ಕ್ರೀಡಾಕೂಟಕ್ಕೆ ಅಡೆತಡೆ
ಸಿಂಧನೂರು: ತಾಲೂಕು ಕ್ರೀಡಾಕೂಟದಲ್ಲಿ ಅನವಶ್ಯಕವಾಗಿ ಅಡೆತಡೆ ಉಂಟುಮಾಡಿ ಗೊಂದಲ ಸೃಷ್ಟಿಸಿದ ಸೇವಾ ಭಾರತಿ ಪ್ರೌಢಶಾಲೆಯನ್ನು ಮೂರು ವರ್ಷಗಳ ಕಾಲ ಕ್ರೀಡಾಕೂಟದಲ್ಲಿ ಭಾಗವಹಿಸದಂತೆ ಕ್ರಮ ಕೈಗೊಳ್ಳಲು ಆಗ್ರಹಿಸಿ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ತಾಲೂಕು ಕ್ರೀಡಾಂಗಣದಲ್ಲಿ ನಡೆದ 2013-14ನೇ ಸಾಲಿನ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದ ಜಾಲಿಹಾಳ ಮತ್ತು ಸೇವಾ ಭಾರತಿ ಪ್ರೌಢಶಾಲೆ ಮಧ್ಯದ ಕಬಡ್ಡಿ ಪಂದ್ಯಾವಳಿಯಲ್ಲಿ ಮಲ್ಲಿಕಾರ್ಜುನ ಟೆಂಗಿನಕಾಯಿ, ತಿಮ್ಮಣ್ಣ, ಸಂಪತ್, ರಾಜಪ್ಪ, ಹನುಮಂತಗೌಡ ನಿರ್ಣಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಸೇವಾ ಭಾರತಿ ಪ್ರೌಢಶಾಲೆ ಆಡಳಿತಾಧಿಕಾರಿ ರುದ್ರಗೌಡ ಜವಳಗೇರಾ ಮೈದಾನದೊಳಗೆ ಪ್ರವೇಶಮಾಡಿ ಮಲ್ಲಿಕಾರ್ಜುನ ಟೆಂಗಿನಕಾಯಿ ಅವರ ಅಂಗಿ ಪಟ್ಟಿಯನ್ನು ಹಿಡಿದು ಎಳೆಯುವುದಲ್ಲದೆ ಆಟಗಾರರ ಮತ್ತು ನಿರ್ಣಾಯಕರ ಮೇಲೆ ಹಲ್ಲೆ ಮಾಡಲು ಪ್ರೋತ್ಸಾಹ ನೀಡಿದ್ದಾರೆ. ಇದರಿಂದ ದೈಹಿಕ ಶಿಕ್ಷಕ ಮಲ್ಲಿಕಾರ್ಜುನ ಟೆಂಗಿನಕಾಯಿ ಮಾನಸಿಕವಾಗಿ ತುಂಬಾ ನೊಂದಿದ್ದಾರೆ. ಈ ಘಟನೆ ತಾಲೂಕಿನ ಎಲ್ಲಾ ದೈಹಿಕ ಶಿಕ್ಷಕರಿಗೆ ಮಾಡಿದ ಅವಮಾನವಾಗಿದೆ. ಇದನ್ನು ಶರಣಪ್ಪ ಹೆಂಬಾ ಹಾಗೂ ಸಿ.ಆರ್.ಪಿ. ವೀರೇಶ ಕಣ್ಣಾರೆ ಕಂಡಿದ್ದಾರೆ. ಹೀಗೆ ದೈಹಿಕ ಶಿಕ್ಷಣ ಶಿಕ್ಷಕರ ಮೇಲೆ ಹಲ್ಲೆ ಮಾಡಲು ಮುಂದಾಗಿ ದುಂಡಾವರ್ತನೆ ಪ್ರದರ್ಶಿಸಿ ಅವಮಾನ ಮಾಡಿರುವುದರಿಂದ 3 ವರ್ಷ ಯಾವುದೇ ಕ್ರೀಡಾಕೂಟದಲ್ಲಿ ಅವಕಾಶ ನೀಡದಂತೆ ನಿರ್ಣಯ ಕೈಗೊಳ್ಳುವಂತೆ ದೈಹಿಕ ಶಿಕ್ಷಣ ಪರಿವೀಕ್ಷಕ ಎನ್.ಬಿ. ಕರಂಡಿ, ಎಂ.ಎಂ. ಸುಣ್ಣಗಾರ, ಎಚ್.ಎಫ್. ಮಸ್ಕಿ, ಆರ್.ಸಿ. ಹಿರೇಮಠ ಆಗ್ರಹಿಸಿದ್ದಾರೆ.