ಅನುಮಾನಾಸ್ಪದ ವ್ಯಕ್ತಿಗಳ ಮಾಹಿತಿ ನೀಡಿ
ಮುದಗಲ್: ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು ಅಪರಿಚಿತರು ಮನೆಗಳ ಮುಂದೆ ಕಾಣಿಸಿಕೊಂಡರೆ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಮುಂದಾಗುವ ಕಳ್ಳತನ ಮುಂತಾದ ಪ್ರಕರಣಗಳನ್ನು ತಡೆಗಟ್ಟಲು ಸಾರ್ವಜನಿಕರು ಸಹಕಾರ ನೀಡಬೇಕೆಂದು ಸ್ಥಳೀಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ರಾತ್ರಿ ವೇಳೆಯಲ್ಲಿ ಮನೆಯೊಳಗಡೆ ಬಾಗಿಲಿಗೆ ಕೀಲಿ ಅಳವಡಿಸಿ ಕಳವಾಗುವುದನ್ನು ತಪ್ಪಿಸಬೇಕು. ಮಹಿಳೆಯರು ರಸ್ತೆಯಲ್ಲಿ ಹೋಗುವಾಗ ನಿಮ್ಮ ಹಿಂದೆ ಮುಂದೆ ಅಪರಿಚಿತರ ಬಗ್ಗೆ ಎಚ್ಚರದಿಂದ ಇರಬೇಕು. ರಾತ್ರೀವೇಳೆ ಗಸ್ತು ತಿರುಗುವ ಪೊಲೀಸರಿಗೆ ಯುವಕರು, ಸಂಘ ಸಂಸ್ಥೆಗಳ ಮುಖಂಡರು ಸಹಕಾರ ನೀಡಬೇಕು. ಪೊಲೀಸರೊಟ್ಟಿಗೆ ಗಸ್ತು ಮಾಡಿ ಸಹಕರಿಸಬೇಕೆಂದು ತಿಳಿಸಿದ್ದಾರೆ.
ವಾಹನಗಳ ಮಾಲೀಕರು ವಾಹನಗಳನ್ನು ಪಾರ್ಕ್ ಮಾಡುವಾಗ ಹ್ಯಾಂಡ್‌ಲಾಕ್ ಮಾಡಬೇಕು. ಅಪರಿಚಿತರು ಯಾವುದೇ ವಸ್ತುಗಳನ್ನು ದಾಖಲೆಗಳಿಲ್ಲದೆ ಮಾರಾಟ ಮಾಡಲು ಬಂದರೆ ಖರೀದಿ ಮಾಡಬೇಡಿ ಎನ್ನುವ ಅನೇಕ ಮಾಹಿತಿಯ ಕರಪತ್ರಗಳನ್ನು ಪಟ್ಟಣದಲ್ಲಿ ಸಾರ್ವಜನಿಕರಿಗೆ ನೀಡಿರುವುದಾಗಿ ಪಿಎಸ್‌ಐ ಸಂಗಪ್ಪ ಶಿವಯೋಗಿ ತಿಳಿಸಿದ್ದಾರೆ.