ಬಾವಿಯಲ್ಲಿ ಯುವತಿ ಶವ ಪತ್ತೆ; ಆತ್ಮಹತ್ಯೆ ಶಂಕೆ
ರಾಯಚೂರು: ನಗರದ ಖಾಸಬಾವಿಯಲ್ಲಿ ಸೋಮವಾರ ಯುವತಿಯೊಬ್ಬಳ ಮೃತ ದೇಹ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಮೃತಳನ್ನು ನಗರದ ಮಂಗಳವಾರ ಪೇಟೆಯ ನಿವಾಸಿ ರಾಧಾ (21) ಎಂದು ಗುರುತಿಸಲಾಗಿದೆ. ಈಕೆಯು ಮಾನಸಿಕ ಅಸ್ವಸ್ಥಳಿದ್ದು, ಖಾಸ ಬಾವಿಯಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಬಾಲಕ ಸಾವು
ರಾಯಚೂರು: ತಾಲೂಕಿನ ಜಂಬಲದಿನ್ನಿ ಗ್ರಾಮದಲ್ಲಿ ಮನೆ ನಿರ್ಮಿಸಲು ತೆಗೆದಿದ್ದ ಬುನಾದಿಯಲ್ಲಿ ನಿಂತಿದ್ದ ನೀರಿನಲ್ಲಿ ಆಕಸ್ಮಿಕವಾಗಿ ಬಿದ್ದು ಐದು ವರ್ಷದ ಬಾಲಕ ಮೃತನಾಗಿದ್ದಾನೆ.ಮೃತನನ್ನು ಸಂಜೀವಕುಮಾರ್(5) ಎಂದು ಗುರುತಿಸಲಾಗಿದೆ.
ಗ್ರಾಮದಲ್ಲಿ ಮನೆ ನಿರ್ಮಿಸಲು ತೆಗೆದಿದ್ದ ಬುನಾದಿಯಲ್ಲಿ ಈಚೆಗೆ ಸುರಿದ ಮಳೆಯಿಂದಾಗಿ ನಿಂತಿದ್ದ ನೀರಿನಲ್ಲಿ ಆಕಸ್ಮಿಕವಾಗಿ ಬಿದ್ದಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಇಡಪನೂರು ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಚಿನ್ನದ ಸರ ಕಳ್ಳತನ
ಸಿಂಧನೂರು: ನಗರದ ರಾಮಕಿಶೋರ ಕಾಲೋನಿಯಲ್ಲಿ ವರಸಿದ್ಧಿ ವಿನಾಯಕ ಮಂದಿರದ ಪಕ್ಕದಲ್ಲಿ ಪ್ರತಿಷ್ಠಾಪಿಸಿರುವ ಗಜಾನನ ಸಮಿತಿ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಅಪರಿಚಿತರು ಮಹಾದೇವಮ್ಮರ 4 ತೊಲೆ ಚಿನ್ನದ ಸರ ಕಸಿದು ಪರಾರಿಯಾದ ಘಟನೆ ನಡೆದಿದೆ. ಈ ಕುರಿತಂತೆ ಮಹಾದೇವಮ್ಮ, ಮಗಳು ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.