ತಗ್ಗಿದ ಮಳೆ; ಪೋತಗಲ್ ಕೆರೆ ಏರಿಗೆ ರಂಧ್ರ
ಕನ್ನಡಪ್ರಭ ವಾರ್ತೆ, ರಾಯಚೂರು, ಸೆ.20
ನಗರ ಸೇರಿದಂತೆ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಸತತ ಸುರಿಯುತ್ತಿದ್ದ ಮಳೆಯ ಅಬ್ಬರ ಕೊಂಚ ತಗ್ಗಿದೆ. ಆದರೆ ಮಳೆಯಿಂದಾಗಿ ತುಂಬಿದ್ದ ಪೋತಗಲ್ ಕೆರೆಯಲ್ಲಿ ಬೊಂಗಾ(ರಂಧ್ರ) ಬಿದ್ದು, ರೈತರಲ್ಲಿ ಕೆಲ ಕಾಲ ಆತಂಕ ಮೂಡಿಸಿತು. ನಂತರ ರೈತರೇ ದುರಸ್ತಿಗೊಳಿಸಿದ ಪ್ರಸಂಗ ನಡೆಯಿತು.
ನಗರದಲ್ಲಿ ಕಳೆದೊಂದು ವಾರದಿಂದ ಬಿಡದೇ ಸುರಿಯುತ್ತಿದ್ದ ಧಾರಾಕಾರ ಮಳೆಯ ಅಬ್ಬರ ಶುಕ್ರವಾರ ತಗ್ಗಿದ್ದು, ಜನತೆ ನಿರಾಳತೆ ಅನುಭವಿಸಿದರು. ಆದರೆ ಸುರಿದ ಮಳೆಯಿಂದಾಗಿ ರಸ್ತೆ ಹಾಳಾಗಿದ್ದು ವಾಹನಗಳ ಸಂಚಾರಕ್ಕೆ ತೀವ್ರ ವ್ಯತ್ಯಯ ಮುಂದುವರಿದಿದೆ.
ಮನ್ಸಲಾಪುರಕ್ಕೆ ಪರ್ಯಾಯ ಮಾರ್ಗ: ಈ ಮಧ್ಯೆ ನಗರಕ್ಕೆ ಲಿಂಗಸ್ಗೂರು ಕಡೆಯಿಂದ ಸಂಪರ್ಕ ಕಲ್ಪಿಸುವ ಪರ್ಯಾಯವಾಗಿ ಬಳಕೆಯಾಗುತ್ತಿರುವ ಮನ್ಸಲಾಪುರ ರಸ್ತೆಯು ತೀರಾ ಹದಗೆಟ್ಟಿದ್ದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಹೀಗಾಗಿ ಜಿಲ್ಲಾಡಳಿತವು ವಿದ್ಯಾಭಾರತಿ ಶಾಲೆಯ ಬಳಿಯ ರೇಲ್ವೆ ಗೇಟ್ ಮೂಲಕವೂ ಬೃಹತ್ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರಿಂದ ದಟ್ಟಣೆ ಹೆಚ್ಚಾಗಿತ್ತು.
ಈ ಹಿನ್ನೆಲೆಯಲ್ಲಿ ಈಗಾಗಲೇ ಸಿದ್ಧವಾಗಿದ್ದ ಹೈದರಾಬಾದ್ ರಸ್ತೆಯಲ್ಲಿ ಬೈಪಾಸ್ ರಸ್ತೆಯನ್ನು ಶುಕ್ರವಾರ ಬೆಳಗ್ಗೆಯಿಂದಲೇ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಹೀಗಾಗಿ ಸಾರಿಗೆ ಸಂಸ್ಥೆಯ ಬಸ್‌ಗಳು ಮತ್ತು ಸರಕು ಹೊತ್ತ ವಾಹನಗಳ ಸಂಚಾರದಲ್ಲಿ ಉಂಟಾಗಿದ್ದ ಅಡಚಣೆ ನಿವಾರಣೆಯಾಗಿದೆ.
ಸದ್ಯ ಆತಂಕ ದೂರ: ತಾಲೂಕಿನ ಪೋತಗಲ್ ಗ್ರಾಮದ ಕೆರೆಯು ಕಳೆದ ಕೆಲ ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಭರ್ತಿಯಾಗಿದ್ದು, ಕೆರೆಯ ಏರಿಗೆ ಬಳಸಿದ ಮಣ್ಣು ಕುಸಿದಿದ್ದರಿಂದ ರಂಧ್ರ ಉಂಟಾಗಿ ರೈತರು ಆತಂಕದ ಪರಿಸ್ಥಿತಿ ಎದುರಿಸಿದ ಘಟನೆ ನಡೆದಿದೆ. ರೈತರೇ ರಂಧ್ರವನ್ನು ಮಣ್ಣು ಹಾಕಿ ಮುಚ್ಚಿದ್ದು ಸದ್ಯಕ್ಕೆ ಆತಂಕ ದೂರವಾಗಿದೆ.
ಪೋತಗಲ್ ಕೆರೆಯಲ್ಲಿ ಬೊಂಗಾ(ರಂಧ್ರ) ಉಂಟಾಗಿದ್ದರೂ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಧಾವಿಸದಿರುವುದು ಗ್ರಾಮದ ರೈತರಲ್ಲಿ ಆಕ್ರೋಶಕ್ಕೆ ದಾರಿಯಾಗಿದೆ. ಕಳೆದ ಬೇಸಿಗೆಯಲ್ಲಷ್ಟೇ ಈ ಕೆರೆ ಸೇರಿದಂತೆ ಸುತ್ತಲಿನ ಗ್ರಾಮಗಳ ಕೆರೆ ದುರಸ್ತಿ ಕೈಗೊಂಡಿದ್ದರೂ ಸದ್ಯ ಕೆರೆಯಲ್ಲಿ ರಂಧ್ರ ಉಂಟಾಗಿರುವುದು ಕಳಪೆ ಕಾಮಗಾರಿಯನ್ನು ಸಾಬೀತು ಮಾಡಿದೆ ಎಂದು ರೈತರು ಆರೋಪಿಸಿದರು.
ಮಳೆ ಇಳಿಮುಖ: ಈ ಮಧ್ಯೆ ನಗರ ಸೇರಿದಂತೆ ಜಿಲ್ಲಾದ್ಯಂತ ಮಳೆಯ ಅಬ್ಬರ ಗುರುವಾರ ರಾತ್ರಿಯಿಂದೀಚೆಗೆ ತಗ್ಗಿದ್ದು ಜನಜೀವನ ಸಹಜತೆಗೆ ಮರಳುತ್ತಿದೆ. ನಗರದಲ್ಲಿ ಗುರುವಾರ ರಾತ್ರಿಯಿಂದೀಚೆಗೆ 7 ಮಿಮೀ ಮಳೆಯಾಗಿದೆ. ತಾಲೂಕಿನ ಜೇಗರಕಲ್- 5.2 ಮಿಮೀ, ಕಲ್ಮಲಾ- 3.4 ಮಿಮೀ, ಗಿಲ್ಲೆಸೂಗೂರು- 2 ಮಿಮೀ, ಯರಗೇರಾ- 19 ಮಿಮೀ, ಗಾಜರಾಳ- 4.6 ಮಿಮೀ, ದೇವಸೂಗೂರು- 2.8 ಮಿಮೀ, ಯರಮರಸ್-14.8 ಮಿಮೀ ಮತ್ತು ಚಂದ್ರಬಂಡಾ- 15 ಮಿಮೀ ಮಳೆಯಾಗಿದೆ.
ಮಾನವಿಯಲ್ಲಿ 4 ಮಿಮೀ, ರಾಜಲಬಂಡಾ- 3 ಮಿಮೀ, ಸಿರವಾರ- 6.2 ಮಿಮೀ, ಕಲ್ಲೂರು- 1.2 ಮಿಮೀ, ಕುರ್ಡಿ- 13.2 ಮಿಮೀ, ಹಾಲಾಪುರ- 3.2 ಮಿಮೀ, ಕವಿತಾಳ- 1ಮಿಮೀ, ಕುರುಕುಂದಾ-8 ಮಿಮೀ, ಮಲ್ಲಟ- 13 ಮಿಮೀ ಮಳೆ ಬಿದ್ದಿದೆ. ದೇವದುರ್ಗದಲ್ಲಿ ಅತೀ ಹೆಚ್ಚು 61.4 ಮಿಮೀ ಮಳೆ ಬಿದ್ದಿದೆ. ಅದೇ ತಾಲೂಕಿನ ಗಬ್ಬೂರು- 6 ಮಿಮೀ, ಗಲಗ- 6.4 ಮಿಮೀ ಹಾಗೂ ಜಾಲಹಳ್ಳಿ- 13.5 ಮಿಮೀ ಮಳೆಯಾಗಿದೆ.
ಲಿಂಗಸ್ಗೂರಲ್ಲಿ 4 ಮಿಮೀ, ಹಟ್ಟಿ-5 ಮಿಮೀ, ಮಸ್ಕಿ- 1.2 ಮಿಮೀ ಹಾಗೂ ಮುದಗಲ್‌ನಲ್ಲಿ 5 ಮಿಮೀ ಮಳೆಯಾಗಿದ್ದು, ಸಿಂಧನೂರಿನಲ್ಲಿ 14.7 ಮಿಮೀ, ವಲ್ಕಂದಿನ್ನಿ- 3.6 ಮಿಮೀ, ಜವಳಗೇರಾ-12.2 ಮಿಮೀ, ತುರ್ವಿಹಾಳ- 7 ಮಿಮೀ, ಗುಂಜಳ್ಳಿ- 8.9 ಮಿಮೀ, ಜಾಲಿಹಾಳ- 9.2 ಮಿಮೀ, ಗುಡದೂರು- 6.2 ಮಿಮೀ, ಹೆಡಗಿನಾಳ- 14.4 ಮಿಮೀ, ಸಾಲಗುಂದಾ- 33.4 ಮಿಮೀ, ಬಳಗಾನೂರು- 8 ಮಿಮೀ ಮಳೆಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.