'ಅನ್ಯಾಯ'ಬೆಲೆ ಅಂಗಡಿಗಳ ವಿರುದ್ಧ ಆಕ್ರೋಶ
ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಸೆ.18
ತಾಲೂಕಿನ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಬಹುತೇಕ ನ್ಯಾಯಬೆಲೆ ಅಂಗಡಿಗಳು ಅವ್ಯವಸ್ಥೆಯಿಂದ ಕೂಡಿದ್ದು, ಅಧಿಕಾರಿಗಳ ಬೇಜವಾಬ್ದಾರಿಯಿಂದ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಬಡವರಿಗೆ ತಲುಪುತ್ತಿಲ್ಲ ಎಂದು ತಾಪಂ ಸದಸ್ಯರು ತಹಸೀಲ್ದಾರ್(ಗ್ರೇಡ್-2) ಖಾಜಾ ಹುಸೇನ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ತಾಪಂ ಅಧ್ಯಕ್ಷೆ ಲಲಿತಮ್ಮ ಶಿವನಗೌಡ ಪಾಟೀಲ್ ಅಧ್ಯಕ್ಷತೆಯಲ್ಲಿ ಜರುಗಿದ ವಿವಿಧ ಇಲಾಖೆಗಳ ಪ್ರಗತಿ ವರದಿಗಳ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಗುಂಡಪ್ಪ ಕಾಚಾಪುರ, ರುದ್ರಗೌಡ, ಬಸನಗೌಡ ಕೊಡ್ಲಿ, ಶರಣಪ್ಪಗೌಡ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳ ಶಾಮೀಲು?: ರಾಜ್ಯ ಸರ್ಕಾರ ಬಡವರಿಗೆ ಅನುಕೂಲವಾಗಲೆಂದು ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದು, ಆಹಾರ ಇಲಾಖೆಯಿಂದ ನ್ಯಾಯಬೆಲೆ ಅಂಗಡಿಗಳು ಪಡೆಯುವ ಪಡಿತರ ಆಹಾರಧಾನ್ಯ ಹಾಗೂ ಸೀಮೆಎಣ್ಣೆ ಸರಿಯಾಗಿ ಪೂರೈಕೆ ಮಾಡದ ಕಾರಣ ಬಡವರು ಪಡಿತರಕ್ಕಾಗಿ ಪರದಾಡುತ್ತಿದ್ದಾರೆ.
ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ 1 ನ್ಯಾಯಬೆಲೆ ಅಂಗಡಿಗೆ 2 ರಿಂದ 6 ರವರೆಗೆ ಸೇರ್ಪಡೆ ಮಾಡಲಾಗಿದೆ. ಪಡಿತರವನ್ನು ಅಂಗಡಿಯವರು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ತಾಲೂಕಿನ ಬಂಡೇಬಾವಿ, ಹೂವಿನಬಾವಿ, ಗುಡದನಾಳ, ಮಾವಿನಬಾವಿ, ಯರಜಂತಿ, ಲಿಂಗಸ್ಗೂರು ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳ ಜನತೆ ನ್ಯಾಯಬೆಲೆ ಅಂಗಡಿಗಳಲ್ಲಿನ ಅವ್ಯವಸ್ಥೆ ಕುರಿತು ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ.
ಎರಡ್ಮೂರು ತಿಂಗಳಿಗೊಮ್ಮೆ ಸೀಮೆಎಣ್ಣೆ ಹಂಚಿಕೆ ಮಾಡಲಾಗುತ್ತಿದೆ. ಅಧಿಕೃತವಾಗಿ ಲೈಸನ್ಸ್ ಹೊಂದಿದ ನ್ಯಾಯಬೆಲೆ ಅಂಗಡಿಗಳ ವಿವರ, ಸೇರ್ಪಡೆ ಮಾಡಿದ ನ್ಯಾಯಬೆಲೆ ಅಂಗಡಿಗಳ ಸಂಪೂರ್ಣ ವರದಿ ಸಲ್ಲಿಸುವ ಜೊತೆಗೆ ಸಂಬಂಧಿಸಿದ ಅದಿಕಾರಿಗಳು ಎಲ್ಲ ನ್ಯಾಯಬೆಲೆ ಅಂಗಡಿಗಳ ತನಿಖೆ ನಡೆಸಿ ಬಡವರಿಗೆ ನಿಯಮಾನುಸಾರ ಆಹಾರಧಾನ್ಯ ಪೂರೈಕೆ ಮಾಡುವಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪರಿಶೀಲನೆಗೆ ಒತ್ತಾಯ: ಅರಣ್ಯ ಇಲಾಖೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ನೆಟ್ಟಿರುವ ಸಸಿಗಳು ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ. ಅಲ್ಲದೆ 2007ರಿಂದ 2013ರವರೆಗಿನ ಇಲಾಖೆ ಸಮಗ್ರ ಮಾಹಿತಿ ನೀಡುವ ಪ್ರತಿ ಸಭೆಯಲ್ಲಿ ಅಧಿಕಾರಿಗಳಿಗೆ ಒತ್ತಾಯಿಸಿದರೂ ಮಾಹಿತಿ ನೀಡುತ್ತಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ತಾಪಂ ಸದಸ್ಯ ಗುಂಡಪ್ಪ ಕಾಚಾಪುರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದರು.
ಬ್ಯಾಲಿಹಾಳದಲ್ಲಿ 4 ತಿಂಗಳಿಂದ ಕುಡಿವ ನೀರಿನ ಸಮಸ್ಯೆ ಎದುರಾದ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ಕಾಮಗಾರಿ ವಿಳಂಬವಾಗುತ್ತಿದೆ. ಪೈಪ್‌ಲೈನ್ ಅಳವಡಿಸಿ ನೀರು ಪೂರೈಸಬೇಕೆಂದು ತಾಪಂ ಸದಸ್ಯ ರುದ್ರಗೌಡ ಒತ್ತಾಯಿಸಿದರು.
ಹದಗೆಟ್ಟ ರಸ್ತೆ-ಅಧಿಕಾರಿಗಳ ಗೈರು: ತಾಲೂಕಿನ ಗ್ರಾಮೀಣ ಪ್ರದೇಶಗಲ್ಲಿ ರಸ್ತೆಗಳು ಹದಗೆಟ್ಟಿದ್ದು, ಕೆಲರಸ್ತೆಗಳು ಅಪೂರ್ಣಗೊಂಡಿವೆ. ಸಭೆಯಲ್ಲಿ ಈ ಕುರಿತು ಮಾಹಿತಿ ಪಡೆಯಬೇಕೆಂದರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗೈರು ಹಾಜರಾಗಿದ್ದಾರೆ. ಪ್ರತಿಸಭೆಗೆ ಎಲ್ಲ ಇಲಾಖೆ ಅಧಿಕಾರಿಗಳು ಸಮಗ್ರ ಮಾಹಿತಿಯೊಂದಿಗೆ ಹಾಜರಿರುವಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಬೇಕೆಂದು ತಾಪಂ ಸದಸ್ಯರು ತಾಕೀತು ಮಾಡಿದರು.
ತಾಪಂ ಸದಸ್ಯ ಹನುಮಂತಪ್ಪ ಮೋಚಿ ಮಾತನಾಡಿ, ಸರ್ಕಾರದ ವಿವಿಧ ಯೋಜನೆಯಡಿ ಕೈಗೊಂಡ ಅಪೂರ್ಣ ಕಾಮಗಾರಿ, ವಸತಿ ನಿಲಯಗಳಲ್ಲಿನ ಅವ್ಯವಸ್ಥೆ ಸೇರಿದಂತೆ ಅನೇಕ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ತಾಪಂ ಸದಸ್ಯರ ಹಾಗೂ ಅಧಿಕಾರಿಗಳ ಪ್ರತ್ಯೇಕ ಸಭೆ ಕರೆಯುವಂತೆ ಪ್ರತಿ ಸಭೆಯಲ್ಲಿ ಒತ್ತಾಯಿಸಿದರೂ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ತೋರುತ್ತಾ ಬರುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ವಾಗ್ವಾದ: ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿನ ಸಮಸ್ಯೆಗಳ ಕುರಿತು ಜನಪ್ರತಿನಿಧಿಗಳು ಪರಿಶೀಲನೆ ನಡೆಸಿ ಅಧಿಕಾರಿಗಳಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು. ಪ್ರತ್ಯೇಕ ಸಭೆ ಕರೆಯುವ ಅಗತ್ಯವೇನಿದೆ ಎಂದು ತಾಪಂ ಸದಸ್ಯೆಯರಾದ ನಾಗವೇಣಿ, ಬಸಮ್ಮ, ತಿಮಣ್ಣ ನಾಯಕ ಸೇರಿದಂತೆ ಇನ್ನಿತರರು ಪರಸ್ಪರ ವಾಗ್ವಾದಕ್ಕಿಳಿದರು.
ಕೃಷಿ ಇಲಾಖೆ ರಿಯಾಯಿತಿ ದರದಲ್ಲಿ ನೀಡುವ ಕೃಷಿ ಸಲಕರಣೆಗಳನ್ನು ಫಲಾನುಭವಿಗಳಿಗೆ ನೀಡುತ್ತಿಲ್ಲ. ಕೃಷಿ ಅಧಿಕಾರಿಗಳು ಗಮನ ಹರಿಸಿ ಕ್ರಮ ಕೈಗೊಳ್ಳಬೇಕೆಂದು ತಾಪಂ ಸದಸ್ಯ ಶರಣಪ್ಪಗೌಡ ಒತ್ತಾಯಿಸಿದರು. ಬಿಸಿಎಂ ವಸತಿ ನಿಲಯದಲ್ಲಿನ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿದರು.
ತಾಪಂ ಉಪಾಧ್ಯಕ್ಷ ಮಾನಪ್ಪ ಚೌಹಾಣ್, ತಹಸೀಲ್ದಾರ್ ಗ್ರೇಡ್-2 ಖಾಜಾಹುಸೇನ್, ತಾಪಂ ಸದಸ್ಯರಾದ ರುದ್ರಗೌಡ, ಪರಸಪ್ಪ ಹುನಕುಂಟಿ, ತಿಮ್ಮಣ್ಣ ನಾಯಕ, ಬಸವರಾಜ ದೊಡ್ಡಹೊಲ, ಬಸನಗೌಡ ಕೊಡ್ಲಿ, ಗುಂಡಪ್ಪ ಕಾಚಾಪೂರ, ಹನುಮಂತಪ್ಪ ಮೋಚಿ, ಹೇಮಾಬಾಯಿ, ನಾಗವೇಣಿ, ಬಸಮ್ಮ ಹಟ್ಟಿ, ಯಮನಮ್ಮ ಹನುಮಂತ, ನೀಲಮ್ಮ ಬಸವರಾಜ, ದುರುಗಮ್ಮ, ಸಂಗಮ್ಮ ಸಿದ್ಧನಗೌಡ, ಪಾರ್ವತಿ ಯಂಕೋಬ, ಲಲಿತಾ ಅಯ್ಯಪ್ಪ, ಸಹಾಯಕ ಕೃಷಿ ನಿರ್ದೇಶಕಿ ಸರಸ್ವತಿ, ಸಿಡಿಪಿಒ ಪ್ರಭಾಕರ, ಪಶು ಸಂಗೋಪನಾ ಇಲಾಖೆ ಅಧಿಕಾರಿ ಡಾ. ರಾಚಪ್ಪ, ತಾಲೂಕು ಆರೋಗ್ಯಾಧಿಕಾರಿ ನಂದಕುಮಾರ, ಬಿಇಒ ಅಮರಪ್ಪ ಬೋವಿ, ಜೆಸ್ಕಾಂ ಎಇಇ ರಿಯಾಜ್ ಅಹ್ಮದ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಲ್.ಬಿ.ಸಜ್ಜನ್, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.