ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬೆಳೆ ಮಳೆ ಪಾಲು: ಎಪಿಎಂಸಿ ಅಧ್ಯಕ್ಷ, ಕಾರ್ಯದರ್ಶಿಗೆ ಮುತ್ತಿಗೆ

Lingaraj Badiger
Updated On : 19 Sept 2013, 11:11 am

ಕನ್ನಡಪ್ರಭ ವಾರ್ತೆ, ಮುದಗಲ್, ಸೆ.18
ಸ್ಥಳೀಯ ಕೃಷಿ ಉತ್ಪನ್ನ ಉಪ ಮಾರುಕಟ್ಟೆಗೆ ರೈತರು ಮಾರಾಟ ಮಾಡಲು ತಂದ ಸೂರ್ಯಕಾಂತಿಯನ್ನು ಬಿಸಿಲಿಗೆ ಒಣಗಲು ಹಾಕಿದ ಸಮಯದಲ್ಲಿ ಮಳೆ ಬಂದು ತೊಯ್ದಿದ್ದರಿಂದ ರೈತರು ಕಂಗಾಲಾಗಿ ಮಾರುಕಟ್ಟೆಯಲ್ಲಿದ್ದ ಎಪಿಎಂಸಿ ಅಧ್ಯಕ್ಷ ಮಂಜುನಾಥ ಪಾಟೀಲ ಮತ್ತು ಕಾರ್ಯದರ್ಶಿ ರಂಗಪ್ಪ ಅವರಿಗೆ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ನೇತೃತ್ವದಲ್ಲಿ ಉಪ ಮಾರುಕಟ್ಟೆಯಲ್ಲಿಯೇ ಮುತ್ತಿಗೆ ಹಾಕಿದ ಘಟನೆ ನಡೆಯಿತು.
ಕೃಷಿ ಉತ್ಪನ್ನ ಉಪ ಮಾರುಕಟ್ಟೆಗೆ ಮುದಗಲ್ ಭಾಗದ ರೈತರು ಬೆಳೆದ ಸೂರ್ಯಕಾಂತಿಯನ್ನು ಮಾರಾಟಕ್ಕೆ ತಂದಿದ್ದರು. ಬಿಸಿಲಿಗೆ ಒಣಗಿಸಲು ವ್ಯಾಪಾರಸ್ಥರು ಸಲಹೆ ನೀಡಿದ್ದರಿಂದ ಅಂಗಡಿಕಾರರ ಕಟ್ಟೆ, ಚಾವಣಿ ಹಾಗೂ ರಸ್ತೆ ಮೇಲೆ ಹಾಕಲಾಗಿತ್ತು.
ಮಧ್ಯಾಹ್ನ 1 ಗಂಟೆ ಸುಮಾರಿಗೆ ದಿಢೀರನೆ ಮಳೆ ಸುರಿದಿದ್ದರಿಂದ ಒಣಗಿಸಲು ಹಾಕಿದ ಸೂರ್ಯಕಾಂತಿ ಫಸಲು ಒದ್ದೆಯಾಯಿತು. ರೈತರು ಸೂರ್ಯಕಾಂತಿಯನ್ನು ಚೀಲಕ್ಕೆ ತುಂಬಲು ಹರಸಾಹಸ ಪಡಬೇಕಾಯಿತು.
ರೈತರಿಗೆ ನ್ಯಾಯ ದೊರಕಿಸಲು ಒತ್ತಾಯ: ವಿಷಯವನ್ನರಿತ ಅಮರಣ್ಣ ಗುಡಿಹಾಳ ಮಾರುಕಟ್ಟೆಗೆ ತೆರಳುತ್ತಿದ್ದಂತೆ ಅಲ್ಲಿಂದ ನಿರ್ಗಮಿಸುತ್ತಿದ್ದ ಅಧ್ಯಕ್ಷರನ್ನು ಮತ್ತು ಕಾರ್ಯದರ್ಶಿಗಳನ್ನು ತಡೆದು ರೈತ ಸಮುದಾಯದೊಂದಿಗೆ ಮುತ್ತಿಗೆ ಹಾಕಿ ರೈತರಿಗೆ ನ್ಯಾಯ ದೊರಕಿಸುವಂತೆ ಒತ್ತಾಯಿಸಿದರು. ರೈತರು ಕಷ್ಟಪಟ್ಟು ಸೂರ್ಯಕಾಂತಿಯನ್ನು ಬೆಳೆದು ಮಾರಾಟಕ್ಕೆ ಬಂದಾಗ ರೈತರ ಮಾಲಿಗೆ ರಕ್ಷಣೆ ಇಲ್ಲದಂತಾಗಿದೆ. ಹಾನಿಗೆ ತಾವೇ ಪರಿಹಾರಧನ ಕೊಡಿಸಬೇಕೆಂದು ಪಟ್ಟು ಹಿಡಿದರು.
ರೈತರ ಬೇಡಿಕೆ ತಿರಸ್ಕರಿಸಿದ ಎಪಿಎಂಸಿ ಅಧ್ಯಕ್ಷ: ಎಪಿಎಂಸಿ ಅಧ್ಯಕ್ಷ ಮಂಜುನಾಥ ಪಾಟೀಲ ಇದಕ್ಕೆ ನಮ್ಮಲ್ಲಿ ಯಾವುದೇ ರೀತಿಯ ಪರಿಹಾರಧನ ನೀಡಲು ಸಾಧ್ಯವಾಗುವುದಿಲ್ಲ ಎಂದು ನಿರ್ದಾಕ್ಷಿಣ್ಯವಾಗಿ ರೈತರ ಬೇಡಿಕೆಯನ್ನು ತಿರಸ್ಕರಿಸಿದರು. ಆದರೆ ಇದೇ 26ರಿಂದ ಉಪ ಮಾರುಕಟ್ಟೆಯಲ್ಲಿ ಮತ್ತು ಲಿಂಗಸ್ಗೂರು ಮಾರುಕಟ್ಟೆಯಲ್ಲಿ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಇದಕ್ಕೆ ಕಾರ್ಯದರ್ಶಿ ರಂಗಪ್ಪ ಮಾತ್ರ ಹಾನಿಯಾದ ರೈತರ ಪಟ್ಟಿ ತಯಾರಿಸಿ ಸಹಾಯಕ ಆಯುಕ್ತರಿಗೆ ಮಾಹಿತಿ ನೀಡಲಾಗುವುದು ಎಂದು ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement