ವಿದ್ಯಾರ್ಥಿ ಮನದಾಳ ಅರಿತು ಬೋಧಿಸಿ
ಕನ್ನಡಪ್ರಭ ವಾರ್ತೆ, ಮುದಗಲ್, ಸೆ.22
ವಿದ್ಯಾರ್ಥಿಗಳ ಮನದಾಳವನ್ನು ತಿಳಿದು ಅದಕ್ಕೆ ತಕ್ಕಂತೆ ಪಾಠ ಮಾಡಿ ಉತ್ತಮ ಮಾರ್ಗದರ್ಶನ ನೀಡುವವರೇ ನಿಜವಾದ ಶಿಕ್ಷಕರು ಎಂದು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ತಜ್ಞ ವೈದ್ಯ ಡಾ. ಈಶ್ವರ ಸವಡಿ ಅಭಿಪ್ರಾಯಪಟ್ಟರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಮುದಗಲ್ಲ ವಲಯದ ನಾಗಲಾಪುರ, ಕನ್ನಾಳ, ಬನ್ನಿಗೋಳ, ಆಮದಿಹಾಳ ಮತ್ತು ಮುದಗಲ್ಲ ಸಿಆರ್ಸಿಯ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳ ಶಿಕ್ಷಕ ಬಳಗದವರು ಜಂಟಿಯಾಗಿ ಹಮ್ಮಿಕೊಂಡ ರಾಷ್ಟ್ರಪ್ರಶಸ್ತಿ ಪುರಸ್ಕೃತ ಎಚ್.ಬಾಬಾ ಹಾಗೂ ಇನ್ನಿತರ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಿಲ್ಲೆಗೆ ಹೆಮ್ಮೆಯ ಸಂಗತಿ: ಗ್ರಾಮೀಣ ಭಾಗದ ಶಿಕ್ಷಕರೊಬ್ಬರು ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿಗಳಿಂದ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವುದು ಜಿಲ್ಲೆಯ ಸರ್ವ ನೌಕರರಿಗೂ ಹೆಮ್ಮೆಯ ಸಂಗತಿ. ಅದರಲ್ಲೂ ಶಿಕ್ಷಕ ಸಮೂಹಕ್ಕೆ ಇದೊಂದು ಕಿರೀಟವಿಟ್ಟಂತೆ ಎಂದು ಬಣ್ಣಿಸಿದರು.
ಶಿಕ್ಷಕನಿಗೆ ಜ್ಞಾನವೇ ಜೀವಾಳ. ವಿದ್ಯಾರ್ಥಿಗಳ ಮಟ್ಟವನ್ನರಿತು ಅವರಿಗೆ ಮನಮುಟ್ಟುವಂತೆ ಕಲಿಸುವುದು ಶಿಕ್ಷಕರ ಪ್ರಮುಖ ಪಾತ್ರವಾಗಿದೆ. ವಿದ್ಯಾರ್ಥಿಗಳು ಕಲಿಸಿದ ಶಿಕ್ಷಕರನ್ನು ಅನುಕರಣಿಸುವಂತೆ ಆಗಬೇಕು. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಬರೀ ಪಾಠವೊಂದಿದ್ದರೆ ಸಾಲದು, ಉತ್ತಮ ಪ್ರಜೆಯನ್ನಾಗಿ ಮಾಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರೇ ಪ್ರಮುಖ ಪಾತ್ರ ವಹಿಸಬೇಕಾಗಿದೆ ಎಂದು ತಿಳಿಸಿದರು.
ಬಿಇಒ ಅಮರಪ್ಪ ಭೋವಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಯೋಗಪ್ಪ ವಹಿಸಿದ್ದರು. ಸಿಆರ್ಪಿ ವೀರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜ ಮೂಲಿಮನಿ, ಶಿಕ್ಷಣ ಸಂಯೋಜಕ ಮಹಾಮುನಿಯಪ್ಪ, ಬಿಆರ್ಪಿ ನಾಗನಗೌಡ ಬಯ್ಯಾಪುರ, ಪ್ರೌಢಶಾಲಾ ಹಿರಿಯ ದೈಹಿಕ ಶಿಕ್ಷಕ ಬಾಲನಗೌಡ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಅಕ್ಕಮಹಾದೇವಿ, ಶೋಭಾ, ಗುರುಬಸಪ್ಪ, ಮಾನಪ್ಪ, ಮರಿಯಪ್ಪ, ವಿಠೋಬ ಶಾಲಿಮನಿ ಮೂರ್ತಿ, ಬಾಲಪ್ಪ, ಸಿಆರ್ಪಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಮೇಶ ಕುಲಕರ್ಣಿ ನಿರೂಪಿಸಿದರು. ಸಿಆರ್ಸಿ ಬಸವರಾಜಸ್ವಾಮಿ ಸ್ವಾಗತಿಸಿದರು.