ಕರ್ತವ್ಯ ರದ್ದತಿಗೆ 200 ಅರ್ಜಿ
ರಾಯಚೂರು: ಲೋಕಸಭೆ ಚುನಾವಣೆಗೆ ನಿಯೋಜಿತ ಸಿಬ್ಬಂದಿಯು ವಿವಿಧ ಕಾರಣಗಳನ್ನೊಡ್ಡಿ ಕರ್ತವ್ಯದಿಂದ ಬಿಡುಗಡೆಗೆ ಕೋರಿ 200ಕ್ಕೂ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಂದಿವೆ ಎಂದು ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜು ಹೇಳಿದರು.
ನಗರದಲ್ಲಿ ಬುಧವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ಈ ವಿಷಯ ತಿಳಿಸಿ, ಚುನಾವಣೆ ಕಾರ್ಯಕ್ಕೆ ನಿಯೋಜಿತ ಸಿಬ್ಬಂದಿಯಲ್ಲಿ 200 ಜನ ಚುನಾವಣೆ ತರಬೇತಿಗೆ ಗೈರು ಹಾಜರಾಗಿದ್ದು, ಈ ಹಿನ್ನೆಲೆಯಲ್ಲಿ ಹೊಸದಾಗಿ 200 ಜನಕ್ಕೆ ಚುನಾವಣೆ ಕಾರ್ಯಕ್ಕೆ ನಿಯೋಜಿಸಿ ಆದೇಶ ಹೊರಡಿಸಲಾಗಿದೆ ಎಂದರು.
ಜಿಲ್ಲೆಯ ವಿವಿಧೆಡೆ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿ ಆರೋಗ್ಯ ಸಂಬಂಧಿ ಕಾರಣ ಸೇರಿದಂತೆ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಕರ್ತವ್ಯದಿಂದ ಬಿಡುಗಡೆಗೊಳಿಸಲು ಮನವಿ ಮಾಡಿದ್ದು, ಈ ಬಗ್ಗೆ ಪರಿಶೀಲಿಸಲಾಗುತ್ತದೆ. ಹಾಗೆಯೇ ಕರ್ತವ್ಯದಿಂದ ಬಿಡುಗಡೆಗೊಳ್ಳುವವರ ಸ್ಥಳದಲ್ಲಿ ಬೇರೆಯವರಿಗೆ ನೇಮಿಸಿ ಏ.3 ಮತ್ತು ಏ.4ರಂದು ಅಂಥವರಿಗೆ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.