ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಮರಾಠರು ಸಮುದಾಯ ಸಂಘಟಿತರಾಗಲಿ'

Lingaraj Badiger
Updated On : 23 Sept 2013, 11:14 am

ಕನ್ನಡಪ್ರಭ ವಾರ್ತೆ, ರಾಯಚೂರು, ಸೆ.22
ರಾಜ್ಯದಲ್ಲಿರುವ ಕ್ಷತ್ರಿಯ ಮರಾಠಾ ಸಮಾಜವರು ತಮ್ಮ ಮೂಲಭೂತ ಹಕ್ಕುಗಳನ್ನು ಪಡೆಯಲು ಸಂಘಟಿತರಾಗುವುದು ಅವಶ್ಯಕ ಎಂದು ನಗರ ಕ್ಷೇತ್ರದ ಶಾಸಕ ಡಾ. ಶಿವರಾಜ್ ಪಾಟೀಲ್ ಕರೆ ನೀಡಿದರು.
ಅವರು ನಗರದ ಬೂಬ್ ಭವನದಲ್ಲಿ ಭಾನುವಾರ ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ತಿನಿಂದ ಆಯೋಜಿಸಿದ್ದ ಶಿವಾಜಿ ಮಹಾರಾಜರ 386ನೇ ಜಯಂತ್ಯುತ್ಸವ ಹಾಗೂ ಜಿಲ್ಲಾ ಸಂಘಟನಾ ಸಮಾವೇಶಕ್ಕೆ ಚಾಲನೆ ನೀಡಿ, ಮರಾಠಾ ಕ್ಷತ್ರಿಯ ಸಮುದಾಯದವರಲ್ಲಿ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಿಕ್ಷಣ ಪಡೆಯುವಿಕೆ ಅವಶ್ಯಕ ಎಂದರು.
ಕ್ಷತ್ರಿಯರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಪ್ರಗತಿಗೆ ಪೂರಕವಾಗಿ ಕಾರ್ಯ ನಿರ್ವಹಿಸಲು ಮನವಿ ಮಾಡಿ, ದೇಶದ ಪ್ರಗತಿಯಲ್ಲಿ ಮರಾಠಾ ಕ್ಷತ್ರಿಯರ ಕೊಡುಗೆ ಅಪಾರವಾಗಿದೆ. ಸ್ವಾತಂತ್ರ ಪೂರ್ವ ಮತ್ತು ಸ್ವಾತಂತ್ರ್ಯಾನಂತರದಲ್ಲಿ ಸಮಾಜವು ದೇಶದ ಪ್ರಗತಿಯಲ್ಲಿ ತನ್ನದೇ ಆದ ರೀತಿಯಲ್ಲಿ ಶ್ರಮಿಸುತ್ತಿದೆ ಎಂದು ಹೇಳಿದರು.
ಸಹಕಾರ: ಶಿವಾಜಿ ಮಹಾರಾಜರ ಹೆಸರು ಭಾರತದ ಇತಿಹಾಸದಲ್ಲಿ ಅಜರಾಮರವಾಗಿದೆ. ಕ್ಷತ್ರಿಯರು ಧೈರ್ಯ, ಸಾಹಸ, ಪ್ರಾಮಾಣಿಕತೆ ಮತ್ತು ದೇಶ ಭಕ್ತಿಗೆ ಹೆಸರುವಾಸಿಯಾಗಿದ್ದಾರೆ. ಇಂಥ ಸಮುದಾಯದ ಪ್ರಗತಿಗೆ ತಾವು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಸಮಾರಂಭದಲ್ಲಿ ಮಾತನಾಡಿ, ಸಂವಿಧಾನ ಬದ್ಧ ಹಕ್ಕುಗಳನ್ನು ಪಡೆಯಲು ಎಲ್ಲ ಶೋಷಿತ ವರ್ಗಗಳವರು ಒಗ್ಗೂಡಿ ಹೋರಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ಪ್ರಸಕ್ತ ರಾಜಕೀಯ ವ್ಯವಸ್ಥೆಯಲ್ಲಿ ಶೋಷಿತರನ್ನು ನಿರ್ಲಕ್ಷ್ಯದಿಂದ ಕಾಣುವ ಪರಿಪಾಠ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಭ್ರಷ್ಟ ರಾಜಕೀಯ ವ್ಯವಸ್ಥೆ ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಕೈಯಲ್ಲಿ ಸಿಲುಕಿರುವ ರಾಜಕೀಯ ವ್ಯವಸ್ಥೆಯಿಂದಾಗಿ ಶೋಷಿತರು ಪ್ರಗತಿ ಸಾಧ್ಯವಾಗಿಲ್ಲ. ಇದುವರೆಗೆ ರಾಜ್ಯ ಮತ್ತು ದೇಶವನ್ನಾಳಿದವರು ಸಮಾಜದ ಕೆಳವರ್ಗದವರನ್ನು ಕಡೆಗಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿರೀಕ್ಷಿಸಿದಂತೆ ಪ್ರಗತಿ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಕ್ಕುಗಳನ್ನು ಪಡೆಯಿರಿ: ಶೋಷಿತ ಸಮಾಜದವರು ಸಂಘಟಿತರಾಗುವ ಮೂಲಕ ತಮ್ಮ ಹಕ್ಕುಗಳನ್ನು ಪಡೆಯುವ ನಿಟ್ಟಿನಲ್ಲಿ ಹೋರಾಟಕ್ಕಿಳಿಯಬೇಕಿದೆ. ಸಮಾಜದಲ್ಲಿ ಹಿಂದುಳಿದವರು ಸರ್ಕಾರದಿಂದ ದೊರೆಯುವ ಮೀಸಲಾತಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯಲೂ ಹೋರಾಟ ಮಾಡಬೇಕಿದೆ ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಕ್ಷತ್ರಿಯ ಮರಾಠಾ ಪರಿಷತ್ತಿನಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಶಿಷ್ಯ ವೇತನ ನೀಡಲಾಯಿತು. ಅದೇ ರೀತಿ ಅಂಗವಿಕಲರ ವೇತನ, ವೃದ್ಧಾಪ್ಯ ವೇತನ ಹಾಗೂ ಗೌರವಧನವನ್ನು ವಿತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಪರಿಷತ್ತಿನ ರಾಜ್ಯಾಧ್ಯಕ್ಷ ರಾಣೋಜಿರಾವ್ ಸಾಠೆ ವಹಿಸಿದ್ದರು. ಸಮಾರಂಭದಲ್ಲಿ ಗ್ರಾಮೀಣ ಕ್ಷೇತ್ರದ ಶಾಸಕ ತಿಪ್ಪರಾಜು ಹವಾಲ್ದಾರ್ ಮಾತನಾಡಿದರು. ಜೆಡಿಎಸ್ ರಾಜ್ಯ ಕಾರ್ಯದರ್ಶಿ ಈ. ಆಂಜನೇಯ, ವಿಠಲರಾವ್ ಗಾಯಕವಾಡ, ಕಲಾವಿದ ಗಣೇಶ ಕೇಸರಕರ್, ಸಿದ್ದಯ್ಯ ತಾತ ಗುರುವಿನ್, ಹನುಮಂತರಾವ್ ಜಗತಾಪ್, ಭೀಮರಾವ್ ಜಾಧವ್, ರಾಜೇಂದ್ರ ದೇಶಮುಖ್, ವಾಜೇಂದ್ರರಾವ್ ಮೋರೆ ಸೇರಿ ಅನೇಕರು ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ಕ್ಷತ್ರಿಯ ಮರಾಠಾ ಬಾಂಧವರು ಕಾರ್ಯಕ್ರಮದಲ್ಲಿದ್ದರು.
ಮೆರವಣಿಗೆ: ಇದಕ್ಕೂ ಮುನ್ನ ನಗರದ ಮಾವಿನಕೆರೆ ಪ್ರದೇಶದಲ್ಲಿರುವ ಶ್ರೀ ಅಂಬಾಭವಾನಿ ದೇವಸ್ಥಾನದಿಂದ ಸಮಾವೇಶ ಸ್ಥಳ ಬೂಬ್ ಭವನದವರೆಗೆ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆಯನ್ನು ನಡೆಸಲಾಯಿತು. ಮೆರವಣಿಗೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement