ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಅನ್ಯ ಕಾರ್ಯಗಳಿಂದ ಶಿಕ್ಷಕರ ಮುಕ್ತಗೊಳಿಸಿ'

Lingaraj Badiger
Updated On : 20 Sept 2013, 11:05 am

ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಸೆ.19
ಶಿಕ್ಷಣ ಇಲಾಖೆಯ ಅನೇಕ ಜನಪರ ಯೋಜನೆ ಯಶಸ್ವಿಗೊಳಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದ್ದು, ಮಕ್ಕಳ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸಮಯ ಇಲ್ಲದಂತಾಗಿದೆ. ಕೂಡಲೇ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಅನ್ಯ ಕಾರ್ಯಗಳಿಂದ ಮುಕ್ತಗೊಳಿಸುವಂತೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಶಾಸಕರಾದ ಮಾನಪ್ಪ ವಜ್ಜಲ್, ಪ್ರತಾಪಗೌಡ ಪಾಟೀಲರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಶಿವಯೋಗಪ್ಪ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಪದಾಧಿಕಾರಿಗಳು, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಶಾಲಾ ಕಾಮಗಾರಿ, ಅಕ್ಷರ ದಾಸೋಹ, ಕುಡಿವ ನೀರು, ಶೌಚಾಲಯ, ಸ್ವಚ್ಛತೆ, ಬಿಎಲ್‌ಒಗಳ ಕಾರ್ಯ, ಮಕ್ಕಳಿಗೆ ಪೌಷ್ಟಿಕಾಂಶದ ಮಾತ್ರೆಗಳ ಪೂರೈಕೆ, ಕ್ಷೀರಭಾಗ್ಯ ಯೋಜನೆ, ಸಮವಸ್ತ್ರ ಖರೀದಿ ಹಾಗೂ ಪೂರೈಕೆ ಸೇರಿದಂತೆ ಅನೇಕ ಜವಾಬ್ದಾರಿ ಹೊರಿಸಲಾಗಿದೆ.
ಮಾನಸಿಕ ನೆಮ್ಮದಿ ಹರಣ: ಜೊತೆಗೆ ಮಕ್ಕಳ ಶಿಷ್ಯವೇತನ ಮಂಜೂರಿಗೆ ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯಗಳು ಹಾಗೂ ಆರೋಗ್ಯ ಇಲಾಖೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು. ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಾನಸಿಕ ನೆಮ್ಮದಿ ಇಲ್ಲದಂತಾಗಿದೆ.
ಶಾಲಾ ಹಂತದ ಕಾರ್ಯಕ್ರಮಗಳಲ್ಲಿ ಫೋಟೋ ಸಹಿತ ಮಾಹಿತಿ ನೀಡುವ ಸುಮಾರು 23 ಕಾರ್ಯಕ್ರಮಗಳನ್ನು ಆಯಾ ವರ್ಷದಲ್ಲಿ ನೆರವೇರಿಸಲಾಗುತ್ತಿದೆ. ಪ್ರತಿ ವರ್ಷ 2 ಬಾರಿ ಸಂಪೂರ್ಣ ಶಾಲಾ ಮಾಹಿತಿ ಎಸ್‌ಎಲ್‌ಎಫ್-1 ಮತ್ತು 2ರ ಮಾಹಿತಿ ನೀಡುವುದು. ಪ್ರತಿ ತಿಂಗಳ ಕೆಡಿಪಿ ಮಾಹಿತಿ, ಸಸಿಇ ಕಾರ್ಯ ಯೋಜನೆಯಲ್ಲಿ ಪ್ರತಿ ಮಗುವಿನ ಮಾಹಿತಿ ನೀಡುವಲ್ಲಿ ಶಿಕ್ಷಕರು ಹಗಲಿರುಳು ಶ್ರಮಿಸುವಂತಾಗಿದೆ.
ಸಮಯದ ಕೊರತೆ: ನಲಿ-ಕಲಿ ಯೋಜನೆ, ಪರಿಹಾರ ಭೋದನೆ, ರೇಡಿಯೋ ಕಾರ್ಯಕ್ರಮಗಳ ಜೊತೆಗೆ ಸಹಪಠ್ಯ ಚಟುವಟಿಕೆ ಕಾರ್ಯಗಳ ಯಶಸ್ವಿಗೊಳಿಸಲು ಶಿಕ್ಷಕರಿಗೆ ಕಲಿಕಾ ವಾತಾವರಣಕ್ಕೆ ಸಮಯದ ಕೊರತೆ ಉಂಟಾಗಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ತೀವ್ರ ತೊಂದರೆಯಾಗುತ್ತಿದೆ.
ಅಲ್ಲದೆ ಶಿಕ್ಷಕರ ಅನೇಕ ಕೆಲಸಗಳಿಗೆ ಕೆಲ ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಮಾಹಿತಿ ಹಕ್ಕಿನಡಿ ತೊಂದರೆ ನೀಡುತ್ತಿದ್ದಾರೆ. ಇದರಿಂದ ವೃತ್ತಿಯೇ ಬೇಡವೆಂಬ ಮನೋಭಾವ ಶಿಕ್ಷಕರಲ್ಲಿ ಉಂಟಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಬೇಡಿಕೆಗಳು: ಶಾಲಾ ಕಾಮಗಾರಿ ಹಾಗೂ ಬಿಎಲ್‌ಒ ಕಾರ್ಯದಿಂದ ಶಿಕ್ಷಕರನ್ನು ದೂರವಿರಿಸಬೇಕು. ಅಕ್ಷರ ದಾಸೋಹ ಹಾಗೂ ಕ್ಷೀರಭಾಗ್ಯ ಯೋಜನೆಯಡಿ ಪ್ರತ್ಯೇಕ ಸಿಬ್ಬಂದಿ ನೇಮಿಸಬೇಕು. ಮಾಹಿತಿ ಹಕ್ಕಿನಡಿ ಇಲಾಖೆ ಕೈಬಿಡಬೇಕು. ಸಮವಸ್ತ್ರ ಖರೀದಿ ಹಾಗೂ ಪೂರೈಕೆ ಜವಾಬ್ದಾರಿ ಇಲಾಖೆ ವಹಿಸಬೇಕು. ಕುಡಿವ ನೀರು, ಶೌಚಾಲಯ ಸ್ವಚ್ಛತಾ ವ್ಯವಸ್ಥೆಗೆ ಪ್ರತ್ಯೇಕ ಸಿಬ್ಬಂದಿ ನೇಮಿಸಬೇಕು. ಪ್ರತಿ ಶಾಲೆಗೆ ಸಹಾಯಕ ದರ್ಜೆ ಹಾಗೂ ಪರಿಚಾರಕರನ್ನು ನೀಡಬೇಕು. ಪೌಷ್ಟಿಕಾಂಶ ಮಾತ್ರೆಗಳ ಹಂಚಿಕೆಯನ್ನು ನೇರವಾಗಿ ಆರೋಗ್ಯ ಇಲಾಖೆಗೆ ವಹಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement