'ಬ್ಯಾಂಕಿನ ಅಭಿವೃದ್ಧಿಗೆ ಸಹಕಾರ ಅಗತ್ಯ'
ಸಿಂಧನೂರು: ಬ್ಯಾಂಕುಗಳು ಅಭಿವೃದ್ಧಿ ಹೊಂದಲು ಗ್ರಾಹಕರು ಕೊಡುಕೊಳ್ಳುವ ವ್ಯವಹಾರದಲ್ಲಿ ಬ್ಯಾಂಕ್ಗಳೊಂದಿಗೆ ಸಹಕರಿಸಿದಾಗ ಮಾತ್ರ ಬ್ಯಾಂಕುಗಳು ಅಭಿವೃದ್ಧಿ ಹೊಂದುತ್ತವೆ ಎಂದು ಎಸ್.ಬಿ.ಎಚ್. ಶಾಖಾ ವ್ಯವಸ್ಥಾಪಕ ವಾಸುದೇವ ನಾಯಕ ಹೇಳಿದರು.
ಹೆಚ್ಚಿನ ಬೆಳವಣಿಗೆ: ತಾಲೂಕಿನ ಬಳಗಾನೂರ ಗ್ರಾಮದ ಮಾರುತಿ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಮೂರನೇ ವರ್ಷದ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಬ್ಯಾಂಕುಗಳ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಸೇವಾ ಮನೋಭಾವನೆಯಿಂದ ಕೆಲಸ ಮಾಡಿದಾಗ ಮಾತ್ರ ಹೆಚ್ಚಿನ ಬೆಳವಣಿಗೆ ಸಾಧ್ಯ ಎಂದರು.
ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷ ಮರಿಯಪ್ಪ ಅಂಬ್ಲಿ ಸಂಸ್ಥಾಪಕ ಸಿದ್ದನಗೌಡ ಕಣಗಿನಾಳ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಜ್ಯೊತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ನಿವ್ವಳ ಲಾಭದಲ್ಲಿ ಷೇರುದಾರರಿಗೆ 13ರ್ ಲಾಭ ನೀಡುವುದಾಗಿ ಘೋಷಿಸಿದರು. ಹಿಂದಿನ ವರ್ಷದ ಸಾಮಾನ್ಯಸಭೆಯ ನಡುವಳಿಕೆಗಳನ್ನು ಸಿಬ್ಬಂದಿ ಮಂಜುನಾಥ ಕರಡಕಲ್ ವಾಚಿಸಿದರು. ಅಂದಾಜು ಆಯವ್ಯಯ ಕುರಿತು ಲೆಕ್ಕಿಗ ಮಂಜುನಾಥ ಸಭೆಗೆ ತಿಳಿಸಿದರು. ಸಹಕಾರಿ ನಿಯಮಿತದ ವ್ಯವಸ್ಥಾಪಕ ನಾಗರಾಜ 2012-13 ರ ಆಡಳಿತ ಮಂಡಳಿ ಸಿದ್ದಪಡಿಸಿದ ವಾರ್ಷಿಕ ವರದಿಯಲ್ಲಿ,ಸದಸ್ಯರಿಗೆ ನೀಡಿದ ವಿವಿಧ ರೀತಿಯ ಸಾಲ, ಮುಂಗಡಗಳ ಮತ್ತು ಹೂಡಿಕೆಗಳ ಬಗ್ಗೆ ಆಯವ್ಯಯದ ಸಮಗ್ರ ವರದಿಯನ್ನು ಮಂಡಿಸಿದರು.
ಅನುಮೋದನೆ: ಮಾನ್ವಿ ಲಕ್ಷ್ಮಿ ಸೌಹಾರ್ದದ ವ್ಯವಸ್ಥಾಪಕ ಬಸವರಾಜ ಅಂದಾಜು ಆಯವ್ಯಯಗಳಿಗೆ ಮಂಜೂರಾತಿ, ಲೆಕ್ಕ ಪರಿಶೋಧಕರ ನೇಮಕ, ಸಹಕಾರಿ 97ನೇ ತಿದ್ದುಪಡಿ ಅನುಗುಣವಾಗಿ ಉಪವಿಧಿ ತಿದ್ದುಪಡಿ ಮಾಡುವುದು ಇತರ ವಿಷಯಗಳಿಗೆ ಅಂಗೀಕರಿಸಲು ಸಭೆಯ ಅನುಮೋದನೆ ಪಡೆದರು.
ಕಾರ್ಯಕ್ರಮದಲ್ಲಿ ಸಹಕಾರಿಯ ಉಪಾಧ್ಯಕ್ಷ ಬಿ. ಅಮರನಾಥ, ನಿರ್ದೇಶಕ ಶಿವಣ್ಣ ಅಂಗಡಿ, ಉದಯಕುಮಾರ,ಬಸವರಾಜ ಕರಡಕಲ್, ಕೆ.ರಾಘವೇಂದ್ರ, ಸುನೀಲ್, ಸಿದ್ರಾಮಪ್ಪ, ನಾಗರಾಜ, ಮಲ್ಲನಗೌಡ, ಮಂಜುನಾಥ, ಶ್ರೀಧರ,ಚಂದ್ರಶೇಖರ ಸೇರಿದಂತೆ ಸಹಕಾರಿ ಸದಸ್ಯರು ಗ್ರಾಮದ ಮುಖಂಡರು ಇದ್ದರು.