ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕೋಮುವಾದಿ ಬಿಜೆಪಿ ದೂರವಿಡಿ

Vishwanath S
Updated On : 2 Apr 2014, 11:30 am

ಕನ್ನಡಪ್ರಭ ವಾರ್ತೆ  ರಾಯಚೂರು  ಏ.1
ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಲು ನಿರ್ಧರಿಸಿದ್ದು, ಮಾದಿಗ ಸಮಾಜದ ಮತದಾರರೂ 'ಕೈ'ಗೆ ಬೆಂಬಲಿಸುವಂತೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮನವಿ ಮಾಡಿದೆ.
ಈ ಕುರಿತು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘಟನೆಯ ಪ್ರಮುಖರಾದ ಅಂಬಣ್ಣ ಅರೋಲಿಕರ್ ಮತ್ತು ಜೆ.ಬಿ.ರಾಜು, ರಾಷ್ಟ್ರಕ್ಕೆ ಕೋಮುವಾದಿ ಪಕ್ಷಗಳಿಂದ ಅಪಾಯ ಕಾದಿದೆ. ಅದರಲ್ಲೂ ಕೋಮುವಾದಿ ಬಿಜೆಪಿ ಸದ್ಯ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಮುಂದಾಗುತ್ತಿದೆ. ಅದಕ್ಕೆ ಕಡಿವಾಣ ಹಾಕುವ ಅವಶ್ಯಕತೆಯಿದೆ ಎಂದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಸ್ಥಾಪಿಸಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೆಸರಿನಲ್ಲಿ ಮತ ಕೇಳಲು ಮುಂದಾಗಿದೆ. ದೇಶದ ಭದ್ರತೆ, ಪ್ರಗತಿ ಹೆಸರಿನಲ್ಲಿ ಮತದಾರರ ಮನವೊಲಿಕೆ ಕಾರ್ಯ ಮಾಡುತ್ತಿದೆ. ಆದರೆ ಮೋದಿ ಕೋಮುವಾದಿ ವ್ಯಕ್ತಿಯಾಗಿದ್ದು, ಗುಜರಾತ್‌ನಲ್ಲಿ ಅದು ಸಾಬೀತಾಗಿದೆ ಎಂದು ಆರೋಪಿಸಿದರು.
ದಲಿತ ವಿರೋಧಿ: ನರೇಂದ್ರ ಮೋದಿ ಅಧಿಕಾರವಧಿಯಲ್ಲಿ ಗುಜರಾತ್‌ನಲ್ಲಿ ದೀನ ದಲಿತರು, ಅಲ್ಪಸಂಖ್ಯಾತರ ಮೇಲೆ ಅತೀ ಹೆಚ್ಚಿನ ಪ್ರಮಾಣದಲ್ಲಿ ದೌರ್ಜನ್ಯ ನಡೆದಿದೆ. ಕಳೆದ 2001ರಿಂದ ಈವರೆಗೆ ಅಲ್ಲಿನ ಪರಿಶಿಷ್ಟ ಜಾತಿ ವರ್ಗದವರ ಮೇಲೆ ಅನಗತ್ಯವಾಗಿ 6,53,658 ಕೇಸ್ ದಾಖಲಿಸಲಾಗಿದೆ. ಇದು ವಾಸ್ತವಾಂಶ ಬಯಲು ಮಾಡಿದೆ ಎಂದರು.
ರಾಜ್ಯದಲ್ಲಿ ಕಳೆದ ಬಾರಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿ ವರ್ಗ ಮತ್ತು ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ, ದೌರ್ಜನ್ಯ ಅತೀ ಹೆಚ್ಚಿನ ಪ್ರಮಾಣದಲ್ಲಿ ನಡೆದಿತ್ತು. ಹಾಗೊಂದು ವೇಳೆ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ದಬ್ಬಾಳಿಕೆ ಮತ್ತು ದೌರ್ಜನ್ಯ ಪ್ರಕರಣಗಳು ಹೆಚ್ಚಲಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪರ ನಿಲುವು ತಳೆಯಲು ಕಾರಣ: ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮಾತ್ರ ಜಾತ್ಯತೀತ ವ್ಯವಸ್ಥೆ ಹೊಂದಿರುವ ಪಕ್ಷವಾಗಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೆಂಬಲಿಸಲು ಮಾದಿಗ ಮೀಸಲಾತಿ ಹೋರಾಟ ಸಮಿತಿ ನಿರ್ಧರಿಸಿದೆ ಎಂದ ಅವರು, ಈ ಹಿಂದೆ ಸದಾಶಿವ ಆಯೋಗದ ವರದಿ ಜಾರಿ ಮಾಡದ ಹಿನ್ನೆಲೆ ಕಾಂಗ್ರೆಸ್ ವಿರುದ್ಧ ಪ್ರಸಕ್ತ ಚುನಾವಣೆಯಲ್ಲಿ ಹೋರಾಡಲು ನಿರ್ಧರಿಸಲಾಗಿತ್ತು. ಆದರೆ ಕೇಂದ್ರದ ಮುಂದೆಯೇ ಈ ವರದಿ ಜಾರಿ ವಿಚಾರ ಮಂಡನೆಯಾಗಿದೆ ಎಂದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪರವಾಗಿ ನಿಲುವು ತಳೆದಿರುವುದಾಗಿ ತಿಳಿಸಿದರು.
ರಾಯಚೂರು ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ ಅವರು ಸರಳ, ಸಜ್ಜನ ರಾಜಕಾರಣಿಯಾಗಿದ್ದು, ಅವರ ಪ್ರತಿಸ್ಪರ್ಧಿ ಬಿಜೆಪಿಯ ಶಿವನಗೌಡ ನಾಯಕ ಅವರು ಈ ಹಿಂದೆ ದುರಾಡಳಿತ ನೀಡಿದ ಉದಾಹರಣೆಯಿದೆ. ಶಿವನಗೌಡ ನಾಯಕ ಅವರು ಕಳೆದ ಅವಧಿಗೆ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ವೇಳೆ ಕೋಟ್ಯಂತರ ರು. ಅನುದಾನ ದೇವದುರ್ಗದ ಅಭಿವೃದ್ಧಿ ಹೆಸರಿನಲ್ಲಿ ಮಂಜೂರು ಮಾಡಿಸಿದ್ದ ಅನುದಾನದ ದುರ್ಬಳಕೆಗೆ ಕಾರಣರಾಗಿದ್ದಾರೆಂದು ಆರೋಪಿಸಿದರು. ಭ್ರಷ್ಟಾಚಾರ, ದಬ್ಬಾಳಿಕೆ ಹಾಗೂ ದೌರ್ಜನ್ಯಕ್ಕೆ ಕಾರಣರಾಗಿರುವ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಕಾಂಗ್ರೆಸ್ ಬೆಂಬಲಿಸಲು ನಿರ್ಧರಿಸಿದ್ದು, ಮಾದಿಗ ಸಮಾಜದ ಎಲ್ಲರೂ ಈ ಪಕ್ಷಕ್ಕೆ ಮತ ನೀಡಿ ಬೆಂಬಲಿಸಬೇಕು. ಆ ಮೂಲಕ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಹೇಮರಾಜ್ ಅಸ್ಕಿಹಾಳ್, ಅಬ್ರಹಾಂ, ಶಿವಪ್ಪ ಬಲ್ಲಿದವ್ ಸೇರಿದಂತೆ ಅನೇಕರಿದ್ದರು.
'ಕೈ' ಬಲಪಡಿಸಲು ಮಾದಿಗ ಸಂಘಟನೆಗಳ ನಿರ್ಧಾರ
ರಾಯಚೂರು:  ಶೋಷಿತರ ಪರ ನಿಲುವು, ಅಭಿವೃದ್ಧಿ ಪರ ಚಿಂತನೆ ಹೊಂದಿರುವ ಕಾಂಗ್ರೆಸನ್ನು ಪ್ರಸಕ್ತ ಚುನಾವಣೆಯಲ್ಲಿ ಬೆಂಬಲಿಸಲು ನಿರ್ಧರಿಸಿದ್ದು, ಮಾದಿಗ ಸಮಾಜದವರು ಅಭ್ಯರ್ಥಿ ಬಿ.ವಿ. ನಾಯಕ ಅವರನ್ನು ಬೆಂಬಲಿಸುವಂತೆ ಜಿಲ್ಲಾ ಮಾದಿಗ ದಂಡೋರಾ ಹಾಗೂ ಜಿಲ್ಲಾ ಮಾದಿಗ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ರಾಮಸ್ವಾಮಿ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿಯು ಬಿಜೆಪಿ ಅಭ್ಯರ್ಥಿಗಿಂತ ಸನ್ನಡತೆ ಹೊಂದಿದ್ದಾರೆ. ದೀನ ದಲಿತರಪರ ಕಾಳಜಿಯುಳ್ಳವರಾಗಿದ್ದಾರೆ. ಯಾವುದೇ ರೀತಿಯ ಭ್ರಷ್ಟಾಚಾರದಲ್ಲಿ ತೊಡಗಿಲ್ಲ. ಹಾಗೆಯೇ ಮತದಾರರೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರದಲ್ಲಿ ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಮಾಜದವರಿಗೆ ಅನೇಕ ರೀತಿಯಲ್ಲಿ ಅನುಕೂಲವಾಗಿದೆ. ಸಾಲಮನ್ನಾ ಕಾರ್ಯಕ್ರಮದಿಂದ ಸಾವಿರಾರು ಮಾದಿಗ ಸಮಾಜದವರು ಋಣಮುಕ್ತಗೊಂಡಿದ್ದಾರೆಂದು ಹೇಳಿದರು.
ಕಾಂಗ್ರೆಸ್ ಸಮರ್ಥನೆ: ಮಾಜಿ ಸಂಸದ ವೆಂಕಟೇಶ ನಾಯಕ ಅವರು ರಾಯಚೂರು ಲೋಕಸಭೆ ಕ್ಷೇತ್ರವನ್ನು 4 ಬಾರಿ ಸಂಸದರಾಗಿ ಪ್ರತಿನಿಧಿಸಿದ್ದು, ಉತ್ತಮ ಕಾರ್ಯಗಳನ್ನು ಕೈಗೊಂಡಿದ್ದಾರೆ.   ಮಾದಿಗ ಸಮಾಜದ ಮೇಲೆ ಅವರ ಅವಧಿಯಲ್ಲಿ ದೌರ್ಜನ್ಯ, ದಬ್ಬಾಳಿಕೆಯ ಪ್ರಕರಣಗಳು ನಡೆದಿಲ್ಲ ಎಂದು ಹೇಳಿದರು. ಬಿಜೆಪಿ ಸರ್ಕಾರದ ಅಧಿಕಾರವಧಿಯಲ್ಲಿ ಪರಿಶಿಷ್ಟ ಜಾತಿ ಸಮಾಜಕ್ಕೆ ಯಾವುದೇ ರೀತಿಯ ಸೌಲಭ್ಯ ದೊರೆತಿಲ್ಲ.
ಹಾಲಿ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ತಾವು ಸಚಿವರಾಗಿದ್ದಾಗ ವಿವಿಧ ಯೋಜನೆಗಳಡಿ ತಮ್ಮ ಬೆಂಬಲಿಗರಿಗೆ ಮಾತ್ರ ಎಲ್ಲ ರೀತಿಯ ಅನುಕೂಲ ಕಲ್ಪಿಸಿದ್ದು, ಸರ್ವರ ಹಿತ ಕಾಯಲಿಲ್ಲ ಎಂದು ದೂರಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ನರಸಪ್ಪ ದಂಡೋರಾ, ತಿಮ್ಮಪ್ಪ ಗುಂಜಳ್ಳಿ, ನರಸಿಂಹಲು ಮಾಡಗಿರಿ ಮತ್ತಿತರರಿದ್ದರು.
ಕಾಂಗ್ರೆಸ್‌ಗೆ ದಸಂಸ ಬೆಂಬಲ
ಲಿಂಗಸ್ಗೂರು: ದೇಶದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅವರ ಸಾಮಾಜಿಕ ಮತ್ತು ಸಮಾನತೆಯ ಪರಿಕಲ್ಪನೆ ಜಾರಿಯಾಗಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿ ಕಾಂಗ್ರೆಸನ್ನು ಬೆಂಬಲಿಸಲಿದೆ ಎಂದು ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಹೇಳಿದರು.
ಸ್ಥಳೀಯ ಖಾಸಗಿ ವಸತಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರಕ್ಕಿಂತ ಕೋಮುವಾದ ಅಪಾಯಕಾರಿಯಾಗಿದ್ದು, ನಮಗೆ ಮೋದಿ ಅಲೆ ಬೇಕಾಗಿಲ್ಲ. ಬದಲಾಗಿ 12ನೇ ಶತಮಾನದ ಬಸವಣ್ಣನವರ ಅನುಭವ ಮಂಟಪದ ಕಲ್ಪನೆ ಬೇಕಾಗಿದೆ. ಚುನಾವಣೆಯಲ್ಲಿ ಮತದಾರರು ಜಾಗೃತರಾಗಬೇಕು ಎಂದರು.   ಬಿಜೆಪಿ ರಾಮನ ಹೆಸರಲ್ಲಿ ಮತ್ತು ಜಾತಿ, ಧರ್ಮದ ಹೆಸರಲ್ಲಿ ರಾಜಕಾರಣ ಮಾಡುತ್ತಿದೆ ಎಂದು ತಿಳಿಸಿದರು.
ಈ ವೇಳೆ ಸಮಿತಿ ಜಿಲ್ಲಾ ಸಂಚಾಲಕ ಪ್ರಭುಲಿಂಗ ಮೇಗಳಮನಿ, ಹೊನ್ನಪ್ಪ ಯಾದಗಿರಿ, ಜಿ.ವೆಂಕಟೇಶ ಬೆಂಗಳೂರು, ಬಸವರಾಜ್ ಈಚನಾಳ, ಗದಗ ಪ್ರಕಾಶ, ಶರಣಪ್ಪ, ಶಿವಗ್ಯಾನಿ ಕಪಗಲ್, ಶರಣಪ್ಪ ದಿನ್ನಿ, ಯಂಕಪ್ಪ ಚಿತ್ತಾಪೂರು, ಗೀತಾ ದೇವಿ ರಾಠೋಡ್ ಸೇರಿದಂತೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement