ಮುಂದುವರಿದ ವರುಣನ ರುದ್ರನರ್ತನ
ಕನ್ನಡಪ್ರಭ ವಾರ್ತೆ, ರಾಯಚೂರು, ಸೆ.19
ಜಿಲ್ಲೆಯಲ್ಲಿ ಧಾರಾಕಾರ ಮಳೆಯ ಅವಾಂತರ ಮುಂದುವರಿದಿದೆ. ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ವಿತರಣೆ ಕಾಲುವೆಯು ಮಳೆಯ ನೀರಿನಿಂದ ಹಾನಿಗೀಡಾಗಿದ್ದು, ರೈತರು ಆತಂಕಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲೇ ಅತೀ ಹೆಚ್ಚು ಮಳೆ ತಾಲೂಕಿನ ಜೇಗರಕಲ್ ಗ್ರಾಮದಲ್ಲಿ 42 ಮಿಮೀ.ನಷ್ಟು ಸುರಿದಿದೆ.
ನಗರದಲ್ಲಿಯೂ ಬುಧವಾರ ರಾತ್ರಿ ಮತ್ತು ಗುರುವಾರ ಸಂಜೆವರೆಗೆ ಧಾರಾಕಾರ ಮಳೆ ಮುಂದುವರಿದಿತ್ತು. ಮಳೆಯಿಂದಾಗಿ ನಗರದ ಚರಂಡಿಗಳು ಉಕ್ಕಿ ಹರಿದು ರಸ್ತೆಗೆ ನುಗ್ಗಿದ್ದರಿಂದ ರಸ್ತೆ ಸಂಚಾರಕ್ಕೆ ತೀವ್ರ ವ್ಯತ್ಯಯವಾಯಿತು. ಅದೇ ರೀತಿ ನಗರದ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾಯಿತು.
ಪ್ರಯಾಣಿಕರ ಪರದಾಟ: ಮಳೆಯ ನೀರು ಭಾರೀ ಪ್ರಮಾಣದಲ್ಲಿ ರಸ್ತೆಗೆ ನುಗ್ಗಿದ್ದರಿಂದ ರಸ್ತೆಗಳಲ್ಲಿರುವ ತಗ್ಗುಗಳಲ್ಲಿ ನೀರು ಸಂಗ್ರಹಗೊಂಡು ರಸ್ತೆ ಸಂಚಾರಕ್ಕೆ ಭಾರೀ ವ್ಯತ್ಯಯವಾಗಿ ಚಾಲಕರು ಆಡಳಿತಕ್ಕೆ ಹಿಡಿಶಾಪ ಹಾಕುತ್ತಲೇ ಸಂಚರಿಸುವಂತಾಯಿತು. ಈ ಮಧ್ಯೆ ನಗರದ ಬಸವೇಶ್ವರ ವೃತ್ತದ ಬಳಿಯ ರೇಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಜಾರಿಯಲ್ಲಿರುವುದರಿಂದ ಲಿಂಗಸ್ಗೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಮನ್ಸಲಾಪುರ ರಸ್ತೆಯಲ್ಲಿ ರಸ್ತೆ ಸಂಚಾರಕ್ಕೆ ಮಳೆಯಿಂದಾಗಿ ಅಡ್ಡಿಯಾಯಿತು.
ತೀವ್ರ ಹದಗೆಟ್ಟ ಮನ್ಸಲಾಪುರ ರಸ್ತೆ: ಕಳೆದ ಕೆಲ ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮನ್ಸಲಾಪುರ ರಸ್ತೆಯಲ್ಲಿ ಭಾರೀ ಆಳದ ತಗ್ಗುಗಳಾಗಿದ್ದು, ಈ ರಸ್ತೆಯಲ್ಲಿ ಕಳೆದ ತಡರಾತ್ರಿಯಿಂದಲೇ ನೂರಾರು ವಾಹನಗಳು ಮುಂದೆ ಚಲಿಸಲು ಸಾಧ್ಯವಾಗದೇ ಸಾಲಾಗಿ ನಿಂತಿದ್ದು ಕಂಡುಬಂದಿತು.
ನಗರದ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಟ್ರಾಫಿಕ್ ಜಾಮ್‌ನಿಂದ ಮುಕ್ತಗೊಳಿಸಲು ಪ್ರಯಾಸಪಟ್ಟರು. ಅದೇ ರೀತಿ ನಗರದ ವಿದ್ಯಾಭಾರತಿ ಶಾಲೆಯ ಬಳಿಯೂ ರೇಲ್ವೆ ಗೇಟ್‌ನ ಮೂಲಕ ಸಾರಿಗೆ ಸಂಸ್ಥೆಯ ಬಸ್ ಗಳು ಲಿಂಗಸ್ಗೂರು ಮತ್ತಿತರೆಡೆ ಅನಿವಾರ್ಯವಾಗಿ ಸಾಗತೊಡಗಿದ್ದರಿಂದ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿ ವಾಹನಗಳ ಸವಾರರು ಪರದಾಡಿದರು. ಈ ಮಧ್ಯೆ ಬುಧವಾರ ರಾತ್ರಿಯಿಂದೀಚೆಗೆ ನಗರದಲ್ಲಿ 16.6 ಮಿಮೀ ಮಳೆಯಾಗಿದೆ.
ಎಡದಂಡೆ ವಿತರಣೆ ಕಾಲುವೆಗೆ ಹಾನಿ: ತಾಲೂಕಿನ ಆಶಾಪುರ ಗ್ರಾಮದ ಬಳಿ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ 131 ಮೈಲ್‌ನಲ್ಲಿ 102ನೇ ವಿತರಣೆ ಕಾಲುವೆಯು ಮಳೆಯ ನೀರು ಕಾಲುವೆಗೆ ಸೇರಿ ಕಾಲುವೆಯಲ್ಲಿ ಆಗಲೇ ಹರಿಯುತ್ತಿದ್ದ ನೀರಿನ ಒತ್ತಡಕ್ಕೆ ಸಿಲುಕಿ ಹಾಳಾಗಿದೆ. ಕಾಲುವೆಯ ನೀರು ಕಾಲುವೆಯ ಅಕ್ಕಪಕ್ಕದ ಗದ್ದೆಗಳಿಗೆ ನುಗ್ಗಿದ್ದು ಅದರಿಂದ ಅಪಾರ ಪ್ರಮಾಣದ ಹತ್ತಿ ಬೆಳೆಗೆ ಹಾನಿಯಾಗಿದೆ.
ಮಳೆಯ ಪ್ರಮಾಣ: ನಗರ ಸೇರಿದಂತೆ ಜಿಲ್ಲಾದ್ಯಂತ ಬುಧವಾರ ರಾತ್ರಿಯಿಂದೀಚೆಗೆ ಧಾರಾಕಾರ ಮಳೆಯ ಅಬ್ಬರ ಮುಂದುವರಿದಿದ್ದು, ತಾಲೂಕಿನ ಯರಮರಸ್ ನಲ್ಲಿ 18.1 ಮಿಮೀ, ಯರಗೇರಾ- 13 ಮಿಮೀ, ಗಿಲ್ಲೆಸೂಗೂರು- 8 ಮಿಮೀ, ಕಲ್ಮಲಾ- 22 ಮಿಮೀ, ಜೇಗರಕಲ್- 42 ಮಿಮೀ, ಗಾಜರಾಳ-5.8 ಮಿಮೀ ಹಾಗೂ ಚಂದ್ರಬಂಡಾದಲ್ಲಿ 5.9 ಮಿಮೀ.ನಷ್ಟು ಮಳೆಯಾಗಿದೆ.
ಮಾನವಿ ಪಟ್ಟಣದಲ್ಲಿ 16.6 ಮಿಮೀ, ಅದೇ ತಾಲೂಕಿನ ಕುರ್ಡಿ-19.4 ಮಿಮೀ, ಕಲ್ಲೂರು- 5 ಮಿಮೀ, ಸಿರವಾರ- 26.4 ಮಿಮೀ, ಕವಿತಾಳ- 16 ಮಿಮೀ, ಪಾಮನಕಲ್ಲೂರು- 9.3 ಮಿಮೀ, ರಾಜಲಬಂಡಾ-7ಮಿಮೀ, ಹಾಲಾಪುರ- 20 ಮಿಮೀ ಮಳೆ ಬಿದ್ದಿದೆ.
ದೇವದುರ್ಗದಲ್ಲಿ 3.4 ಮಿಮೀ, ಗಬ್ಬೂರು- 7.4 ಮಿಮೀ, ಅರಕೇರಾ- 29.4 ಮಿಮೀ, ಗಲಗ- 29 ಮಿಮೀ, ಜಾಲಹಳ್ಳಿಯಲ್ಲಿ 1.5 ಮಿಮೀ ಮಳೆ ಬಿದ್ದಿದ್ದರೆ, ಲಿಂಗಸ್ಗೂರುನಲ್ಲಿ 8.6 ಮಿಮೀ, ಮಸ್ಕಿ- 1.6 ಮಿಮೀ, ಹಟ್ಟಿ-5 ಮಿಮೀ, ಮುದಗಲ್‌ನಲ್ಲಿ 11.4 ಮಿಮೀ.ನಷ್ಟು ಮಳೆಯಾಗಿದೆ.
ಸಿಂಧನೂರಿನಲ್ಲಿ 10.8 ಮಿಮೀ, ಜವಳಗೇರಾ- 13 ಮಿಮೀ, ಸಾಲಗುಂದಾ- 4.2 ಮಿಮೀ, ಬಳಗಾನೂರು-9 ಮಿಮೀ, ಗುಡದೂರು- 7.3 ಮಿಮೀ, ವಲ್ಕಂದಿನ್ನಿ- 28.2 ಮಿಮೀ, ಗುಂಜಳ್ಳಿ- 12 ಮಿಮೀ ಹಾಗೂ ಜಾಲಿಹಾಳ- 4.4 ಮಿಮೀ.ನಷ್ಟು ಮಳೆಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಭಾರಿ ಮಳೆ: ಅಧಿಕಾರಿಗಳಿಗೆ ಸಿಇಒ ಎಚ್ಚರಿಕೆ
ರಾಯಚೂರು: ಜಿಲ್ಲಾದ್ಯಂತ ಎಡೆಬಿಡದೆ ಮಳೆ ಸುರಿಯುತ್ತಿದ್ದು, ತುರ್ತು ಪರಿಹಾರ ಕೈಗೊಳ್ಳಲು ಅಗತ್ಯವಿರುವ ವಿವಿಧ ಇಲಾಖೆಗಳ ಅಧಿಕಾರಿಗಳು ಜಿಲ್ಲಾಡಳಿತದ ಪೂರ್ವಾನುಮತಿಯಿಲ್ಲದೇ ಜಿಲ್ಲಾ ಕೇಂದ್ರ ತೊರೆಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಈ ಕುರಿತು ಜಿಪಂ ಸಿಇಒ ಡಾ. ಮುದ್ದುಮೋಹನ್ ಆದೇಶ ಹೊರಡಿಸಿದ್ದು, ಧಾರಾಕಾರ ಮಳೆಯಿಂದಾಗಿ ಸಾರ್ವಜನಿಕರ ಆಸ್ತಿ ರಕ್ಷಣೆ, ನೆರವಿನ ಅವಶ್ಯಕತೆಗಳನ್ನು ಪೂರೈಸಲು ಜಿಪಂ ವ್ಯಾಪ್ತಿಯ ಅಧಿಕಾರಿ ಹಾಗೂ ಸಿಬ್ಬಂದಿ ಸೇವೆ ಅಗತ್ಯ.
ಜಿಲ್ಲಾ, ತಾಲೂಕುಮಟ್ಟದ ಅಧಿಕಾರಿಗಳು, ಗ್ರಾಪಂ ಪಿಡಿಒ ಕಾರ್ಯನಿರ್ವಹಣೆ ಅವಶ್ಯಕ. ಅಧಿಕಾರಿಗಳು ಮತ್ತು ಸಿಬ್ಬಂದಿ ತಮಗೆ ಸೂಚಿಸಿದ ಕೇಂದ್ರ ಸ್ಥಾನದಲ್ಲಿದ್ದು, ಪರಿಹಾರ ಕಾರ್ಯ ಕೈಗೊಳ್ಳಲು ಹಾಗೂ ಪೂರ್ವಾನುಮತಿಯಿಲ್ಲದೇ ಕೇಂದ್ರ ಸ್ಥಾನ ತೊರೆಯುವಂತಿಲ್ಲ. ಆದೇಶ ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.