ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬ್ಯಾಲಿಹಾಳ ಸೇತುವೆ ಕುಸಿತ, ಬಸ್ ಸಂಚಾರ ಸ್ಥಗಿತ

Lingaraj Badiger
Updated On : 21 Sept 2013, 10:49 am

ಕನ್ನಡಪ್ರಭ ವಾರ್ತೆ, ಮುದಗಲ್, ಸೆ.20
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಮುದಗಲ್‌ನಿಂದ ರಾಮತ್ನಾಳ ಮಾರ್ಗವಾಗಿ ಇಲಕಲ್‌ಗೆ ಸಂಪರ್ಕ ಕಲ್ಪಿಸುವ ಬ್ಯಾಲಿಹಾಳ ಬಳಿ ಇರುವ ಸೇತುವೆ ಮಳೆಗೆ ಕುಸಿದಿದೆ. ಕಳೆದ ಒಂದು ವಾರದ ಹಿಂದೆ ಸುರಿದ ಮಳೆಗೆ ಸ್ವಲ್ಪ ಪ್ರಮಾಣದಲ್ಲಿ ಕುಸಿದಿದ್ದ ಸೇತುವೆ ಸತತ ಮಳೆಯಿಂದಾಗಿ ಸಂಪೂರ್ಣ ಕುಸಿದಿದ್ದರಿಂದ ಮುದಗಲ್- ರಾಮತ್ನಾಳ, ಮುದಗಲ್- ಇಳಕಲ್‌ಗೆ ಹೋಗುವ ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡಿದೆ.
ವಿದ್ಯಾರ್ಥಿ, ಸಾರ್ವಜನಿಕರಿಗೆ ತೊಂದರೆ: ಮುದಗಲ್ ಮತ್ತು ಇಳಕಲ್ ಶಾಲಾ- ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ನಡೆದುಕೊಂಡು ಹೋಗಿ ರಾಮತ್ನಾಳ ಮತ್ತು ವಂದಾಲಿಗೆ ಬರುವಂತಾಗಿದೆ. ಸತತ ಸುರಿಯುತ್ತಿರುವ ಮಳೆಯಲ್ಲಿ ಬಸ್ ಸಂಚಾರ ಇಲ್ಲದಿದ್ದರು ಖಾಸಗಿ ವಾಹನಗಳಲ್ಲಿ ಹೋಗುವ ಸ್ಥಿತಿ ಬಂದಿದೆ. ಹೂನೂರು, ಅಂಕಲಿಮಠ, ಮಾಕಾಪೂರ, ತುರಡಗಿ ಗ್ರಾಮದ ಪ್ರಯಾಣಿಕರಿಗೂ ತೊಂದರೆಯಾಗಿದೆ.
ಇಳಕಲ್‌ನಿಂದ ಮುದಗಲ್‌ಗೆ ಬರುವ ಬಸ್ಸು ಬ್ಯಾಲಿಹಾಳ ಗ್ರಾಮಕ್ಕೆ, ಮುದಗಲ್‌ನಿಂದ ರಾಮತ್ನಾಳಕ್ಕೆ ಹೋಗುವ ಬಸ್ ವಂದಾಲಿಗೆ ಕೊನೆಯಾಗುತ್ತಿದ್ದರಿಂದ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಸೇತುವೆ ಸಂಪೂರ್ಣ ಹಾಳಾಗಲು ಮಾಕಾಪೂರದಿಂದ ಅಕ್ರಮ ಗ್ರಾನೈಟ್ ಶಿಲೆಗಳನ್ನು ಲಾರಿಗಳಲ್ಲಿ ಸಂಚರಿಸಿದ್ದೇ ಕಾರಣ ಎಂದು ಹೇಳಲಾಗುತ್ತಿದೆ.
ಕಣ್ದೆರೆಯರ ಇಲಾಖೆ ಅಧಿಕಾರಿಗಳು: ಈಗ ಸಂಚಾರಕ್ಕೆ ಸಂಪೂರ್ಣ ಸಂಚಕಾರ ಬಂದರೂ ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇತ್ತಕಡೆ ಸುಳಿಯದೇ ಇರುವುದು ಗ್ರಾಮಗಳ ಜನತೆಯಲ್ಲಿ ನಿರಾಶೆ ಮೂಡಿಸಿದೆ. ಕೂಡಲೇ ಅಕ್ರಮವಾಗಿ ಸಾಗುತ್ತಿರುವ ಗ್ರಾನೈಟ್ ವಾಹನಗಳನ್ನು ತಡೆಯಬೇಕು. ಕುಸಿದಿರುವ ಸೇತುವೆಯನ್ನು ದುರಸ್ಥಿಗೊಳಿಸುವವರೆಗೆ ಪರ್ಯಾಯಾ ಮಾರ್ಗ ಮಾಡಿ ಶಾಲಾ- ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್ ಸಂಚಾರ ಆರಂಭಿಸಬೇಕೆಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement