ನಿವೃತ್ತ ಪೊಲೀಸರಿಗೆ ಸ್ಪಂದಿಸಿ
ಕ.ಪ್ರ. ವಾರ್ತೆ ರಾಯಚೂರು ಏ.2
ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಹಗಲಿರುಳು ಶ್ರಮಿಸುವ ಪೊಲೀಸ್ ಸಿಬ್ಬಂದಿಗೆ ನಿವೃತ್ತಿ ನಂತರ ಸಮಾಜ ಗೌರವದಿಂದ ಕಾಣಬೇಕು. ಅವರ ಬೇಕು-ಬೇಡಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಕರೆ ನೀಡಿದರು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಚುನಾವಣೆ, ತುರ್ತು ಸಂದರ್ಭದಲ್ಲಿ ಸಮಾಜದಲ್ಲಿ ನೆಲೆಸಿರುವ ಎಲ್ಲರ ಹಿತರಕ್ಷಣೆಗೆ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಆದರೆ ವಯೋನಿವೃತ್ತಿ ನಂತರದಲ್ಲಿ ಸಮಾಜವೇ ಅವರನ್ನು ಕಡೆಗಣಿಸುತ್ತಿರುವುದು ಸರಿಯಲ್ಲ ಎಂದರು.
ಜಿಲ್ಲಾಡಳಿತ ಅಗತ್ಯ ನೆರವು ನೀಡಲಿದೆ: ಪೊಲೀಸ್ ಸಿಬ್ಬಂದಿ ತಮ್ಮ ಜೀವಮಾನದ ಅರ್ಧ ಆಯುಷ್ಯವನ್ನೇ ಜನರ ಸೇವೆಗೆ ಕಳೆಯುತ್ತಾರೆ. ಅಂಥವರ ಕಷ್ಟ- ಸುಖಗಳಲ್ಲಿ ಭಾಗಿಯಾಗುವ ಗುಣ ಎಲ್ಲರೂ ಬೆಳೆಸಿಕೊಳ್ಳಬೇಕು. ನಿವೃತ್ತ ಪೊಲೀಸ್ ಸಿಬ್ಬಂದಿಯ ಅವಶ್ಯಕತೆಯನ್ನು ಅರಿತು ಈಡೇರಿಸುವ ಕಾರ್ಯ ಆಡಳಿತ ಮಾಡಬೇಕಿದೆ ಎಂದು ಹೇಳಿದರು.
ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿಗಳ ಕ್ಲಬ್ಗೆ ನೀಡಿರುವ ಕಟ್ಟಡ ದುರಸ್ತಿಗೆ ಜಿಲ್ಲಾಡಳಿತ ಅಗತ್ಯ ನೆರವು ನೀಡಲಿದೆ. ಈ ಕುರಿತು ಜಿಲ್ಲಾ ಪೊಲೀಸ್ ಇಲಾಖೆಯಿಂದ ಪ್ರಸ್ತಾವನೆ ತಲುಪುತ್ತಿದ್ದಂತೆಯೇ ಮಂಜೂರಾತಿ ನೀಡುವುದಾಗಿ ಭರವಸೆ ನೀಡಿದರು.
ಮುಖ್ಯ ಅತಿಥಿ ಜಿಪಂ ಸಿಇಒ ವಿಜಯ ಜೋತ್ಸ್ನಾ ಮಾತನಾಡಿ, ಪೊಲೀಸ್ ಸಿಬ್ಬಂದಿಯನ್ನು ಕೇವಲ ವೃತ್ತಿ ನಿರ್ವಹಣೆಯ ವೇಳೆಯಲ್ಲಷ್ಟೇ ಅಲ್ಲದೇ ನಿವೃತ್ತಿಯ ನಂತರವೂ ಸಮಾಜದ ವಿವಿಧ ಕೆಲಸ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ನಿವೃತ್ತ ಸಿಬ್ಬಂದಿ ಅನುಭವ ಅಗತ್ಯ: ನಿವೃತ್ತ ಸಿಬ್ಬಂದಿಯ ಅನುಭವವನ್ನು ಹೊಸದಾಗಿ ನೇಮಕಗೊಂಡಂಥ ಪೊಲೀಸ್ ಅಧಿಕಾರಿಗಳು ಕೇಳಿ ತಿಳಿದು ಅದರಂತೆ ಕಾರ್ಯನಿರ್ವಹಿಸಿದಲ್ಲಿ ಸಮಾಜಕ್ಕೆ ಇನ್ನಷ್ಟು ಹೆಚ್ಚಿನ ಸಮರ್ಪಕ ಸೇವೆ ಒದಗಿಸಲು ಸಾಧ್ಯವಾಗುತ್ತದೆ. ಹಾಗೆಯೇ ನಿವೃತ್ತ ಸಿಬ್ಬಂದಿಗೂ ಇಲಾಖೆಯ ಕುರಿತು ಗೌರವ ಭಾವನೆ ಮೂಡಲು ನೆರವಾಗುತ್ತದೆ ಎಂದರು.
ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಚಂದ್ರಯ್ಯ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವುದು ಹೆಮ್ಮೆಯ ವಿಚಾರವಾಗಿದೆ. ನಿವೃತ್ತಿ ನಂತರವೂ ಇಲಾಖೆಯು ತಮ್ಮ ವಿವಿಧ ಬೇಡಿಕೆಗಳಿಗೆ ತುರ್ತು ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಚೆಕ್ ವಿತರಣೆ: ಈ ವೇಳೆ ಪೊಲೀಸ್ ಇಲಾಖೆಯಿಂದ ಅನೇಕರಿಗೆ ಆರ್ಥಿಕ ಸಹಾಯದ ಚೆಕ್ ವಿತರಿಸಲಾಯಿತು. ಸಮಾರಂಭದಲ್ಲಿ ಎಸ್ಪಿ ಎಂ.ಎನ್. ನಾಗರಾಜ್, ಹೆಚ್ಚುವರಿ ಎಸ್ಪಿ ಅಶೋಕ ಸದಲಗಿ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ನಗರದ ನಾಗರಿಕರು, ನಿವೃತ್ತ ಪೊಲೀಸ್ ಸಿಬ್ಬಂದಿ ಹಾಗೂ ಕುಟುಂಬದವರು ಇದ್ದರು. ಈ ಸಂದರ್ಭ ಪೊಲೀಸ್ ತಂಡಗಳು ಆಕರ್ಷಕ ಪರೇಡ್ ನಡೆಸಿದರು.