ನೆರೆಪೀಡಿತ ಪ್ರದೇಶ ಘೋಷಣೆಗೆ ಆಗ್ರಹ
ದೇವದುರ್ಗ: ಪಟ್ಟಣವನ್ನು ನೆರೆ ಪೀಡಿತ ಪ್ರದೇಶವೆಂದು ಘೋಷಿಸಿ ಪರಿಹಾರ ಕಾರ್ಯ ಕೈಗೊಳ್ಳಲು ಅನುದಾನ ಮಂಜೂರಾತಿಗೆ ಆಗ್ರಹಿಸಿ ಪುರಸಭೆಯ ಅಧ್ಯಕ್ಷ ಫಕ್ರೋದ್ದೀನ್ ಗೌರಂಪೇಟ ಒತ್ತಾಯಿಸಿದ್ದಾರೆ.
ತಹಸೀಲ್ದಾರ ಮುಖಾಂತರ ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಪಟ್ಟಣದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಪುರಸಭೆ ವ್ಯಾಪ್ತಿಯಲ್ಲಿ ರಸ್ತೆಗಳು ತೀರಾ ಹದಗೆಟ್ಟಿದ್ದು, ವಾರ್ಡುಗಳಲ್ಲಿ ಮಳೆಯ ನೀರು ಹರಿದು ಹಾನಿಯಾಗಿದೆ ಎಂದು ದೂರಿದರು.
ಪಟ್ಟಣದ ಗೋಪಾಲಸ್ವಾಮಿ ಓಣಿ, ಸರೋಜಿನಿ, ರಾಷ್ಟ್ರಪತಿ ಓಣಿ, ಮೋಮಿನಪುರ, ಅಶೋಕ ಓಣಿ, ಗೌತಮ್ಮ ಓಣಿ, ವಾರ್ಡುಗಳು ತೆಗ್ಗು ಪ್ರದೇಶದಿಂದ ಕೂಡಿದ್ದು, ಪಟ್ಟಣದ ತಿಮ್ಮಪ್ಪನ ಕೆರೆಯಿಂದ ಬರುವ ಹೆಚ್ಚುವರಿ ನೀರು ಈ ವಾರ್ಡುಗಳ ಮುಖಾಂತರ ಹರಿಯುತ್ತಿರುವುದರಿಂದ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆಂದು ಆತಂಕ ವ್ಯಕ್ತಪಡಿಸಿದರು.
ಸಾಂಕ್ರಾಮಿಕ ರೋಗ ಭೀತಿ: ಪಟ್ಟಣದ ಮುಖ್ಯರಸ್ತೆಗಳು ಹದಗೆಟ್ಟಿದ್ದು, ಚರಂಡಿಗಳು ಮಳೆಯಿಂದಾಗಿ ಕಿತ್ತು ಹೋಗಿವೆ. ನಗರದಲ್ಲಿ ಎಲ್ಲೆಂದರಲ್ಲಿ ರಸ್ತೆ ಮೇಲೆ ನೀರು ನಿಂತು ಪಾದಚಾರಿಗಳಿಗೆ ನಡೆದಾಡಲು ಅವಕಾಶವಿಲ್ಲವಾಗಿದೆ. ತೆಗ್ಗು ಪ್ರದೇಶಗಳಲ್ಲಿ ನೀರು ನಿಂತಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯಿದೆ ಎಂದು ದೂರಿದರು.
ಕೂಡಲೇ ಜಿಲ್ಲಾಧಿಕಾರಿಗಳು ಪಟ್ಟಣಕ್ಕೆ ಭೇಟಿ ನೀಡಿ ವಾಸ್ತವಸ್ಥಿತಿ ಪರಿಶೀಲಿಸಿ ಪಟ್ಟಣವನ್ನು ನೆರೆಪಿಡಿತ ಪ್ರದೇಶವೆಂದು ಘೋಷಿಸಿ ಸೂಕ್ತ ಪರಿಹಾರ ಕೈಗೊಳ್ಳಲು ಅಗತ್ಯ ಅನುದಾನ ಮಂಜೂರು ಮಾಡುವಂತೆ ಒತ್ತಾಯಿಸಿದ್ದಾರೆ.
ಈ ಸಂದರ್ಭ ಪುರಸಭೆ ಉಪಾಧ್ಯಕ್ಷ ನಾಗಪ್ಪ ಉಪ್ಪಾರ, ಸದಸ್ಯರಾದ ಸಿದ್ದಪ್ಪ, ವೆಂಕಟೇಶ ಸೋಮಕಾರ, ರಾಮಕೃಷ್ಣಾ ಎಂ.ಶ್ರೀನಿವಾಸ ಅಬಕಾರಿ, ಚಂದ್ರಶೇಖರ ಚಲುವಾದಿ, ಹನುಮೇಶ ನಾಯಕ, ರಂಗಪ್ಪ ನಾಯಕ, ಹೇಮಣ್ಣ ನಾಯ್ಕ್ ಮತ್ತಿತರರಿದ್ದರು.