22ರಂದು ನೌಕರರ ಒಕ್ಕೂಟದ ಜಿಲ್ಲಾ ಸಮಾವೇಶ
ಕನ್ನಡಪ್ರಭ ವಾರ್ತೆ, ರಾಯಚೂರು, ಸೆ.19
ಕೇಂದ್ರ ಸರ್ಕಾರ ಜಾರಿಗೆ ತರಲು ಯೋಜಿಸಿರುವ ನೂತನ ಪಿಂಚಣಿ ಯೋಜನೆ ವಿರೋಧಿಸಿ ಸೆ.22ರಂದು ನಗರದಲ್ಲಿ ಜಿಲ್ಲಾ ಸಮಾವೇಶ ಆಯೋಜಿಸಲಾಗಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಮಹದೇವಪ್ಪ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೆ.22ರಂದು ನಗರದ ಪತ್ರಿಕಾ ಭವನದ ಮೊದಲ ಮಹಡಿಯ ಸಭಾಂಗಣದಲ್ಲಿ ಜಿಲ್ಲಾ ಸಮಾವೇಶ ಆಯೋಜಿಸಿದ್ದು, ಸಮಾವೇಶವನ್ನು ಸಂಘಟನೆಯ ರಾಜ್ಯಾಧ್ಯಕ್ಷ ಮಹದೇವಯ್ಯ ಮಠಪತಿ ಉದ್ಘಾಟಿಸಲಿದ್ದಾರೆಂದು ಹೇಳಿದರು.
ಹೊಸ ಪಿಂಚಣಿ ಪದ್ಧತಿಗೆ ವಿರೋಧ: ಸಮಾವೇಶದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಶಿವಶಂಕರ್, ಉಪಾಧ್ಯಕ್ಷ ಜಂಬಯ್ಯ ನಾಯಕ, ರಂಗನಾಥ ಹವಾಲ್ದಾರ್, ಜೆ.ಎಂ. ಚನ್ನಬಸಯ್ಯ ಸೇರಿ ಅನೇಕರು ಪಾಲ್ಗೊಳ್ಳಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 2006ರ ನಂತರದಲ್ಲಿ ಈ ಮೊದಲಿಗೆ ಜಾರಿಯಲ್ಲಿದ್ದ ಪಿಂಚಣಿ ರದ್ದುಗೊಳಿಸಿ ಹೊಸ ಪಿಂಚಣಿ ಪದ್ಧತಿ ಜಾರಿಗೆ ಮುಂದಾಗಿರುವುದನ್ನು ಖಂಡಿಸಲಾಗುತ್ತದೆ ಎಂದು ಹೇಳಿದರು.
ನೂತನ ಪಿಂಚಣಿ ಯೋಜನೆ ಅಡಿ ನೌಕರರು ಶೇ.10ರಷ್ಟು ವೇತನದಿಂದ ನೀಡಬೇಕು. ಅಷ್ಟೇ ಮೊತ್ತವನ್ನು ಸರ್ಕಾರ ನೀಡಿ ಹೀಗೆ ಸಂಗ್ರಹವಾಗುವ ಮೊತ್ತವನ್ನು ಫಂಡ್ ಮ್ಯಾನೇಜರ್ಗಳ ಮೂಲಕ ಷೇರುಪೇಟೆಯಲ್ಲಿ ತೊಡಗಿಸುವ ಉದ್ದೇಶ ಸರ್ಕಾರದ್ದಾಗಿದೆ. ಅದರಿಂದ ಬಂದ ಹಣವನ್ನೇ ನಿವೃತ್ತಿ ನಂತರದಲ್ಲಿ ಪಿಂಚಣಿಯಾಗಿ ನೀಡುವ ಚಿಂತನೆ ಸರ್ಕಾರದ್ದಾಗಿದೆ. ಆದರೆ ಇಂಥ ನೂತನ ಪಿಂಚಣಿಗೆ ನೌಕರರ ತೀವ್ರ ವಿರೋಧವಿದೆ ಎಂದು ಎಚ್ಚರಿಸಿದರು.
ನೌಕರರ ಭವಿಷ್ಯದೊಂದಿಗೆ ಚೆಲ್ಲಾಟ: ಜಾಗತಿಕ ಮಟ್ಟದಲ್ಲಿ ಇಂಥದ್ದೇ ಪಿಂಚಣಿ ವ್ಯವಸ್ಥೆ ಅಳವಡಿಸಿಕೊಂಡಿದ್ದ ವಿದೇಶದ ಸರ್ಕಾರಗಳು ಆರ್ಥಿಕ ಕುಸಿತದಿಂದ ದಿವಾಳಿಯಾಗಿ ನೌಕರರು ಸಂಕಷ್ಟಕ್ಕೆ ಸಿಲುಕಿದ ಉದಾಹರಣೆ ಇರುವಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪುನಾ ನೌಕರರ ಭವಿಷ್ಯದೊಂದಿಗೆ ಚೆಲ್ಲಾಟವಾಡುವಂಥ ಕಾರ್ಯಕ್ಕೆ ಮುಂದಾಗಿವೆ ಎಂದು ಟೀಕಿಸಿದರು.
ರಾಜ್ಯದಲ್ಲಿ 1.25 ಲಕ್ಷ ಹುದ್ದೆಗಳು ವಿವಿಧ ಇಲಾಖೆಗಳಲ್ಲಿ ಖಾಲಿಯಿವೆ. ಅದೇ ರೀತಿ ದಿನಗೂಲಿ, ಗುತ್ತಿಗೆ ನೌಕರರ ಮೇಲೆ ನಿರಂತರ ದೌರ್ಜನ್ಯ ನಡೆಸಲಾಗುತ್ತಿದೆ. ವಸ್ತ್ರಸಂಹಿತೆಯಂಥ ನೌಕರರ ವಿರೋಧಿ ನೀತಿಗಳನ್ನು ಸರ್ಕಾರಗಳು ಜಾರಿಗೆ ತರುವ ಮೂಲಕ ನೌಕರರ ಶೋಷಣೆಗೆ ಮುಂದಾಗಿವೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ನೌಕರರ ಒಕ್ಕೂಟವನ್ನು ಬಲಪಡಿಸುವ ನಿಟ್ಟಿನಲ್ಲಿ ಸೆ. 22ರಂದು ಸಮಾವೇಶ ಆಯೋಜಿಸಿದ್ದು ಜಿಲ್ಲೆಯಲ್ಲಿನ ಎಲ್ಲ ಸರ್ಕಾರಿ ನೌಕರರ ಒಕ್ಕೂಟದ ಸದಸ್ಯರು ಪಾಲ್ಗೊಂಡು ಯಶಸ್ಸುಗೊಳಿಸಲು ಮನವಿ ಮಾಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ಪ್ರಮುಖರಿದ್ದರು.