ಹೊಲಗಳಿಗೆ ನುಗ್ಗಿದ ಎಡದಂಡೆ ನೀರು
ರಾಯಚೂರು: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ತುಂಗಭದ್ರಾ ಎಡದಂಡೆ ಕಾಲುವೆಯ 131ನೇ ಮೈಲ್‌ನಲ್ಲಿ ವಿತರಣೆ ಕಾಲುವೆಯ ಒಳಮೈ ಗೋಡೆಯು ಹಾನಿಗೀಡಾಗಿ ರೈತರ ಹೊಲಗಳಿಗೆ ನೀರು ನುಗ್ಗಿದ್ದರಿಂದ ಅಪಾರ ಬೆಳೆ ಹಾನಿ ಸಂಭವಿಸಿದೆ.
ತಾಲೂಕಿನ ಆಶಾಪುರ- ಹೊಸೂರು ಮಧ್ಯೆ ತುಂಗಭದ್ರಾ ಎಡದಂಡೆಯ 131ನೇ ಮೈಲ್‌ನ 102ನೇ ವಿತರಣೆ ಕಾಲುವೆಯಲ್ಲಿ ಈಗಾಗಲೇ ಹರಿಯುತ್ತಿದ್ದ ಭಾರೀ ಪ್ರಮಾಣದ ನೀರಿಗೆ ಧಾರಾಕಾರ ಮಳೆಯಿಂದ ನೀರು ಉಕ್ಕಿ ಹರಿದು ಸೇರಿದ್ದರಿಂದ ಕಾಲುವೆಯಲ್ಲಿನ ಅಪಾರ ನೀರು ಕಾಲುವೆಯಿಂದ ಹೊರ ನುಗ್ಗಿದೆ. ಅದರಿಂದಾಗಿ ಕಾಲುವೆಯ ಅಕ್ಕಪಕ್ಕದ ಹೊಲಗಳಿಗೆ ಭಾರೀ ನೀರು ನುಗ್ಗಿದೆ.
ಕೊಚ್ಚಿ ಹೋದ ಬೆಳೆ, ಮಣ್ಣು: ಹೊಲದಲ್ಲಿ ರೈತರು ಬೆಳೆದಿದ್ದ ನೂರಾರು ಎಕರೆ ಹತ್ತಿ ಮತ್ತಿತರೆ ಬೆಳೆ ಹಾಳಾಗಿದ್ದು, ಫಲವತ್ತಾದ ಮಣ್ಣು ನೀರಿನೊಂದಿಗೆ ಕೊಚ್ಚಿ ಹೋಗಿದೆ. ರೈತರು ಆತಂಕಕ್ಕೆ ಸಿಲುಕಿದ್ದಾರೆ. ಕಳೆದ ಕೆಲ ದಿನಗಳಿಂದ ಜಿಲ್ಲಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತುಂಗಭದ್ರಾ ಎಡದಂಡೆ ಕಾಲುವೆಯಿಂದ ಮೇಲ್ಭಾಗದ ರೈತರು ಅಷ್ಟಾಗಿ ಬಳಕೆ ಮಾಡುತ್ತಿಲ್ಲ.
ಅದರಿಂದಾಗಿ ಕಾಲುವೆಯ ಕಡೆಯ ಭಾಗದ 131ನೇ ಮೈಲ್‌ನಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದೆ. ಇದೇ ವೇಳೆ ತಾಲೂಕಿನಾದ್ಯಂತ ಧಾರಾಕಾರ ಮಳೆಯಾಗುತ್ತಿರುವುದರಿಂದ ಹೊಲದಲ್ಲಿನ ಮಳೆಯ ನೀರು ಕಾಲುವೆಗೆ ಸೇರಿದೆ. ಅದರಿಂದ ಕಾಲುವೆಯಲ್ಲಿ ದಿಢೀರ್ ಆಗಿ ಪ್ರವಾಹ ಹೆಚ್ಚಿದ್ದರಿಂದ ಕಾಲುವೆಯ ಒಂದು ಭಾಗವು ಕೊಚ್ಚಿ ಹೋಗಿ ಹೊಲಗಳಿಗೆ ನೀರು ನುಗ್ಗಿದ್ದು ಬೆಳೆ ಹಾಳಾಗಿದೆ. ಸುದ್ದಿ ತಿಳಿದ ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ.