ನಾಳೆ ಗ್ರಾಪಂ.ಗೆ ಬೀಗ ಜಡಿದು ಪ್ರತಿಭಟನೆ
ಗುಲ್ಬರ್ಗ: ಮಹಾಗಾಂವ ಗ್ರಾಮಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ಯುವಶಕ್ತಿ ಸೈನ್ಯ ಸೆ. 25ರಂದು ಬೆ.10.30ಕ್ಕೆ ಮಹಾಗಾಂವ ಗ್ರಾಪಂ ಕಚೇರಿಗೆ ಬೀಗಮುದ್ರೆ ಹಾಕಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಸಿಸಿ ರಸ್ತೆ, ಒಳಚರಂಡಿ, ಮಹಿಳಾ ಶೌಚಾಲಯ ನಿರ್ಮಾಣ ಸೇರಿದಂತೆ ಅಗತ್ಯ ಬೇಡಿಕೆ ಈಡೇರಿಸುವಂತೆ ಗ್ರಾಪಂ ಕಚೇರಿಗೆ ಬೀಗಮುದ್ರೆ ಹಾಕಿ ಪ್ರತಿಭಟಿಸಲಾಗುವುದು. ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುವವರೆಗೂ ಗ್ರಾಪಂ ಕಚೇರಿಗೆ ಹಾಕಲಾದ ಬೀಗವನ್ನು ತೆಗೆಯುವುದಿಲ್ಲ ಎಂದು ಲಿಂಗರಾಜ ಗುಂಡುರಕರ್, ಶಿವಮೂರ್ತಿ ನಿಗುಡಗಿ, ವಿಜಯಕುಮಾರ್ ರಾವೂರ ಎಚ್ಚರಿಸಿದ್ದಾರೆ.
ಇಂದು ಕೃಷ್ಣಮೂರ್ತಿ ಮಹಾರಾಜ ಉತ್ಸವ
ಗುಲ್ಬರ್ಗ: ಪಾಳಾ ಗ್ರಾಮದ ಮಲ್ಲಯ್ಯನ ಗುಡ್ಡದಲ್ಲಿ ಸೆ. 24ರಂದು ಪಾಳಾದ ಸದ್ಗುರು ಕೃಷ್ಣಮೂರ್ತಿ ಮಹಾರಾಜ ಅವರ 2ನೇ ಆರಾಧನಾ ಮಹೋತ್ಸವ ನಡೆಯಲಿದೆ. ಬೆಳಗ್ಗೆ 11ಗಂಟೆಯಿಂದ ಪವಮಾನ ಹೋಮ ನಡೆಯಲಿದೆ. ಆರಾಧನಾ ಕಾರ್ಯಕ್ರಮದೊಂದಿಗೆ ಭಜನಾ ತಂಡಗಳು ಭಾಗವಹಿಸಲಿವೆ. ನಂತರ ಪ್ರಸಾದ ವಿತರಣೆ ನಡೆಯಲಿದೆ. ಗುಲ್ಬರ್ಗ ಗ್ರಾಮೀಣ ಶಾಸಕ ಜಿ. ರಾಮಕೃಷ್ಣ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಜ್ಞಾನ ಮಂಟಪ ಉದ್ಘಾಟನಾ ಸಮಿತಿ ಅಧ್ಯಕ್ಷ ನಾರಾಯಣ ಪೇಶವಾರ ಕೋರಿದ್ದಾರೆ.
ಇಂದು ಪ್ರತಿಭಟನೆ
ಗುಲ್ಬರ್ಗ: ಕೆಪಿಟಿಸಿಎಲ್ ವಿದ್ಯುತ್ ವಿತರಣೆ ಗುತ್ತಿಗೆ ಕಾರ್ಮಿಕರ ಸಂಘ ಹಾಗೂ ಕರ್ನಾಟಕ ವಿದ್ಯುತ್ ಸರಬರಾಜು ಕಂಪನಿಗಳ ಗುತ್ತಿಗೆ ನೌಕರರ ಸಂಘಗಳು ಜಂಟಿಯಾಗಿ ಸೆ.24 ರಂದು ಬೆಳಗ್ಗೆ 11ಕ್ಕೆ ಬೆಂಗಳೂರಿನ ಕಾವೇರಿ ಭವನದ ಮುಂದೆ ರಾಜ್ಯಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಎಂ. ಹರ್ವೆ ತಿಳಿಸಿದ್ದಾರೆ.
ಸರ್ವ ಸದಸ್ಯರ ಸಭೆ
ಗುಲ್ಬರ್ಗ: ಸೆ.24ರಂದು ಸಂಜೆ 5.30ಕ್ಕೆ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಸರ್ಕಾರಿ, ಅರೆ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತದ 2ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಕರೆಯಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಬೇಕು ಎಂದು ಸಹಕಾರ ಸಂಘದ ಅಧ್ಯಕ್ಷ ಬಿ. ಎಸ್. ದೇಸಾಯಿ ಕೋರಿದ್ದಾರೆ.
ಪುಸ್ತಕ ಬಿಡುಗಡೆ
ಗುಲ್ಬರ್ಗ: ಕನ್ನಡದ ಗಜಲ್ ಕವಿ ಡಾ. ಕಾಶಿನಾಥ ಅಂಬಲಗೆ ಅನುವಾದಿಸಿದ ಡಜನ್ ಮೇಲೊಂದು ಪುಸ್ತಕಗಳ ಜನಾರ್ಪಣೆ ಸೆ.28 ಮತ್ತು ಅಕ್ಟೋಬರ್ 6 ರಂದು ಮೂರು ದಿನಗಳ ಕಾಲ ಗುಲ್ಬರ್ಗ, ಬೀದರ ಮತ್ತು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಸೆ.28ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಪ್ರಗತಿ ಪ್ರಕಾಶನ ಜಯನಗರ, ಸಮುದಾಯ ಕಲಬುರ್ಗಿ, ಜನವಾದಿ ಮಹಿಳಾ ಸಂಘಟನೆ ಸಹಯೋಗದಲ್ಲಿ ಡಜನ್ ಮೇಲೊಂದು ಪುಸ್ತಕಗಳ ಜನಾರ್ಪಣೆ ನಡೆಯಲಿದೆ. ಖ್ಯಾತ ಕವಿ ಡಾ. ಎಲ್. ಹನುಮಂತಯ್ಯ ಪುಸ್ತಕಗಳು ಓದುಗಲೋಕಕ್ಕೆ ಅರ್ಪಣೆ ಮಾಡಲಿದ್ದಾರೆ. ಪ್ರೊ. ಎಸ್. ಜಿ. ಸಿದ್ದರಾಮಯ್ಯ, ಪ್ರೊ. ಬಸವರಾಜ ಕಲ್ಗುಡಿ ಪುಸ್ತಕ ಕುರಿತು ಮಾತನಾಡಲಿದ್ದಾರೆ. ಟಿ.ಸುರೇಂದ್ರರಾವ ಅಧ್ಯಕ್ಷತೆ ವಹಿಸಲಿದ್ದಾರೆ. ಅಕ್ಟೋಬರ್ 6 ರಂದು ಬೀದರ್ನ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಪ್ರಗತಿ ಪ್ರಕಾಶನ ಜಯನಗರ, ಜನವಾದಿ ಮಹಿಳಾ ಸಂಘಟನೆ ಮತ್ತು ಕರ್ನಾಟಕ ಸಾಹಿತ್ಯ ಸಂಘ ಬೀದರ ಸಹಯೋಗದಲ್ಲಿ ಡಜನ್ ಮೇಲೊಂದು ಪುಸ್ತಕಗಳ ಜನಾರ್ಪಣೆ ನಡೆಯಲಿದೆ. ಹಂಪಿ ಕನ್ನಡ ವಿವಿ ಕುಲಪತಿ ಪ್ರೊ.ಹಿ.ಚಿ. ಬೋರಲಿಂಗಯ್ಯ ಪುಸ್ತಕಗಳು ಓದುಗಲೋಕಕ್ಕೆ ಅರ್ಪಣೆ ಮಾಡಲಿದ್ದಾರೆ. ಡಾ. ಮೀನಾಕ್ಷಿ ಬಾಳಿ, ಡಾ. ಅಪ್ಪಗೆರೆ ಸೋಮಶೇಖರ, ಪ್ರೊ. ಶಂಭುಲಿಂಗ ಕಾಮಣ್ಣ ಪುಸ್ತಕ ಕುರಿತು ಮಾತನಾಡಲಿದ್ದಾರೆ. ಡಾ. ಜಗನ್ನಾಥ ಹೆಬ್ಬಾಳೆಸ, ಕೆ. ನೀಲಾ ಪಾಲ್ಗೊಳ್ಳಲಿದ್ದಾರೆ.
25ರಂದು ಮಹಾಸಭೆ
ಗುಲ್ಬರ್ಗ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರ ಪತ್ತಿನ ಸಹಕಾರ ಸಂಘದ 2012-13ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ ಸೆ.25ರ ಬೆಳಗ್ಗೆ 11.30ಕ್ಕೆ ನಗರ ಕೋಠಾರಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಸದಸ್ಯರಿಗೆ ಗಣಕೀಕೃತ ಗುರುತಿನ ಚೀಟಿ ವಿತರಣೆ, ಪ್ರತಿಭಾವಂತರಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು.