ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಾರ್ಮಿಕರ ಬೇಡಿಕೆಗೆ ವಿವಿ ನಿರ್ಲಕ್ಷ್ಯ: ಆರೋಪ

Rashmi Kasaragodu
Updated On : 24 Sept 2013, 11:41 am

ಕನ್ನಡಪ್ರಭ ವಾರ್ತೆ   ರಾಯಚೂರು   ಸೆ.23
ಸರ್ಕಾರ ನಿಗದಿಗೊಳಿಸಿದ ವೇತನ ನೀಡಿಕೆಗೆ ಆಗ್ರಹ, ವಿನಾ ಕಾರಣ ಕಾರ್ಮಿಕರಿಗೆ ಕಿರುಕುಳ ಖಂಡನೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೃಷಿ ವಿಶ್ವವಿದ್ಯಾಲಯದ ಹಂಗಾಮಿ ನೌಕರರ ಸಂಘದ ಕಾರ್ಯಕರ್ತರು ಟಿಯುಸಿಐ ನೇತೃತ್ವದಲ್ಲಿ ಅ.2 ರಿಂದ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.
ನಗರದಲ್ಲಿ ಸೋಮವಾರ ಕೃಷಿ ವಿವಿ ಹಂಗಾಮಿ ನೌಕರರ ಸಂಘದಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಟಿಯುಸಿಐ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಮೇಧಾರ್, ಕಳೆದ ಅನೇಕ ತಿಂಗಳಿನಿಂದ ಕೃಷಿ ವಿವಿ ಆಡಳಿತಕ್ಕೆ ಹಂಗಾಮಿ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದರೂ ಕ್ರಮ ಮಾತ್ರ ಜರುಗಿಲ್ಲ. ಈ ಹಿನ್ನೆಲೆಯಲ್ಲಿ ಅ.2 ರಿಂದ ಕೃಷಿ ವಿವಿ ಪ್ರವೇಶ ದ್ವಾರದಲ್ಲಿಯೇ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಪಾರದರ್ಶಕವಾಗಿಲ್ಲ: ದಶಕಗಳಿಂದ ಕೃಷಿ ವಿವಿ ಯಲ್ಲಿ ದುಡಿದ ಕಾರ್ಮಿಕರಿಗೆ ಸರ್ಕಾರ ಸೂಚಿಸಿದ ವೇತನ ನೀಡುತ್ತಿಲ್ಲ. ಬದಲಿಗೆ ಅಂಥ ಕಾರ್ಮಿಕರ ದುಡಿಮೆಯ ಹಿರಿತನ ನಾಶಪಡಿಸುವ ಕಾರ್ಯ ಆಡಳಿತ ಮಾಡುತ್ತಿದೆ. ಹಂಗಾಮಿ ಕಾರ್ಮಿಕರಿಗೆ ಸಂಬಂಧಿಸಿ ವಿವಿ ಅಧಿಕಾರಿಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.
ನ್ಯಾಯಯುತವಾದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ ಅನೇಕ ಕಾರ್ಮಿಕರಿಗೆ ವಿನಾ ಕಾರಣ ಕಿರುಕುಳ ನೀಡಲಾಗುತ್ತಿದೆ. ಹಾಗೆಯೇ ಅಂಥವರನ್ನು ಕೆಲಸದಿಂದ ವಜಾ ಮಾಡಿದ ಅನೇಕ ಪ್ರಕರಣಗಳೂ ನಡೆದಿವೆ. ವಿವಿ ಆಡಳಿತದ ಇಂಥ ವರ್ತನೆಯಿಂದ ಬೇಸತ್ತು ಹೋರಾಟಕ್ಕಿಳಿಯುತ್ತಿರುವುದಾಗಿ ಅವರು ಹೇಳಿದರು. ಕೆಲಸದಿಂದ ವಜಾಗೊಂಡಿರುವ ಎಲ್ಲ ಹಂಗಾಮಿ ಕಾರ್ಮಿಕರನ್ನು ಕೂಡಲೇ ಕೆಲಸಕ್ಕೆ ಮರಳಿ ನೇಮಿಸಬೇಕು. ಚಾಲ್ತಿಯಲ್ಲಿರುವ ಹಂಗಾಮಿ ಕಾರ್ಮಿಕರಿಗೆ ಕನಿಷ್ಟ ದಿನಗೂಲಿ ಪಾವತಿಗೆ ಮುಂದಾಗಬೇಕು. ಹಂಗಾಮಿ ಕಾರ್ಮಿಕರ ಸೇವೆ ಸಲ್ಲಿಸಿದ ಕುರಿತು ಕಾರ್ಮಿಕರ ಹಾಜರಾತಿ ಪುಸ್ತಕ ನಿರ್ವಹಿಸಬೇಕು ಎಂದು ಹೋರಾಟದ ಮೂಲಕ ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದರು.
ವೇತನ ಸಂದಾಯ ಮಾಡಿ: ಹಂಗಾಮಿ ಕಾರ್ಮಿಕರ ಆಯಾ ತಿಂಗಳ ವೇತನವನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಸಂದಾಯ ಮಾಡಬೇಕು. ವೇತನ ಚೀಟಿಯನ್ನೂ ನೀಡಬೇಕು. ವಸತಿ ನಿಲಯಗಳಲ್ಲಿ ವೇತನವಿಲ್ಲದೇ ದುಡಿಯುತ್ತಿರುವ ಕಾರ್ಮಿಕರಿಗೆ ಮಾಸಿಕ ವೇತನ ನೀಡಬೇಕು. ಕೃಷಿ ವಿವಿ ಯಲ್ಲಿನ ದುಡಿಮೆಗಾರರ ಯಾದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಹೊರಗುತ್ತಿಗೆ, ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದುಪಡಿಸಬೇಕು. ಕ್ಷೇತ್ರ ಕಾರ್ಯದಲ್ಲಿನ ಕೆಲಸಗಾರರಿಗೆ ಸುರಕ್ಷಿತ ಸಲಕರಣೆ ಒದಗಿಸಬೇಕು. ಕಾರ್ಮಿಕ ಸಂಘದ ಚಟುವಟಿಕೆಗಳಿಗೆ ಯಾವುದೇ ಕಾರಣಕ್ಕೆ ಅಡ್ಡಿಪಡಿಸುವಂತಿಲ್ಲ. ಸಮಾನ ದುಡಿಮೆಗೆ ಸಮಾನ ವೇತನ ನೀಡಿಕೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಈಗಾಗಲೇ ಮನವಿ ಸಲ್ಲಿಸಿದ್ದು, ಸೆ. 30ರೊಳಗೆ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಅ. 2ರಿಂದ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ತಿಳಿಸಿದರು. ಸಂಘದ ಪ್ರಮುಖರಾದ ಬಸವರಾಜ ಯಾದವ್, ಭೀಮಪ್ಪ ದಾದಸ್, ಪಿ.ಈಶಪ್ಪ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement