'ಸಮಗ್ರ ಕೃಷಿ ಪದ್ಧತಿ ಅಳವಡಿಕೆಯಿಂದ ರೈತರ ಅಭಿವೃದ್ಧಿ'
ಲಿಂಗಸ್ಗೂರು: ಕೃಷಿ ವಿಶ್ವವಿದ್ಯಾಲಯದಿಂದ ಹೊಸ ಹೊಸ ತಂತ್ರಜ್ಞಾನ ಬಿಡುಗಡೆ ಮಾಡಿದ್ದು, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ ಎಂದು ಕೃಷಿ ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ. ಪಿ.ಕೆ. ವಿಶ್ವನಾಥ ಸಲಹೆ ನೀಡಿದರು. ಪಟ್ಟಣದ ಪುರಸಭೆ ವ್ಯಾಪ್ತಿಯ ಕಸಬಾ ಲಿಂಗಸ್ಗೂರು ಗ್ರಾಮದ ರೈತ ಯಮನಪ್ಪ ದಂಡಿನ್ ಅವರ ಜಮೀನಿನಲ್ಲಿ ಕೃಷಿ ವಿವಿ ರಾಯಚೂರು, ಕೃಷಿ ವಿಸ್ತರಣಾ ಕೇಂದ್ರ ಲಿಂಗಸ್ಗೂರು ಹಾಗೂ ಕೃಷಿ ಸಂಶೋಧನಾ ಕೇಂದ್ರ ರಾಯಚೂರು ಇವರ ಸಹಯೋಗದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಸಮಗ್ರ ಕೃಷಿ ಪದ್ಧತಿ ಹಾಗೂ ಅಖಿಲ ಭಾರತ ಸಂಯೋಜಿತ ಯೋಜನೆಯಡಿ ಹಮ್ಮಿಕೊಂಡಿದ್ದ ಸೂರ್ಯಕಾಂತಿ ಬೆಳೆ ಕ್ಷೇತ್ರೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಸಹ ಸಂಶೋಧನಾ ನಿರ್ದೇಶಕ ಡಾ. ಶಂಕರಗೌಡ ಮಾತನಾಡಿ, ತಾಲೂಕಿನಲ್ಲಿ ಬಹುತೇಕ ರೈತರು ಖಾಸಗಿ ಸೂರ್ಯಕಾಂತಿ ತಳಿಗಳ ಮೇಲೆ ಅವಲಿಂಬಿತರಾಗಿದ್ದು, ಕೃಷಿ ವಿಶ್ವವಿದ್ಯಾಲಯ ನಂಜಾಣುರೋಗ ನಿರೋಧಕ, ಅಧಿಕ ಇಳುವರಿ ನೀಡುವ ಆರ್ಎಸ್ಎಫ್ಎಚ್-130 ತಳಿ ಬಿಡುಗಡೆ ಮಾಡಿದೆ. ರೈತರು ಸದುಪಯೋಗಪಯಲು ತಿಳಿಸಿದರು. ಬೇಸಾಯತಜ್ಞ ಶಾಮರಾವ್, ಡಾ.ಶಾನವಾಡ, ಸುಜಯ್ ಹುರಳಿ, ಯಮನಪ್ಪ ದಂಡಿನ್, ಸಿದ್ಧಲಿಂಗೇಶ್ವರ ಪಾಟೀಲ, ರಾಜಶೇಖರಗೌಡ, ಶಿವಪುತ್ರಗೌಡ, ಕುಪ್ಪಣ್ಣ ಕೊಡ್ಲಿ, ಬಸವರಾಜ ಇತರರಿದ್ದರು.