ದೇವದುರ್ಗದಲ್ಲಿ ದಿನಾಚರಣೆ
ದೇವದುರ್ಗ: ಪಟ್ಟಣದ ಸಾರ್ವಜನಿಕ ಕ್ಲಬ್ ಮೈದಾನದಲ್ಲಿ ಮಂಗಳವಾರ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ವೆಂಕಟೇಶ ನಾಯಕ, ನಿಜಾಮ್‌ಶಾಹಿ ಆಡಳಿತದ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡವರನ್ನು ಸ್ಮರಿಸಿದರು. ಪುರಸಭೆ ಅಧ್ಯಕ್ಷ ಫಕ್ರೋದ್ದೀನ್ ಬುವಾಜಿ, ಉಪಾಧ್ಯಕ್ಷ ನಾಗಪ್ಪ, ಪುರಸಭೆ ಸದಸ್ಯರು, ಅರಕೇರಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸ್ಸಯ್ಯ ಶಾಖೆ, ಬಿಇಒ ಎನ್.ಶ್ರೀಧರ, ಪುರಸಭೆ ಮುಖ್ಯಾಧಿಕಾರಿ ಶ್ರೀಪಾದ ಭಟ್, ಸಿಡಿಪಿಒ ಈರಣ, ಗೌಡ, ಸಮಾಜ ಕಲ್ಯಾಣಾಧಿಕಾರಿ ವೆಂಕಟೇಶ ಹೋಗಿಬಂಡಿ, ತಾಲೂಕು ಆರೋಗ್ಯಾಧಿಕಾರಿ ಚಂದ್ರಕಾಂತ ಪಾಲ್ಗೊಂಡಿದ್ದರು.
ಮದ್ಯ ವ್ಯಸನಿ ಸಾವು
ರಾಯಚೂರು: ಲಿಂಗಸ್ಗೂರು ತಾಲೂಕಿನ ಮಲ್ಲಾಪುರದಲ್ಲಿ ಮದ್ಯ ವ್ಯಸನಿಯೊಬ್ಬ ಮದ್ಯದ ಅಮಲಿನಲ್ಲಿ ಆಕಸ್ಮಿಕವಾಗಿ ಕ್ರಿಮಿನಾಶಕ ಸೇವಿಸಿ ಮೃತಪಟ್ಟಿದ್ದಾನೆ. ಮೃತನನ್ನು ಬಸವಂತ್ರಾಯ ಎಂದು ಗುರುತಿಸಲಾಗಿದೆ. ಈತ ಮದ್ಯ ವ್ಯಸನಿಯಾಗಿದ್ದು, ಮದ್ಯ ಸೇವಿಸಿದ ಅಮಲಿನಲ್ಲಿಯೇ ಕ್ರಿಮಿನಾಶಕವನ್ನು ಮದ್ಯವೆಂದು ಭಾವಿಸಿ ಸೇವಿಸಿದ್ದರಿಂದ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗದೇ ಸಾವಿಗೀಡಾಗಿದ್ದಾನೆ.
ಯುವತಿ ಆತ್ಮಹತ್ಯೆ
ರಾಯಚೂರು: ಲಿಂಗಸ್ಗೂರು ತಾಲೂಕಿನ ರಾಯದುರ್ಗದ ಬಳಿ ಮರಕ್ಕೆ ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಳನ್ನು ಬಸಮ್ಮ ಎಂದು ಗುರುತಿಸಲಾಗಿದೆ. ಈಕೆ ದನಗಳನ್ನು ಮೇಯಿಸಲು ಮನೆಯಿಂದ ಹೊರ ಹೋಗಿದ್ದು ಅಲ್ಲಿಯೇ ಮರದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹಾವು ಕಚ್ಚಿ ಇಬ್ಬರು ಸಾವು
ರಾಯಚೂರು: ಸಿಂಧನೂರು ತಾಲೂಕಿನ ಮುಚ್ಚಳಕ್ಯಾಂಪಿನ ಗದ್ದೆಯಲ್ಲಿ ಹಾವು ಕಡಿದು ನಗರದ ಎಕ್ಸಲೆಂಟ್ ಪದವಿ ಕಾಲೇಜಿನ ವಿದ್ಯಾರ್ಥಿ ಅಮರೇಶ ಎಂಬವರು ಅಸುನೀಗಿದ್ದಾರೆ. ಹೊಲದಲ್ಲಿ ನೀರು ಹರಿಸುವ ವೇಳೆ ಹಾವು ಕಚ್ಚಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಬದುಕಲಿಲ್ಲ. ಸಿಂಧನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ಪತ್ರೆಗೆ ಕಾಂಗ್ರೆಸ್ ಮುಖಂಡ ಬಾಬುಗೌಡ ಬಾದರ್ಲಿ, ಅಜಿತ್ ಜಸ್ತುವಾಲ್ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಪ್ರತ್ಯೇಕ ಘಟನೆ: ಜೇಗರಕಲ್ ಗ್ರಾಮದ ಹೊಲವೊಂದರಲ್ಲಿ ಹಾವು ಕಚ್ಚಿ ಯಲ್ಲಪ್ಪ ಮೃತಪಟ್ಟಿದ್ದಾರೆ. ರಾತ್ರಿ ಹೊಲದಲ್ಲಿ ಮಲಗಿದ್ದಾಗ ಹಾವು ಕಚ್ಚಿತ್ತು. ರಾಯಚೂರಿನ ಆಸ್ಪತ್ರೆಗೆ ಸೇರಿಸಿದರೂ ಬದುಕಲಿಲ್ಲ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.