ಸಹಕಾರಿ ಬ್ಯಾಂಕ್ ಅಭಿವೃದ್ಧಿಗೆ ಠೇವಣಿ ಸಂಗ್ರಹ ಅಗತ್ಯ
ಲಿಂಗಸ್ಗೂರು: ಸಮಾಜದ ಎಲ್ಲ ವರ್ಗದ ಜನರಿಂದ ಷೇರು ಹಾಗೂ ಠೇವಣಿ ಸಂಗ್ರಹಿಸಿ ಗ್ರಾಹಕರಿಗೆ ವಿವಿಧ ಸಾಲ ಸೌಲಭ್ಯ ಒದಗಿಸಿದರೆ ಸಹಾಕಾರಿ ಬ್ಯಾಂಕುಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಪತ್ರಕರ್ತ ಬಿ.ಎ. ನಂದಿಕೋಲಮಠ ಅಭಿಪ್ರಾಯಪಟ್ಟರು. ಪಟ್ಟಣದ ವೀರಮಹೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ 2012-13ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಕಾನೂನು ಮೇಲಿಂದ ಮೇಲೆ ಬದಲಾವಣೆ ಹೊಂದುವ ಪ್ರಯುಕ್ತ ಬ್ಯಾಂಕುಗಳು ಅಭಿವೃದ್ಧಿಯಲ್ಲಿ ಹಿನ್ನೆಡೆ ಅನುಭವಿಸುತ್ತಿವೆ ಎಂದರು. ಸಾಲ ಬ್ಯಾಂಕ್ ಅಧ್ಯಕ್ಷ ರಮೇಶ ಶಾಸ್ತ್ರಿ ಅಧ್ಯಕ್ಷತೆಯಲ್ಲಿ 2012- 13ನೇ ಸಾಲಿನ ಸಹಕಾರಿಯ ಲಾಭ ಮಂಡನೆ, ಲೆಕ್ಕ ಪರಿಶೋಧನಾ ವರದಿ ಪರಿಶೀಲಿಸಿ ಮಂಜೂರಾತಿ, ಹೊಸ ಸದಸ್ಯರ, ಷೇರುದಾರರ ಹಾಗೂ ಹೊಸ ಕಾಯ್ದೆಯಂತೆ ಬೈಲಾ ತಿದ್ದುಪಡಿಗೆ ಅನುಮೋದನೆ ಕುರಿತು ಚರ್ಚಿಸಲಾಯಿತು. ಕಾರ್ಯಕ್ರಮದಲ್ಲಿ ಜಂಗಮ ಸಮಾಜದ ಅಧ್ಯಕ್ಷ ಮಹಾಂತಯ್ಯಸ್ವಾಮಿ ಪಂಚಾಕ್ಷರಿಮಠ, ಬ್ಯಾಂಕ್‌ನ ಆಡಳಿತ ಮಂಡಳಿ ಪದಾಧಿಕಾರಿಗಳಾದ ನಾಗಯ್ಯ ಸೊಪ್ಪಿಮಠ, ಮಹೇಶ ವಕೀಲರು, ಶರಣಯ್ಯ ಗೊರೇಬಾಳ, ಅಮರೇಶ ಗಂಭೀರಮಠ, ಶಿವಕುಮಾರ ನಂದಿಕೋಲಮಠ, ಮಂಜುನಾಥ ಸಾಲಿಮಠ ಇದ್ದರು. ಇದೇ ವೇಳೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸಮ್ಮೇಳನದಲ್ಲಿ ಜಿಲ್ಲಾ ಮಟ್ಟದ ಕೃಷ್ಣ- ತುಂಗೆ ಪ್ರಶಸ್ತಿ ಪಡೆದ ಲಿಂಗಸ್ಗೂರು ಕನ್ನಡಪ್ರಭ ಪತ್ರಕರ್ತ ಅಮರೇಶಸ್ವಾಮಿ ಬಲ್ಲಟಗಿ ಅವರನ್ನು ಸನ್ಮಾನಿಸಲಾಯಿತು.
ಸಮಾನ ಶಿಕ್ಷಣಕ್ಕಾಗಿ ವಿಚಾರಗೋಷ್ಠಿ ನಾಳೆ
ಸಿಂಧನೂರು: ನಗರದ ಅನಿಕೇತನ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಲಂಕೇಶ ಬಳಗದಿಂದ ಸಮಾನ ಶಿಕ್ಷಣಕ್ಕಾಗಿ ವಿಚಾರಗೋಷ್ಠಿ ಸೆ.22ರ ಬೆಳಿಗ್ಗೆ 10ರಿಂದ ಸಂಜೆ 4.30 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕರಾದ ಕೊಟ್ರೇಶ ಬಿ., ರಾಮಣ್ಣ ಹಿರೇಬೇರ್ಗಿ, ಇಮಾಮ್ ಹಸೇನ್ ಎತ್ಮಾರಿ ತಿಳಿಸಿದ್ದಾರೆ. ಮೊದಲಗೋಷ್ಠಿಯಲ್ಲಿ ಸಮಾನ ಶಿಕ್ಷಣದ ಪರಿಕಲ್ಪನೆ ಮತ್ತು ಪ್ರಸ್ತುತೆ ಕುರಿತು ಸಮಾನ ಶಿಕ್ಷಣಕ್ಕಾಗಿ ಜನಾಂದೋಲನದ ರಾಜ್ಯ ಸಂಚಾಲಕ ಉಮಾಶಂಕರ ಕೆ.ಆರ್.ಪೇಟೆ ಮಾತನಾಡುವರು. ಹೈ-ಕದ ಶೈಕ್ಷಣಿಕ ಸ್ಥಿತಿಗತಿ ಕುರಿತು ಎಚ್‌ಕೆಇಎಸ್ ಎಸ್‌ಎಲ್‌ಎನ್ ಎಂಜಿನಿಯರಿಂಗ್ ಕಾಲೇಜಿನ ಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥ ರಜಾಕ್ ಉಸ್ತಾದ್ ವಿಷಯ ಮಂಡಿಸುವರು. ಮನುಜತ ಬಳಗದ ಅಧ್ಯಕ್ಷರು, ಪತ್ರಕರ್ತ ಡಿ.ಎಚ್. ಕಂಬಳಿ ವಿಚಾರಗೋಷ್ಠಿ ಉದ್ಘಾಟಿಸುವರು. ಉಪನ್ಯಾಸಕ ರಾಮಣ್ಣ ಹಿರೇಬೇರ್ಗಿ ಪ್ರಸ್ತಾವನೆ ಮಾಡುವರು. 2ನೇ ಗೋಷ್ಠಿಯಲ್ಲಿ ಶಿಕ್ಷಣ ವ್ಯಾಪಾರೀಕರಣದ ಇತಿಹಾಸ ಕುರಿತು ಶಿಕ್ಷಕ ಕೈದಾಳ್ ಕೃಷ್ಣಮೂರ್ತಿ ಮಾತನಾಡುವರು. ಅಧ್ಯಕ್ಷತೆಯನ್ನು ಮನುಜಮತ ಬಳಗದ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾದರ್ಲಿ ವಹಿಸುವರು.