ಇಂದು ಸೋಲಾಪುರ-ಯಶವಂತಪುರ ರೈಲಿಗೆ ಚಾಲನೆ
ಗುಲ್ಬರ್ಗ: ಗುಲ್ಬರ್ಗ ರೈಲ್ವೆ ನಿಲ್ದಾಣದಲ್ಲಿ 22133 ಸೋಲಾಪುರ-ಯಶವಂಪುರ ಎಕ್ಸ್ಪ್ರೆಸ್ ರೈಲಿನ ಮೂರು ದಿನದ ಆವರ್ತದಿಂದ ದೈನಂದಿನ ಅವರ್ತನಕ್ಕೆ ಮಂಗಳವಾರ ಚಾಲನೆ ದೊರೆಯಲಿದೆ.
ಸೋಲಾಪುರ ಮತ್ತು ಬೆಂಗಳೂರು ನಡುವಿನ ನೇರ ಸಂಪರ್ಕಕ್ಕಾಗಿ ಇದ್ದ ಬಹುದಿನದ ಬೇಡಿಕೆಯನ್ನು ಈಡೇರಿಸಲು ಮಧ್ಯ ರೈಲ್ವೆಯು ಸೆಪ್ಟೆಂಬರ್ 2012ರಲ್ಲಿ ಸೋಲಾಪುರ ಮತ್ತು ಯಶವಂತಪುರ ನಡುವೆ ವಾರಕ್ಕೆ 3 ದಿನದ ಆವರ್ತನಕ್ಕೆ ಹೊಸ ರೈಲೊಂದನ್ನು ಪರಿಚಯಿಸಿತು. ಇಂದು ಹೆಚ್ಚಿನ ಆವರ್ತನಕ್ಕೆ ಚಾಲನೆ ನೀಡುವುದರೊಂದಿಗೆ ಗುಲ್ಬರ್ಗದಲ್ಲಿ ವಿಶೇಷ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿದೆ. ಸೆ.25ರಿಂದ ಯಶವಂತಪುರದಿಂದ ದಿನಂಪ್ರತಿ ಆವರ್ತನದಂತೆ ಚಾಲನೆಯಲ್ಲಿರುವುದು, ಸೆ. 26 ರಿಂದ ಸೋಲಾಪುರದಿಂದ ದಿನಂಪ್ರತಿ ಆವರ್ತನದಂತೆ ಚಾಲನೆಯಲ್ಲಿರುವುದು. ರೈಲಿನ ತಂಗುದಾಣ ಮಾರ್ಗಗಳಲ್ಲಿ ಹಾಗೂ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ನಿಲುಗಡೆ ಮಾರ್ಗ: ಎರಡೂ ಕಡೆಯಿಂದಲೂ ರೈಲಿನ ನಿಲುಗಡೆ ಮಾರ್ಗ ಈ ರೀತಿಯಾಗಿದೆ. ಗುಲ್ಬರ್ಗ, ವಾಡಿ, ಯಾದಗಿರಿ, ರಾಯಚೂರು, ಮಂತ್ರಾಲಯ ರಸ್ತೆ, ಅದೋಣಿ, ಗುಂಟಕಲ್ಲು, ಅನಂತಪುರ, ಧರ್ಮಾವರಂ, ಯಲಹಂಕ. ಒಂದು ಮೊದಲ ದರ್ಜೆ ಎಸಿ ಒಂದು ಎಸಿ 2 ಟೈರ್, ಒಂದು ಎಸಿ 3 ಟೈರ್, 7 ಸ್ಲೀಪರ್ ದರ್ಜೆ, 6 ಸಾಮಾನ್ಯ ಎರಡನೇ ದರ್ಜೆ ಮತ್ತು 2 ಸಾಮಾನ್ಯ ಎರಡನೇ ದರ್ಜೆ ಜೊತೆಗೆ ಗಾರ್ಡ್ಸ್ ಬ್ರೇಕ್ ವ್ಯಾನ್ನ್ನು ರೈಲು ಹೊಂದಿದೆ.
ಕೇಂದ್ರ ರೈಲ್ವೆ ಖಾತೆ ಸಚಿವ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಸೆ. 24ರಂದು ಬೆಳಗಿನ 11.30 ಗಂಟೆಗೆ ಗುಲ್ಬರ್ಗ ರೈಲ್ವೆ ನಿಲ್ದಾಣದಲ್ಲಿ 22133 ಸೋಲಾಪುರ-ಯಶವಂಪುರ ಎಕ್ಸ್ಪ್ರೆಸ್ ರೈಲಿನ ದೈನಂದಿನ ಅವರ್ತನಕ್ಕೆ ಚಾಲನೆ ನೀಡಲಿದ್ದಾರೆ.
ವಿಶೇಷ ಅತಿಥಿಗಳಾಗಿ ಬೀದರ ಸಂಸದ ಡಾ. ಎನ್. ಧರ್ಮಸಿಂಗ್, ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ, ವೈದ್ಯಕೀಯ ಶಿಕ್ಷಣ ರಾಜ್ಯ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಮತ್ತು ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ್ ಸೇಡಂ ಭಾಗವಹಿಸುವರು.