ಅ.6ರಂದು ವಿಶ್ವಕರ್ಮ ಜಯಂತ್ಯುತ್ಸವ
ರಾಯಚೂರು: ಜಿಲ್ಲಾ ವಿಶ್ವಕರ್ಮ ಸಮಾಜದಿಂದ ಅ. 6ರಂದು ರಾಯಚೂರು ತಾಲೂಕಿನ ಪಂಚಮುಖಿ ಗಾಣದಾಳ ಗ್ರಾಮದಲ್ಲಿ ವಿಶ್ವಕರ್ಮ ಜಯಂತ್ಯುತ್ಸವ ಹಾಗೂ ವಿಶ್ವಕರ್ಮ ಅಭಿವೃದ್ಧಿ ನಿಗಮದ ಸ್ಥಾಪನೆಗೆ ಕಾರಣರಾದ ಸಮಾಜದ ಮುಖಂಡ ಕೆ.ಪಿ. ನಂಜುಂಡಿ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ವಿಶ್ವಕರ್ಮ ಸಮಾಜದ ಜಿಲ್ಲಾ ಕಾರ್ಯದರ್ಶಿ ಮಾರುತಿ ಬಡಿಗೇರ್ ತಿಳಿಸಿದರು.
ಅವರು ನಗರದಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅ. 6ರಂದು ನಡೆಯುವ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ್ ವಹಿಸಲಿದ್ದಾರೆಂದು ಹೇಳಿದರು.
ಸಮಾರಂಭದಲ್ಲಿ ಶಾಸಕರಾದ ವೆಂಕಟೇಶ ನಾಯಕ, ಡಾ. ಶಿವರಾಜ್ ಪಾಟೀಲ್, ಬಾದರ್ಲಿ ಹಂಪನಗೌಡ, ಪ್ರತಾಪಗೌಡ ಪಾಟೀಲ್, ಮಾನಪ್ಪ ವಜ್ಜಲ್, ಮಂತ್ರಾಲಯಂ ಶಾಸಕ ಬಾಲನಾಗಿರೆಡ್ಡಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆಂದು ತಿಳಿಸಿದರು.
ಸಮಾರಂಭದ ಸಾನ್ನಿಧ್ಯವನ್ನು ದೇವದುರ್ಗ ಸಂಸ್ಥಾನ ಮಠದ ಮೌನೇಶ್ವರ ಸ್ವಾಮಿ, ಜವಳಗೇರಾದ ನಾಗ ಲಿಂಗೇಶ್ವರಮಠದ ಪೀಠಾಧ್ಯಕ್ಷ ಸೂರ್ಯನಾರಾಯಣ ಸ್ವಾಮಿ ವಹಿಸಲಿದ್ದಾರೆ. ಪಂಚಮುಖಿ ಗಾಣದಾಳ ಗ್ರಾಮದ ಆಂಜನೇಯ ದೇವಸ್ಥಾನದ ಅರ್ಚಕರು ಹಾಗೂ ವಿವಿಧ ಮಠಗಳ ಮಠಾಧೀಶರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಹೇಳಿದರು. ವಿಶ್ವಕರ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕೆ.ಪಿ. ನಂಜುಂಡಿ ಅವರಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ ಎಂದರು. ಸಮಾಜದ ಪ್ರಮುಖರಾದ ವೀರೇಂದ್ರ ಇನಾಂದಾರ್, ಗುರು ದೇವದುರ್ಗ, ರಾಮು ಗಾಣದಾಳ ಸೇರಿ ಅನೇಕರಿದ್ದರು.