ಕ್ಯಾನ್ವಾಸ್ ಮೇಲೆ ಚಿತ್ರ ಬರೆದು ಕಾರ್ಯಕ್ರಮಕ್ಕೆ ಅಂದಾನಿ ಚಾಲನೆ
ಕ.ಪ್ರ. ವಾರ್ತೆ ಗುಲ್ಬರ್ಗ ಏ.2
ಸಾಹಿತ್ಯ ಮತ್ತು ಚಿತ್ರಕಲೆ ಸಾರಸ್ವತ ಲೋಕದಲ್ಲಿ ಅವಿನಾಭಾವ ಸಂಬಂಧಿಗಳಾಗಿದ್ದರೂ, ಚಿತ್ರಕಲೆಯ ಬಗ್ಗೆ ವಿಮರ್ಶೆಯ ಕೊರತೆ ಎದ್ದುಕಾಣುತ್ತಿದೆ ಎಂದು ಅಂತಾರಾಷ್ಟ್ರೀಯ ಕಲಾವಿದ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ವಿ.ಜಿ. ಅಂದಾನಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಗುಬ್ಬಿ ಪ್ರಕಾಶನ, ಸಮನ್ವಯ ಸಾಹಿತ್ಯ ಪ್ರತಿಷ್ಠಾನ ಹಾಗೂ ರೇಖಾಚಿತ್ರ ಪ್ರಕಾಶನ ಕೊಂಕಲ್ ಸಹಯೋಗದಲ್ಲಿ ನಗರದ ಕನ್ನಡ ಭವನ ಆವರಣದಲ್ಲಿರುವ ಬಾಪುಗೌಡ ದರ್ಶನಪುರ ರಂಗಮಂದಿರದಲ್ಲಿ ಆಯೋಜಿಸಿದ್ದ ಕಲಾನ್ವೇಷಣೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚಿತ್ರಕಲೆಯ ಬಗ್ಗೆ ಸಾಕಷ್ಟು ಪುಸ್ತಕಗಳಿವೆ. ಆದರೆ ಕಲಾವಿದರ ಕುರಿತು ಬಂದಿದ್ದು ಕಡಿಮೆ. ಸಾಂಚಿಸ್ತೂಪ ಕೆತ್ತಿದ ಕಲಾವಿದ, ಸನ್ನತಿಯ ಪಳೆಯುಳಿಕೆಯ ಕಲಾವಿದ ಹಾಗೂ ಶ್ರವಣ ಬೆಳಗೊಳದ ಗೊಮ್ಮಟೇಶ್ವರನ ಮೂರ್ತಿಯನ್ನು ಕೆತ್ತಿದ ಕಲಾವಿದರ ಬಗ್ಗೆ ಇನ್ನೂ ಪುಸ್ತಕ ರೂಪದಲ್ಲಿ ಬಂದಿಲ್ಲದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಇನ್ನಷ್ಟು ಶ್ರೀಮಂತಗೊಳಿಸಬೇಕು: ಚಿತ್ರಕಲೆಗೆ 14 ಸಾವಿರ ವರ್ಷಗಳ ಇತಿಹಾಸವಿದೆ. ಅಕ್ಷರ ಇತಿಹಾಸ ಇತ್ತೀಚಿನದು. ಇಂತಹ ದೊಡ್ಡ ಇತಿಹಾಸವುಳ್ಳ ಚಿತ್ರಕಲೆಯ ವಿಮರ್ಶಲೋಕವನ್ನು ಬಿ.ವಿ.ಕೆ. ಶಾಸ್ತ್ರಿ, ಎಂ.ಎಸ್. ಚಂದ್ರಶೇಖರ್, ಮಾರ್ಥಾ, ಚಿ.ಸು. ಕೃಷ್ಣಶೆಟ್ಟಿ, ಕೆ.ವಿ. ಸುಬ್ರಮಣ್ಯಂ ನಂತಹ ಕೆಲವರು ಮಾತ್ರ ಶ್ರೀಮಂತಗೊಳಿಸುತ್ತಿದ್ದಾರೆ. ಚಿತ್ರಕಲೆ ಮತ್ತು ಸಾಹಿತ್ಯ ಎರಡನ್ನೂ ಗೊತ್ತಿರುವ ಅನೇಕರು ಕಲಾ ವಿಮರ್ಶೆಯನ್ನು ಇನ್ನಷ್ಟು ಶ್ರೀಮಂತಗೊಳಿಸಬೇಕಾಗಿದೆ ಎಂದು ಅಂದಾನಿ ಆಶಯ ವ್ಯಕ್ತಪಡಿಸಿದರು.
ಕೃತಿ ಬಿಡುಗಡೆ: ಸಂಶೋಧನಾ ವಿದ್ಯಾರ್ಥಿ ಬಸವರಾಜ ಕಲೆಗಾರ ಅವರು ಬರೆದ ಕಲಾನ್ವೇಷಣೆ ಕೃತಿಯನ್ನು ಗುವಿವಿ ಕುಲಸಚಿವ ಡಾ. ಚಂದ್ರಕಾಂತ ಯಾತನೂರ ಬಿಡುಗಡೆಗೊಳಿಸಿದರು. ಕರ್ನಾಟಕ ಲಲಿತಕಲಾ ವಿಶ್ವವಿದ್ಯಾಲಯ ವಿಶೇಷ ಅಧಿಕಾರಿ ಡಾ. ಎಸ್.ಸಿ. ಪಾಟೀಲ್, ಚೈತನ್ಯಮಯಿ ಆರ್ಟ್ ಗ್ಯಾಲರಿಯ ನಿರ್ದೇಶಕ ಡಾ. ಎ.ಎಸ್. ಪಾಟೀಲ್ ಹಾಗು ಡಾ. ಎಸ್.ಎಸ್. ಗುಬ್ಬಿ ಮುಖ್ಯ ಅತಿಥಿಗಳಾಗಿದ್ದರು.
ಸನ್ಮಾನ: ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರು ಅಧ್ಯಕ್ಷತೆ ವಹಿಸಿದ್ದರು. ಲೇಖಕ ಬಸವರಾಜ ಕಲೆಗಾರ ಮಾತನಾಡಿದರು. ಇದೇ ಸಂದರ್ಭದಲ್ಲಿ ಅಕಾಡೆಮಿಕ್ ಜ್ಞಾನವಿಲ್ಲದಿದ್ದರೂ ತಮ್ಮ ಕುಶಲ ಕಲೆಯನ್ನು ಕೆಲಸದ ಮೂಲಕ ಬದುಕನ್ನು ಕಟ್ಟಿಕೊಂಡ ಕಾಷ್ಠ ಶಿಲ್ಪಿಗಳನ್ನು ಸನ್ಮಾನಿಸಲಾಯಿತು. ಶಿವಕುಮಾರ ಅಮ್ಮಾಪುರ ನಿರೂಪಿಸಿದರು.
ಮಾಜಿ ಸಚಿವ ರಾಜಾ ಮದನ ಗೋಪಾಲ ನಾಯಕ, ಹಿರಿಯ ಸಾಹಿತಿ ಶಿವಶಾಂತರೆಡ್ಡಿ, ರಂಗಕರ್ಮಿ ಶಂಕ್ರಯ್ಯ ಘಂಟಿ, ಬಸಲಿಂಗಪ್ಪ ಅಲಹಾಳ ಸೇರಿದಂತೆ ಅನೇಕರು ಇದ್ದರು.