ದಾವಲಮಲಿಕ್ ಉರೂಸ್ ಸಂಭ್ರಮ
ಮುದಗಲ್: ಪಟ್ಟಣ ಸಮೀಪದ ಮಟ್ಟೂರ ಗ್ರಾಮದಲ್ಲಿ ಹಜರತ್ ದಾವಲಮಲಿಕ್ ಉರೂಸ್ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.
ಹಿಂದೂ ಮತ್ತು ಮುಸ್ಲಿಮರ ಭಾವೈಕ್ಯತೆಯ ಸಂಕೇತವಾದ ಮಟ್ಟೂರು ಉರೂಸ್ನಲ್ಲಿ ಎಲ್ಲ ಜಾತಿಯ ಜನರು ಭಾಗವಹಿಸಿ ದೇವರಿಗೆ ಬಗೆಬಗೆಯ ಹರಕೆ ಸಮರ್ಪಿಸಿದರು.
ರಾತ್ರಿ ವೇಳೆಯಲ್ಲಿ ಭಕ್ತಾದಿಗಳು ಕೊಬ್ಬರಿಯನ್ನು ಕಬ್ಬಿಣದ ಸರಳಿಗೆ ಮಣೆ ಹಾಕಿ ಉರಿಸುವ ಮೂಲಕ ದೇವರಿಗೆ ಬೆಳಕು ನೀಡಿ ತಮ್ಮ ಹರಿಕೆ ತೀರಿಸುವ ಕಾರ್ಯಕ್ರಮ ನಡೆಯಿತು. ಈ ಬೆಳಕಿನಲ್ಲಿ ಯುವತಿಯರು ದೇವರಿಗೆ ನೀರೆರೆಯುವುದು ಇಲ್ಲಿನ ವಿಶೇಷ.
ಇದೇ ಬೆಳಕಿನಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಕಳಸದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. 12 ಗಂಟೆಗೆ ಗ್ರಾಮದ ಹೊರವಲಯದಲ್ಲಿನ ದರ್ಗಾದ ಮೇಲೆ ಕಳಸಾರೋಹಣ ಮಾಡಲಾಯಿತು. ದೇವರಿಗೆ ಹೂವಿನ ಚಾದರ್, ಸಂದಲ್, ಹೂ-ಕಾಯಿ, ಕರ್ಪೂರ ಅರ್ಪಿಸಿದ ಬಳಿಕ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು.
ಹಿಂದೂ ಮತ್ತು ಮುಸ್ಲಿಂ ಸಮಾಜದ ಮಹಿಳೆಯರು ನೀರು ಎರೆಯುವ ಮೂಲಕ ಕಳಸದ ಮೆರವಣಿಗೆಗೆ ದಾರಿಮಾಡಿಕೊಟ್ಟರು. ಮೆರವಣಿಗೆಯಲ್ಲಿ ದರ್ಗಾದ ಮೌಲಿ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.