ಮಧ್ಯವರ್ತಿಗಳಿಂದ ಜಲ್ಲಿ ಕಲ್ಲು ದುಬಾರಿ
ಕನ್ನಡಪ್ರಭ ವಾರ್ತೆ , ಮುದಗಲ್ , ಸೆ.21
ಮುದಗಲ್ ಕಂಕರ್ (ಜಲ್ಲಿ ಕಲ್ಲು) ಜಿಲ್ಲೆಯಾದ್ಯಂತ ಹೆಸರುವಾಸಿಯಾಗಿದೆ. ಈಗ ಜಲ್ಲಿ ಕಲ್ಲಿಗಾಗಿ ಗುತ್ತಿಗೆದಾರರು, ಮನೆ ಕಟ್ಟಿಸಿಕೊಳ್ಳುತ್ತಿರುವವರು ಪರದಾಡುವ ದುಸ್ಥಿತಿ ಬಂದಿದೆ.
ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರಿಂದ ಪಟ್ಟಣದಲ್ಲಿರುವ ಕ್ರಷರ್ ಮಿಷಿನ್ಗಳು ತಮ್ಮ ಜಲ್ಲಿ ಉತ್ಪಾದಿಸುವ ಕಾರ್ಯವನ್ನು ಸ್ಥಗಿತಗೊಳಿಸಿದ್ದರಿಂದ ತಾಲೂಕಿನಾದ್ಯಂತ ಜಲ್ಲಿ ಕಲ್ಲಿನ ಅಭಾವವುಂಟಾಗಿದೆ.
ನ್ಯಾಯಾಲಯದ ಆದೇಶದ ಪ್ರಕಾರ ಸರ್ಕಾರ ಜಲ್ಲಿ ಕಲ್ಲು ಉತ್ಪಾದಿಸುವ ಕ್ರಷರ್ ಯಂತ್ರಗಳನ್ನು ತಾಲೂಕಿನ ಯಾವದೇ ಒಂದು ಸ್ಥಳದಲ್ಲಿ ಅಳವಡಿಸುವಂತೆ ಸೂಚನೆ ನೀಡಿದ್ದರ ಹಿನ್ನಲೆಯಲ್ಲಿ ಪಟ್ಟಣದಲ್ಲಿರುವ ಕ್ರಷರ್ ಯಂತ್ರಗಳು ಬಂದ್ ಆಗಿ ತಿಂಗಳುಗಲೇ ಗತಿಸಿವೆ. ಸರ್ಕಾರ ಗ್ರಾಪಂನಿಂದ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆಗಳ ಮುಖಾಂತರ ಸಿ.ಸಿ.ರಸ್ತೆ, ಸೇತುವೆ ಸೇರಿದಂತೆ ಅನೇಕ ಕಾಂಕ್ರೀಟ್ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ.
ಕಾಮಗಾರಿಗಾಗಿ ಜಿಲ್ಲೆಗೆ ಸಾವಿರಾರು ಕೋಟಿ ಮಂಜೂರು ಮಾಡಿದೆ. ಆದರೆ ಕಾಮಗಾರಿ ಗುತ್ತಿಗೆ ಹಿಡಿದ ಗುತ್ತಿಗೆದಾರರು ಜಲ್ಲಿ ಕಲ್ಲಿಗಾಗಿ ಕಂಕರ್ ಪರದಾಡುತ್ತಿದ್ದಾರೆ. ಜಲ್ಲಿ ಸಿಗದ ಕಾರಣ ಅನೇಕ ಕಾಮಗಾರಿಗಳು ನೆನಗುದಿಗೆ ಬಿದ್ದಿವೆ. ನ್ಯಾಯಾಲಯದ ಆದೇಶದಿಂದಾಗಿ ಕಂಕರ್ ಅಭಾವವುಂಟಾಗಿದೆ ಎಂದು ಖಾಸಗಿ ಗುತ್ತೆದಾರ ಮಹಾಂತೇಶ ಪಾಟೀಲ್, ಎಲ್.ಟಿ. ನಾಯಕ್ ತಿಳಿಸಿದ್ದಾರೆ.
ಅಭಾವ ಸೃಷ್ಟಿ: ಜಲ್ಲಿ ಕಲ್ಲುಗಳು ಈ ಮುಂಚೆ ಒಂದು ಬ್ರಾಸ್ಗೆ ರು. 2000ಗೆ ನೀಡುತ್ತಿದ್ದ ವ್ಯಾಪಾರಿಗಳು, ಈಗ ರು. 3500ಗೆ 1 ಬ್ರಾಸ್ ಮಾರಾಟ ಮಾಡುತ್ತಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೆ ನಿಂತರೆ 1 ಬ್ರಾಸ್ ಕಂಕರ್ ಸಿಗುತ್ತದೆ. ಮಧ್ಯವರ್ತಿಗಳು ತಮಗೆ ತೃಪ್ತಿಯಾಗುವ ದರ ಸಿಕ್ಕರೆ ಮಾತ್ರ ಕಂಕರ್ ನೀಡುತ್ತಾರೆ. ಇಲ್ಲದಿದ್ದರೆ, ಇದ್ದರೂ ಇಲ್ಲ ಎಂದು ಹೇಳುತ್ತಾರೆ.
ಬೇರೆ ರಾಜ್ಯದ ಜಲ್ಲಿ: ಮುದಗಲ್ನಲ್ಲಿ ಜಲ್ಲಿಕಲ್ಲು ಯಂತ್ರಗಳನ್ನು ಬಂದ್ ಮಾಡಿದ್ದರಿಂದ ಗುತ್ತಿಗೆದಾರರು ಪಕ್ಕದ ಆಂಧ್ರಪ್ರದೇಶದ ಮೈಬೂಬನಗರ್ ಮುಂತಾದ ಕಡೆಗಳಿಂದ ಜಲ್ಲಿ ಕಲ್ಲುಗಳನ್ನು ಖರೀದಿಸುವ ಪರಿಸ್ಥಿತಿ ಬಂದಿದೆ. ದುಬಾರಿಯಾದರೂ ವಿಧಿ ಇಲ್ಲದೆ, ಖರೀದಿಸಿ ಮನೆ ಕಟ್ಟುವಂತಾಗಿದೆ ಎಂದು ಜನರು ಹೇಳುತ್ತಿದ್ದಾರೆ.
ಸಾಮಾನ್ಯರಿಗೆ ಇಲ್ಲ: ಕಾಮಗಾರಿ ಗುತ್ತಿಗೆದಾರರು ಜಲ್ಲಿ ಕಲ್ಲಿಗಾಗಿ ಹೆಚ್ಚಿನ ಬೇಡಿಕೆ ಇದ್ದುದರಿಂದ ಜನಸಾಮಾನ್ಯರು ಮನೆ ಕಟ್ಟಿಕೊಳ್ಳುವವರಿಗೆ ಜಲ್ಲಿ ಕಲ್ಲಿಗಾಗಿ ವಾರಗಟ್ಟಲೇ ಕಾಯಬೇಕು.ಮದ್ಯವರ್ತಿಗಳ ಮೂಲಕ ಹೆಚ್ಚಿನ ಹಣ ನೀಡಿ ಪಡೆಯಬೇಕಾದ ಪರಸ್ಥಿತಿ ಬಂದಿದ್ದರಿಂದ ಜನಸಾಮಾನ್ಯರಿಗೆ ದುಬಾರಿಯಾಗಿ ಪರಿಣಮಿಸಿದೆ. ಮುದಗಲಲ್ಜಲ್ಲಿ ಕಲ್ಲಿಗೆ ಭಾರಿ ಬೇಡಿಕೆ ಇದ್ದುದರಿಂದ ಸುಮಾರು 3 ಸಾವಿರಕ್ಕೂ ಅಧಿಕ ಜನರು ಜಲ್ಲಿ ಕಲ್ಲು ತಯಾರಿಸುವಲ್ಲಿ ನಿರತರಾಗಿದ್ದಾರೆ.
ಜಮೀನು ಆಲಾಟ್: ಪಟ್ಟಣದ ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ ಕಂಪನಿಗೆ ಸೇರಿದ ಸರ್ವೆ ನಂ.618 ರಲ್ಲಿ 14 ಕ್ರಷರ್ ಮಾಲೀಕರಿಗೆ ತಲಾ 2 ಎಕರೆಯಂತೆ, ಪ್ರತಿ ವರ್ಷ 50 ಸಾವಿರ ಬಾಡಿಗೆ ನಿಗದಿಪಡಿಸಿ ಜಮೀನು ಆಲಾಟ್ ಮಾಡಿದೆ. ಕ್ರಷರ್ ಯಂತ್ರಗಳನ್ನು ಆ ಜಾಗದಲ್ಲಿ ಆಳವಡಿಸಿದರೆ ಸುತ್ತಮುತ್ತಲಿನ ಜಮೀನುಗಳ ಬೆಳೆ ಹಾಳಾಗುತ್ತದೆ. ಶಾಲೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ನಿಯೋಗವೊಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರಿಂದ ಕ್ರಷರ್ ಯಂತ್ರಗಳ ಮಾಲೀಕರಿಗೆ ಜಮೀನು ನೀಡುವ ಕಾರ್ಯ ವಿಳಂಬವಾಗಿದೆ.
-ಪಂಪಯ್ಯ ಮಠ