರವಿಗೆ ತ್ವರಿತವಾಗಿ ಧಾವಿಸದಿರುವ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಯಿತು.
  ನಗರಸಭೆ ಅಧಿಕಾರಿಗಳು ಮತ್ತು ಆಡಳಿತದ ನಿರ್ಲಕ್ಷ್ಯದಿಂದಾಗಿ ಚರಂಡಿಯಲ್ಲಿನ ಭಾರೀ ಪ್ರಮಾಣದ ತ್ಯಾಜ್ಯ ತೆರವುಗೊಳಿಸದಿರುವುದು ಸಮಸ್ಯೆಯನ್ನು ಉಲ್ಬಣಗೊಳಿಸಿದ್ದು ಕಂಡುಬಂದಿತು.
  ನಗರಸಭೆಯ ಅಧಿಕಾರಿಗಳು ಬೆಳಗ್ಗೆ 8ರ ಸುಮಾರಿಗೆ ಸ್ಥಳಕ್ಕೆ ಧಾವಿಸಿದ ನಂತರವೇ ಜೆಸಿಬಿ ಯಂತ್ರ ಬಳಸಿ ಚರಂಡಿಯಲ್ಲಿದ್ದ ತ್ಯಾಜ್ಯ ತೆರವುಗೊಳಿಸಿದರೂ ನೀರಿನ ಹರಿವಿನ ಪ್ರಮಾಣ ಇಳಿಮುಖಗೊಳ್ಳಲು ಜನತೆ ಬೆಳಗ್ಗೆ 11ರವರೆಗೆ ಕಾಯಬೇಕಾಯಿತು.
ಆರೋಪ: ಈ ಮಧ್ಯೆ ಅನೇಕರು ಚರಂಡಿ ಮತ್ತು ನೀರಬಾವಿ ಕುಂಟಾ ಕೆರೆ ಪ್ರದೇಶದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದರಿಂದಲೇ ಮಳೆಯ ನೀರು ಸರಾಗವಾಗಿ ಹರಿದು ಮುಂದೆ ಸಾಗಲು ಸಾಧ್ಯವಾಗದೇ ಮನೆಗಳಿಗೆ ನುಗ್ಗಿದೆ ಎಂಬ ಆರೋಪಗಳು ಕೇಳಿಬಂದವು.
ಮಳೆಯ ಅಬ್ಬರದಿಂದಾದ ಅನಾಹುತದ ಸುದ್ದಿ ತಿಳಿದ ನಗರಸಭೆ ಅಧ್ಯಕ್ಷೆ ಮಹಾದೇವಮ್ಮ ಮತ್ತು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಅವರು ಬಸವನಬಾವಿ ವೃತ್ತ, ಜಲಾಲ್ ನಗರ, ನೀರಬಾವಿಕುಂಟಾ ಮತ್ತಿತರೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳಿಗೆ ಪರಿಹಾರ ಕಾರ್ಯ ಕೈಗೊಳ್ಳಲು ಹಾಗೂ ಚರಂಡಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ತೊಡಗಲು ಆದೇಶಿಸಿದರು.
ಭಾನುವಾರ ಬೆಳಗ್ಗೆವರೆಗೆ ಸುರಿದ ಧಾರಾಕಾರ ಮಳೆಗೆ ನಗರದ ಜನಜೀವನ ಅಸ್ತವ್ಯಸ್ತಗೊಂಡಿತು. ತಗ್ಗು ಪ್ರದೇಶದಲ್ಲಿನ ಅಂಗಡಿ, ಮನೆಗಳಿಗೆ ಮಳೆ ಮತ್ತು ಚರಂಡಿ ನೀರು ನುಗ್ಗಿದ್ದರಿಂದ ಜನತೆ ಆಡಳಿತದ ಕಾರ್ಯವೈಖರಿಗೆ ಹಿಡಿಶಾಪ ಹಾಕುತ್ತಲೇ ಮಳೆಯ ನೀರು ಮನೆ ಮತ್ತು ಅಂಗಡಿಯಿಂದ ಹೊರಹಾಕುತ್ತಿದ್ದದು ಕಂಡುಬಂದಿತು.ನಗರದಲ್ಲಿ ಭಾನುವಾರ ಬೆಳಗ್ಗೆವರೆಗೆ ಒಟ್ಟು 56ಮಿಮೀ ನಷ್ಟು ಮಳೆಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಮನೆ ಕುಸಿತ; ಮಹಿಳೆ ಸಾವು
ರಾಯಚೂರು: ತಾಲೂಕಿನ ಜುಲಮಗೇರಾ ಗ್ರಾಮದಲ್ಲಿ ಮನೆ ಗೋಡೆ ಕುಸಿತದಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬಳು ಮೃತಪಟ್ಟಿದ್ದಾಳೆ.
  ಮೃತಳನ್ನು ತಾಯಮ್ಮ(55) ಎಂದು ಗುರುತಿಸಲಾಗಿದೆ. ಈಕೆಯು ಇತ್ತೀಚೆಗೆ ಸುರಿದ ಮಳೆಯ ವೇಳೆ ವಾಸವಾಗಿದ್ದ ಮನೆಯ ಗೋಡೆ ಸೆ.10ರಂದು ಕುಸಿದು ತೀವ್ರ ಗಾಯಗೊಂಡಿದ್ದಳು. ಗಾಯಾಳುವನ್ನು ನಗರದ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆಕೆ ಸೆ.13ರಂದು ಕೊನೆಯುಸಿರೆಳೆದಿದ್ದಾಳೆಂದು ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ಈ ಕುರಿತು ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement