ಪರಿಹಾರ ಕಾರ್ಯ ಕೈಗೊಳ್ಳಿ: ಸಿಇಒ
ಕ.ಪ್ರ.ವಾರ್ತೆ, ರಾಯಚೂರು, ಸೆ.20
ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಗ್ರಾಮಗಳಲ್ಲಿ ಅನೇಕ ಕಡೆ ಶಾಲಾ ಕೊಠಡಿಗಳು, ರಸ್ತೆ ಹಾನಿಗೀಡಾಗಿದ್ದು ತುರ್ತ ದುರಸ್ತಿಗೆ ಅಧಿಕಾರಿಗಳು ಶ್ರಮಿಸಬೇಕಿದೆ. ಹಾಗೆಯೇ ಮಳೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಜಿಪಂ ಸಿಇಒ ಡಾ. ಮುದ್ದುಮೋಹನ್ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಮಾತನಾಡಿ, ಪರಿಹಾರ ಕಾರ್ಯ ಕೈಗೊಳ್ಳಲು ಪೂರಕವಾಗಿ ಎಲ್ಲ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರು, ಕೃಷಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹೆಚ್ಚು ಮುತುವರ್ಜಿ ವಹಿಸಿ ದುಡಿಯುವಂತೆ ಆದೇಶಿಸಿದರು.
ಪೌಷ್ಟಿಕಾಂಶ ಪ್ರಮಾಣ ಪರಿಶೀಲನೆಗೆ ಸೂಚನೆ: ನಂತರ ನಡೆದ ಚರ್ಚೆಯಲ್ಲಿ ಅಪೌಷ್ಟಿಕತೆ ಕುರಿತು ಅಂಗನವಾಡಿ ಕೇಂದ್ರಗಳಿಗೆ ಸರಬರಾಜಾಗುವ ಆಹಾರಧಾನ್ಯ ಹಾಗೂ ಮಕ್ಕಳಿಗೆ ನೀಡುತ್ತಿರುವ ಆಹಾರಧಾನ್ಯದ ಪೌಷ್ಟಿಕಾಂಶ ಪ್ರಮಾಣ ಪರಿಶೀಲಿಸಲು ಸಭೆಯಲ್ಲಿ ಸೂಚಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರೋಹಿಣಿ ಹಿರೇಮಠ್, ಈಗಾಗಲೇ ಕೆಲ ಕೇಂದ್ರಗಳಿಗೆ ಭೇಟಿ ನೀಡಿ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ನೀಡುವ ಆಹಾರ ಧಾನ್ಯಗಳ ಕುರಿತು ಮಾಹಿತಿ ಪ್ರಕಟಿಸಲಾಗುತ್ತಿದೆ ಎಂದು ಹೇಳಿದರು.
ಸಮಗ್ರ ವರದಿ ಸಲ್ಲಿಸಿ- ಡಿಡಿಪಿಐ: ಶಿಕ್ಷಣ ಇಲಾಖೆಯ ಮೇಲಿನ ಚರ್ಚೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಅನೇಕ ಶಾಲಾ ಕೊಠಡಿಗಳು ಹಾನಿಗೀಡಾಗಿವೆ. ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಈ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಡಿಡಿಪಿಐ ಪರಮೇಶ್ವರ ಅವರಿಗೆ ಸೂಚಿಸಲಾಯಿತು.
ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ರೈತರಿಗೆ ಬೇಕಾಗುವ ಪ್ರಮಾಣಿತ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಸಬ್ಸಿಡಿ ದರದಲ್ಲಿ ದೊರಕುವಂತೆ ಕ್ರಮ ಜರುಗಿಸಲು ಸಭೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗೆ ಹೇಳಲಾಯಿತು.
ಅದೇ ರೀತಿ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಚರ್ಚೆಯಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದ್ದು, ಗ್ರಾಮಗಳಲ್ಲಿ ಫಾಗಿಂಗ್ ವ್ಯವಸ್ಥೆ ಕೈಗೊಳ್ಳುವುದು, ಸ್ವಚ್ಛತೆಗೆ ಹೆಚ್ಚು ಗಮನ ನೀಡುವಂತೆ ಡಿಎಚ್ಒ ಡಾ. ನಾರಾಯಣಪ್ಪ ಅವರಿಗೆ ಆದೇಶಿಸಲಾಯಿತು.
ನಂತರ ವಿವಿಧ ಇಲಾಖೆಗಳ ಪ್ರಗತಿ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಜಿಪಂ ಉಪಾಧ್ಯಕ್ಷ ಕೆ.ಶರಣಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಹನುಮೇಶ ಮದ್ಲಾಪೂರ, ಮೀನಾಕ್ಷಿ ಗೌಡ, ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಯೋಜನಾಧಿಕಾರಿ ಡಾ. ಟಿ.ರೋಣಿ ಅವರು ಉಪಸ್ಥಿತರಿದ್ದರು.