ಅ.28ರಂದು ರೈತರ ಬೃಹತ್ ಸಮಾವೇಶ: ಹಕ್ಕೊತ್ತಾಯ ಮಂಡನೆ
ಕನ್ನಡಪ್ರಭ ವಾರ್ತೆ ರಾಯಚೂರು ಸೆ.23
ಹೊರದೇಶಗಳಿಂದ ಕೃಷಿ ಉತ್ಪನ್ನಗಳ ಆಮದು ಸ್ಥಗಿತ, ಬರಡು ಪ್ರದೇಶವನ್ನು ಸಮಗ್ರ ಅಭಿವೃದ್ಧಿಗೊಳಿಸಲು ಹಾಗೂ ಗಾಂಧೀಜಿಯವರ ಗ್ರಾಮೀಣಾಭಿವೃದ್ಧಿಯ ಕನಸು ನನಸಾಗಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅ.28ರಂದು ಬೆಂಗಳೂರಿನಲ್ಲಿ ರೈತರ ಬೃಹತ್ ಸಮಾವೇಶ ಆಯೋಜಿಸಲಾಗಿದೆ.
ನಗರದಲ್ಲಿ ಸೋಮವಾರ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಬೆಂಗಳೂರಿನ ಫ್ರೀಡಂಪಾರ್ಕಿನಲ್ಲಿ ಅ.28ರ ಮಧ್ಯಾಹ್ನ 12ಕ್ಕೆ ಸಮಾವೇಶ ನಡೆಯಲಿದ್ದು, ಮೇಧಾ ಪಾಟ್ಕರ್, ದೇವನೂರು ಮಹಾದೇವ ಸೇರಿ ಅನೇಕ ಪ್ರಮುಖರು ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
ವಿಶ್ವ ವಾಣಿಜ್ಯ ಒಪ್ಪಂದಕ್ಕೆ ಸರ್ಕಾರ ಸಹಿ ಮಾಡಿದ ನಂತರದಲ್ಲಿ ಮುಕ್ತ ಮಾರುಕಟ್ಟೆ ನೀತಿ ಹೆಸರಿನಲ್ಲಿ ದೇಶದ ರೈತರು ಬೆಳೆಯುವ ಬೆಳೆಯನ್ನೇ ಸರ್ಕಾರ ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಅದರಿಂದ ದೇಶದ ರೈತರ ಭವಿಷ್ಯ ಹಾಳು ಮಾಡುವ ಕಾರ್ಯ ನಡೆದಿದೆ ಎಂದು ಟೀಕಿಸಿದರು.
ಒತ್ತಾಯ: ಬರಡು ಪ್ರದೇಶದ ಅಭಿವೃದ್ಧಿಗೆ ಪರಮಶಿವಯ್ಯ ವರದಿಯನ್ನು ಕಾಲಮಿತಿಯೊಳಗೆ ಜಾರಿಗೆ ತರಬೇಕು. ಉತ್ತರ ಕರ್ನಾಟಕದ ಖುಷ್ಕಿ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಕೃಷ್ಣಾ ಮೇಲ್ದಂಡೆಯ “G’ ಸ್ಕೀಂ ನೀರು ತ್ವರಿತವಾಗಿ ಬಳಸಿಕೊಂಡು ಶೀಘ್ರವಾಗಿ ಎಲ್ಲ ಏತನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕೆಂದು ಸಮಾವೇಶದಲ್ಲಿ ಒತ್ತಾಯಿಸಲಾಗುತ್ತದೆ ಎಂದು ಹೇಳಿದರು.
ತುಂಗಭದ್ರಾ ಜಲಾಶಯದಲ್ಲಿ ಭಾರೀ ಪ್ರಮಾಣದ ಹೂಳು ಸೇರಿದೆ. ಅದರ ತೆರವಿಗೆ ಅಥವಾ ವ್ಯರ್ಥ ಹರಿದು ಹೋಗುವ ನೀರಿನ ಬಳಕೆಗೆ ಪೂರಕ ಪರ್ಯಾಯ ನೀರಾವರಿ ಯೋಜನೆಗಳ ರೂಪಿಸಲು, ಎನ್ಆರ್ಬಿಸಿ ಕಾಲುವೆ ವಿಸ್ತರಣೆಗೆ ರೈತರು ಒತ್ತಾಯಿಸಲಿದ್ದಾರೆಂದು ತಿಳಿಸಿದರು.
ಕಾವೇರಿ ಕೊಳ್ಳದ ಎಲ್ಲ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು. ಕಾಲಮಿತಿಯೊಳಗೆ ಜಲಾನಯನ ಪ್ರದೇಶದ ಎಲ್ಲ ಕಾಲುವೆಗಳ ಆಧುನೀಕರಣ ಕೈಗೊಳ್ಳಬೇಕು. ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯೆ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಎದ್ದಿರುವ ವಿವಾದ ಪರಿಹಾರಕ್ಕೆ ಕೂಡಲೇ ಮುಂದಾಗಬೇಕೆಂದು ಸಮಾವೇಶದಲ್ಲಿ ಆಗ್ರಹಿಸಲಾಗುತ್ತದೆ ಎಂದು ಹೇಳಿದರು.
ಆದಾಯ ವರದಿ: ಕಳಸಾ ಬಂಡೂರಿ ಮತ್ತು ಭೀಮಾ ನದಿ ನೀರಾವರಿ ಯೋಜನೆಯನ್ನು ಕೂಡಲೇ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ಕೃಷಿ ಬೆಲೆ ಆಯೋಗವನ್ನು ರಚಿಸಿದರಷ್ಟೇ ಸಾಲದು, ರೈತರು ಕೃಷಿಯ ಮೇಲೆ ಹೂಡಿರುವ ಬಂಡವಾಳ ಮತ್ತು ಅನುಭವಿಸುವ ಕಷ್ಟವನ್ನು ದಾಖಲಿಸಬೇಕು. ಕೃಷಿಕ ಕುಟುಂಬದ ಜೀವನ ನಿರ್ವಹಣಾ ವೆಚ್ಚ ಮತ್ತು ರೈತ ಕುಟುಂಬದ ತಲಾ ಆದಾಯದ ವರದಿಯನ್ನು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಗುತ್ತದೆ ಎಂದು ಹೇಳಿದರು.
ಕೃಷಿ ಉತ್ಪನ್ನಗಳ ಬೆಲೆ ಕುಸಿತ ಕಂಡಾಗ ಸರ್ಕಾರವೇ ಮಾರುಕಟ್ಟೆಗೆ ಪ್ರವೇಶಿಸಿ ಕನಿಷ್ಟ ರು. 20ಸಾವಿರ ಕೋಟಿ ಆವರ್ತ ನಿಧಿಯಿರಿಸಬೇಕು. ಖುಷ್ಕಿ ಪ್ರದೇಶದ ಸಮಗ್ರ ಕೃಷಿ ನೀತಿಯನ್ನು ಜಾರಿಗೆ ತಂದು ರೈತರ ಆರ್ಥಿಕ ಭದ್ರತೆಗೆ ಕ್ರಮ ಕೈಗೊಳ್ಳುವುದು, ಒಣ ಬರ, ಹಸಿ ಬರದ ನಷ್ಟದ ಸಮೀಕ್ಷೆಯನ್ನು ಕೈಗೊಳ್ಳಬೇಕು. ಈಚೆಗೆ ರಾಜ್ಯದಲ್ಲಿ ಸುರಿದ ಧಾರಾಕಾರ ಮಳೆಯಿಂದಾದ ಬೆಳೆ ಹಾನಿಯ ಬಗ್ಗೆ ಕೂಡಲೇ ಸರ್ಕಾರ ವರದಿ ಪಡೆದು ಪರಿಹಾರ ವಿತರಿಸಬೇಕೆಂಬುದು ಸೇರಿ ಒಟ್ಟು 24 ಬೇಡಿಕೆಗಳ ಪಟ್ಟಿಯನ್ನು ಸಮಾವೇಶದಲ್ಲಿ ಚರ್ಚಿಸಿ ನಂತರ ಸಲ್ಲಿಸುವ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಹಕ್ಕೊತ್ತಾಯ ಮಂಡಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ ಸೇರಿ ಅನೇಕರಿದ್ದರು.