ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಇಂದು ಹಿಂಗಾರು ಬೀಜ ದಿನೋತ್ಸವ

Rashmi Kasaragodu
Updated On : 25 Sept 2013, 11:40 am

ರಾಯಚೂರು: ಕಳೆದ ಎರಡು ವರ್ಷಗಳ ಭೀಕರ ಬರ, ಪ್ರಸಕ್ತ ವರ್ಷದಲ್ಲಿ ಮುಂಗಾರು ಹಂಗಾಮಿನಲ್ಲಿ ಅತೀವೃಷ್ಟಿಯಿಂದ ಕಂಗೆಟ್ಟಿರುವ ರೈತರು ಹಿಂಗಾರು ಹಂಗಾಮಿನಲ್ಲಿ ಉತ್ತಮ ಭವಿಷ್ಯದ ಕನಸು ಕಾಣುತ್ತಿದ್ದು, ಈ ಹಿನ್ನೆಲೆಯಲ್ಲಿಯೇ ರಾಯಚೂರು ಕೃಷಿ ವಿವಿ ಯಲ್ಲಿ ಹಿಂಗಾರು ಹಂಗಾಮಿಗೆ ರೈತರಿಗೆ ಮೂಲ ಬಿತ್ತನೆ ಬೀಜ ಒದಗಿಸುವ ಕಾರ್ಯಕ್ರಮ ಬೀಜ ದಿನೋತ್ಸವಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿವೆ.
ರಾಯಚೂರು ಕೃಷಿ ವಿವಿ  ರೈತರ ಪರ ಎಂಬುದನ್ನು ಈಗಾಗಲೇ ಸಾಬೀತು ಮಾಡಿದೆ. ಅದರಂತೆ ರೈತರಿಗೆ ಅನುಕೂಲ ವಾಗುವಂಥ ಅನೇಕ ಕಾರ್ಯಕ್ರಮ ವಿವಿಯಲ್ಲಿ ಆಯೋಜಿಸಲಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಕೃಷಿ ವಿವಿಯಲ್ಲಿ ಆಯೋಜಿಸುತ್ತಿರುವ ಬೀಜ ದಿನೋತ್ಸವಕ್ಕೆ ಈಗ ಐದನೇ ವರ್ಷದ ಸಂಭ್ರಮ.
ಕೊರತೆ ನೀಗಿಸಲು ಪ್ರಯತ್ನ: ಹೌದು. ರಾಯಚೂರು ಕೃಷಿ ವಿವಿಯಲ್ಲಿ ಸೆ. 25ರಂದು ಹಿಂಗಾರು ಹಂಗಾಮಿನ ಬೀಜ ದಿನೋತ್ಸವ ಆಚರಿಸಲಾಗುತ್ತಿದೆ. ರೈತರಿಗೆ ಕೃಷಿಯಲ್ಲಿ ಮೂಲಬಿತ್ತನೆ ಬೀಜಗಳ ಕೊರತೆ ಕಾಡುವುದು ಸಹಜ. ಅಂಥ ಕೊರತೆಯನ್ನು ನೀಗಿಸುವ ಪ್ರಯತ್ನವಾಗಿಯೇ ಬೀಜದಿನೋತ್ಸವದ ಆಯೋಜನೆಯ ಮೂಲ ಉದ್ದೇಶ.
ಹಿಂಗಾರು ಬೀಜ ದಿನೋತ್ಸವದಲ್ಲಿ ರೈತರಿಗೆ ಹಿಂಗಾರು ಹಂಗಾಮಿನಲ್ಲಿ ಮೂಲ ಬಿತ್ತನೆ ಬೀಜಗಳ ವಿತರಣೆ ಜತೆಗೆ ಹಿಂಗಾರು ಹಂಗಾಮಿಗೆ ಅನುಸರಿಸಬೇಕಾದ ಬೇಸಾಯ ಕ್ರಮಗಳು, ಬಳಸಬೇಕಾದ ಬಿತ್ತನೆ ಬೀಜದ ಪ್ರಮಾಣ, ರಸಗೊಬ್ಬರ, ಕೀಟನಾಶಕಗಳ ಬಳಕೆ ಸೇರಿ ವಿವಿಧ ಕೃಷಿ ಸಂಬಂಧಿ ಸಲಹೆಗಳನ್ನು ಬೀಜ ದಿನೋತ್ಸವದಲ್ಲಿ ಕೃಷಿ ವಿಜ್ಞಾನಿಗಳು ನೀಡಲಿದ್ದಾರೆ.
ಸಿದ್ಧತೆ: ಈಗಾಗಲೇ ಕೃಷಿ ವಿವಿಯಲ್ಲಿ ಹಿಂಗಾರು ಬೀಜ ದಿನೋತ್ಸವಕ್ಕಾಗಿ ಅಗತ್ಯ ಸಿದ್ಧತೆಗಳು ಮುಗಿದಿದ್ದು, ದಿನೋತ್ಸವಕ್ಕೆ ಆಗಮಿಸುವ ರೈತರಿಗೆ ಅಗತ್ಯ ಪ್ರಮಾಣದ ಮೂಲ ಬಿತ್ತನೆ ಬೀಜ ಪೂರೈಕೆಗೆ ವಿವಿ ಸಜ್ಜಾಗಿದೆ. ಬೀಜ ಸಂಸ್ಕರಣ ಘಟಕದಲ್ಲಿ ತೊಗರಿ, ಹೆಸರು, ಉದ್ದು, ಸೋಯಾ ಆವರೆ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ,ಹತ್ತಿ, ಸಜ್ಜೆ, ನವಣೆ ಸೇರಿ ವಿವಿಧ ಬೆಳೆಗಳ ಸುಮಾರು 2563.5 ಕ್ವಿಂಟಾಲ್ ಮೂಲ ಬಿತ್ತನೆ ಬೀಜ ದಾಸ್ತಾನಿರಿಸಲಾಗಿದೆ. 14014.5 ಕ್ವಿಂಟಾಲ್ ಪ್ರಮಾಣಿತ ಬಿತ್ತನೆ ಬೀಜ ಸಂಗ್ರಹಿಸಿಡಲಾಗಿದೆ.
ಬೀಜ ಗ್ರಾಮ ಯೋಜನೆ: ಕೃಷಿ ವಿವಿ ಯು ಈಗಾಗಲೇ ರೈತರಲ್ಲಿ ಮೂಲಬಿತ್ತನೆ ಬೀಜದ ಬಳಕೆಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಬೀಜ ಗ್ರಾಮ ಎಂಬ ವಿನೂತನ ಯೋಜನೆ ಜಾರಿಗೆ ತಂದಿದ್ದು, ಅದರಡಿ ಕೃಷಿ ವಿವಿ ಯಿಂದ ಕಡಿಮೆ ದರದಲ್ಲಿ ಮೂಲ ಬಿತ್ತನೆ ಬೀಜಗಳನ್ನು ರೈತ ರಿಗೆ ಒದಗಿಸಲಾಗುತ್ತದೆ. ಅಂಥ ಬೀಜಗಳನ್ನು ರೈತರು ಬಳಕೆ ಮಾಡಿ ಉತ್ತಮ ಬೆಳೆ ಬೆಳೆದು ನಂತರದಲ್ಲಿ ತಮ್ಮದೇ ಗ್ರಾಮದ ಇನ್ನಿತರ ರೈತರಿಗೂ ಮೂಲಬಿತ್ತನೆ ಬೀಜಗಳ ಬಳಕೆಗೆ ಪ್ರೋತ್ಸಾಹಿಸುವಂಥ ಯೋಜನೆಯಿದು.
ಕಳೆದ ನಾಲ್ಕು ವರ್ಷಗಳಲ್ಲಿ ಬೀಜಗ್ರಾಮ ಯೋಜನೆ ಅಡಿ ಒಟ್ಟು 372 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿದ್ದು, 21171 ರೈತರಿಗೆ ಮೂಲ ಬಿತ್ತನೆ ಬೀಜಗಳನ್ನು ವಿತರಿಸುವ ಮೂಲಕ ಉತ್ತಮ ಫಸಲು ಪಡೆಯುವ ನಿಟ್ಟಿನಲ್ಲಿ ರೈತರಿಗೆ ಕೃಷಿ ವಿವಿ ನೆರವಾಗಿದೆ.
ಉತ್ತಮ ಪ್ರತಿಕ್ರಿಯೆ: ಈ ಕುರಿತು ಕನ್ನಡಪ್ರಭಕ್ಕೆ ಮಾತನಾಡಿದ ಕೃಷಿ ವಿವಿ ಬೀಜ ಘಟಕದ ಅಧಿಕಾರಿ ಡಾ.ಬಸವೇಗೌಡರು, ಕೃಷಿ ವಿವಿಯು ಕಳೆದ ನಾಲ್ಕು ವರ್ಷಗಳಿಂದ ಬೀಜ ದಿನೋತ್ಸವ ಆಯೋಜಿಸುತ್ತಿದ್ದು ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಚಿನ ದಿನಗಳಲ್ಲಿ ಬಹಳಷ್ಟು ಗ್ರಾಮಗಳಿಂದ ರೈತರು ಮೂಲ ಬಿತ್ತನೆ ಬೀಜಗಳಿಗಾಗಿ ವಿವಿ ಗೆ ಆಗಮಿಸುತ್ತಿಲ್ಲ. ಆ ಮೂಲಕ ಮೂಲ ಬಿತ್ತನೆ ಬೀಜಗಳಲ್ಲಿ ಸ್ವಾವಲಂಬಿಗಳಾಗಿದ್ದಾರೆಂದು ಹೇಳಿದ್ದಾರೆ.
ಈ ಮಧ್ಯೆ ಕೃಷಿ ವಿವಿಯು ವರ್ಷದಿಂದ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಒದಗಿಸುವ ನಿಟ್ಟಿನಲ್ಲಿ ಬೀಜ ಸಂಸ್ಕರಣ ಘಟಕಗಳ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ವಿವಿ ವ್ಯಾಪ್ತಿಯ ವಿವಿಧೆಡೆ ಗೋದಾಮುಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಂಡಿದೆ. ವಿವಿ ವ್ಯಾಪ್ತಿ ರಾಯಚೂರು, ಬಳ್ಳಾರಿ, ಗುಲ್ಬರ್ಗ, ಬೀದರ್, ಯಾದಗಿರಿ ಜಿಲ್ಲೆಗಳ ವಿವಿಧೆಡೆ ಒಟ್ಟು 9ಕಡೆ ಬೀಜ ಸಂಸ್ಕರಣ ಘಟಕಗಳು ಮತ್ತು ಗೋದಾಮು ನಿರ್ಮಿಸುವ ಕಾರ್ಯಕ್ಕೆ ಮುಂದಾಗಿದೆ. ಒಂದೆಡೆ ರೈತರು ಕಳಪೆ ಬಿತ್ತನೆ ಬೀಜಗಳ ಬಳಕೆಯಿಂದ ಹಾನಿ ಅನುಭವಿಸುತ್ತಿರುವ ಸಂದರ್ಭದಲ್ಲಿ ಬೀಜ ದಿನೋತ್ಸವದಂಥ ವಿವಿ ಯೋಜನೆಗೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement