ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಮಕ್ಕಳಲ್ಲಿ ಶಿಕ್ಷಣ, ಸಂಸ್ಕ ೃತಿ ಆಸಕ್ತಿ ಮೂಡಿಸಿ'

Vishwanath S
Updated On : 22 Sept 2013, 12:26 pm

ಕನ್ನಡಪ್ರಭ ವಾರ್ತೆ ,  ರಾಯಚೂರು ,  ಸೆ.21
ದೇಶದ ಸಂಸ್ಕೃತಿಯನ್ನು ಗೌರವ ಭಾವನೆಯಿಂದ ಕಾಣುವುದು ಮತ್ತು ಶಿಕ್ಷಣದ ಕಲಿಕೆಯತ್ತ ಮಕ್ಕಳಲ್ಲಿ ಆಸಕ್ತಿ ಮೂಡಿಸಿ ಭವ್ಯ ಭಾರತ ನಿರ್ಮಾಣಕ್ಕೆ ಶ್ರಮಿಸುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಶಂಕ್ರಪ್ಪ ಕರೆ ನೀಡಿದರು.
ಅನವರು ನಗರದಲ್ಲಿ ಶನಿವಾರ ಬಸವ ಸಾಂಸ್ಕೃತಿಕ ವೇದಿಕೆಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ, ಸನ್ಮಾನ ಮತ್ತು ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ದೇಶವನ್ನು ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳನ್ನು ಸನ್ಮಾರ್ಗದಲ್ಲಿ ಸಾಗುವಂಥ ಬಹುದೊಡ್ಡ ಹೊಣೆ ಶಿಕ್ಷಕರ ಮೇಲಿದೆ ಎಂದರು. ಶಿಕ್ಷಣದಿಂದ ಜ್ಞಾನವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳ ಬದುಕಿನಲ್ಲಿ ಶ್ರದ್ಧೆ, ನಿಷ್ಠೆ ಮತ್ತು ಕಲಿಕಾಸಕ್ತಿ ಮೂಡಿಸುವ ಕಾರ್ಯ ಶಿಕ್ಷಕರು ಮಾಡಬೇಕಿದೆ. ಆ ಮೂಲಕ ಶೈಕ್ಷಣಿಕ ಪ್ರಗತಿಗೆ ಪೂರಕ ಪರಿಸರ ನಿರ್ಮಿಸಬೇಕು. ಶಿಕ್ಷಣದಿಂದ ವ್ಯಕ್ತಿಯ ಬದುಕಿನಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಹೇಳಿದರು.
ವಿಶಿಷ್ಟ ಕಾಯಕ: ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಅವರು ಶಿಕ್ಷಣ-ಶಿಕ್ಷಕ-ಸಮಾಜ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ, ಶಿಕ್ಷಣ ನೀಡಿಕೆಯು ಇಡೀ ಜಗತ್ತಿನಲ್ಲಿಯೇ ಅಪರೂಪದ ಹಾಗೂ ವಿಶಿಷ್ಟ ಕಾಯಕವಾಗಿದೆ. ಶ್ರದ್ಧೆ, ಪ್ರಾಮಾಣಿಕತೆ, ನಿಷ್ಠೆಯಿಂದ ಶಿಕ್ಷಕರು ತಮ್ಮ ಕಾಯಕ ಮಾಡಿದಲ್ಲಿ ದೇಶದ ಪ್ರಗತಿ ನಿಶ್ಚಿತ ಎಂದರು.
ಮಕ್ಕಳಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಭ್ರಷ್ಟಾಚಾರ, ಅನೀತಿ, ಅನ್ಯಾಯ, ದೌರ್ಜನ್ಯ ಎಲ್ಲೆಡೆ ಜಗತ್ತಿನಲ್ಲಿ ಹೆಚ್ಚಿದ್ದು ಅದರಿಂದ ಮಾನವೀಯ ಮೌಲ್ಯಗಳಿಗೆ ಬೆಲೆಯಿಲ್ಲವಾಗಿದೆ. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ರಾಷ್ಟ್ರ ನಿರ್ಮಾತೃಗಳಾಗಲಿದ್ದು, ಅಂಥವರಿಗೆ ಈಗಿನಿಂದಲೇ ದೇಶ, ಪ್ರಾಮಾಣಿಕತೆ, ನ್ಯಾಯ, ನೀತಿ ಧರ್ಮಗಳ ಪಾಲನೆಯ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆಯಿದೆ ಎಂದು ಸಲಹೆ ನೀಡಿದರು.
ಸ್ಪರ್ಧಾತ್ಮಕ ಯುಗ: ಶಿಕ್ಷಕರು ಮಕ್ಕಳಲ್ಲಿ ಸಕಾರಾತ್ಮಕ ಮನೋಭಾವ ಬೆಳೆಸಬೇಕು. ಮಕ್ಕಳಲ್ಲಿನ ತಪ್ಪುಗಳನ್ನು ಹುಡುಕಿ ತಿದ್ದುವ ಕಾರ್ಯ ಮಾಡಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರೂ ಹಣದ ಬೆನ್ನತ್ತಿ ಹೋಗುತ್ತಿದ್ದಾರೆ. ಕೇವಲ ಹಣದಿಂದ ಮಾತ್ರ ಬದುಕಿನಲ್ಲಿ ಎಲ್ಲವನ್ನೂ ಪಡೆಯಲು ಸಾಧ್ಯವಿಲ್ಲ ಎಂದ ಅವರು, ಜ್ಞಾನದ ಗಳಿಕೆಯಿಂದ ಮಾತ್ರ ಬದುಕು ಸಮೃದ್ಧಿಯತ್ತ ಸಾಗಲು ಸಾಧ್ಯವಾಗಲಿದೆ ಎಂದು ಹೇಳಿದರು.
ಸಾಮಾಜಿಕ ವ್ಯವಸ್ಥೆ ಸದ್ಯ ತೀರಾ ಹದಗೆಟ್ಟಿದ್ದು, ಅದರಿಂದ ಪರಿಸರ ಕಲುಷಿತಗೊಂಡಿದೆ. ಸಮಾಜವನ್ನು ತಿದ್ದಿ ಸನ್ಮಾರ್ಗದಲ್ಲಿ ಸಾಗುವಂತೆ ನೋಡಿಕೊಳ್ಳುವ ಹೊಣೆ ಶಿಕ್ಷಕರ ಮೇಲಿದೆ. ಅದರಲ್ಲೂ ವಿದ್ಯಾರ್ಥಿಗಳಲ್ಲಿ ಉತ್ತಮ ಗುಣಗಳನ್ನು ಮೂಡಿಸಿ ಸಮಾಜದ ಪ್ರಗತಿಗೆ ಶಿಕ್ಷಕರು ಪ್ರಯತ್ನಿಸುವಂತೆ ಸಲಹೆ ನೀಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಒಟ್ಟು 28 ಜನ ಪ್ರೌಢಶಾಲಾ ಮತ್ತು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.ಸಮಾರಂಭದಲ್ಲಿ ಬಸವ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಶಿವಬಸಪ್ಪ ಮಾಲಿಪಾಟೀಲ್, ಪ್ರಮುಖರಾದ ದರೂರು ಬಸವ ರಾಜ ಪಾಟೀಲ್, ಶರಣೇಗೌಡ ಗೂಗೇಬಾಳ, ಸಿ.ಎಸ್. ಪಾಟೀಲ್ ಸೇರಿ ಅನೇಕರಿದ್ದರು.
ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ನಗರದ ಜನತೆ ಸಮಾರಂಭದಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement