ಬಿಜೆಪಿ ಸೋಲಿಸಿ: ದಸಂಸ
ರಾಯಚೂರು: ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ಗೆ ಬೆಂಬಲಿಸುವಂತೆ ಹೈದರಾಬಾದ್ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮನವಿ ಮಾಡಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸಂಘಟನೆ ರಾಜ್ಯಾಧ್ಯಕ್ಷ ರಾಮಾಂಜನೇಯಲು ಮಾತನಾಡಿ, ಜಾತಿ, ಮತ, ಪಂಥ ಹಾಗೂ ಮೂಢನಂಬಿಕೆಯ ಮೂಲಕ ಕೋಮುವಾದ ಪ್ರಚೋದಿಸುವ ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಸೋಲಿಸುವುದು ಅವಶ್ಯ ಎಂದರು.
ದಲಿತ ಜನಾಂಗದವರು ಕಾಂಗ್ರೆಸ್ನ್ನು ಬೆಂಬಲಿಸುವ ಮೂಲಕ ಕೋಮುವಾದಿಗಳನ್ನು ಅಧಿಕಾರದಿಂದ ದೂರವಿರಿಸುವಂತೆ ಮನವಿ ಮಾಡಲಾಗುತ್ತಿದೆ. ದೇಶದಲ್ಲಿ ಇದುವರೆಗೆ ಚರ್ಚ್ ಮೇಲೆ ದಾಳಿ, ಬಾಬ್ರಿ ಮಸೀದಿ ಧ್ವಂಸ, ದಲಿತರ ಮೇಲೆ ದೌರ್ಜನ್ಯದಂಥ ಪ್ರಕರಣಗಳಲ್ಲಿ ತೊಡಗಿರುವ ಬಿಜೆಪಿಯನ್ನು ಸೋಲಿಸುವುದು ಎಲ್ಲರ ಗುರಿಯಾಗಬೇಕೆಂದು ಕರೆ ನೀಡಿದರು.
ಮನುಧರ್ಮ ಸ್ಥಾಪನೆಗೆ ಬಿಜೆಪಿ ಯತ್ನ: ಸಂವಿಧಾನ ಪರಾಮರ್ಶೆ ಮೂಲಕ ಮನುಧರ್ಮ ಸ್ಥಾಪನೆಗೆ ಬಿಜೆಪಿ ಪ್ರಯತ್ನಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ದಲಿತರು ಎಚ್ಚೆತ್ತುಕೊಳ್ಳಬೇಕಿದೆ. ದೇಶದಲ್ಲಿ ಶಾಂತಿ ನೆಲೆಸಬೇಕು. ಜಾತ್ಯತೀತ ಮನೋಭಾವಕ್ಕೆ ಧಕ್ಕೆಯುಂಟು ಮಾಡುವ ಪಕ್ಷಕ್ಕೆ ಬೆಂಬಲಿಸದಂತೆ ಮನವಿ ಮಾಡಿದರು. ಗುಜರಾತ್ ಅಭಿವೃದ್ಧಿ ಹೆಸರಿನಲ್ಲಿ ದೇಶವನ್ನು ನರೇಂದ್ರ ಮೋದಿ ಕೈಗಿಡಲು ಬಿಜೆಪಿ ಹೊರಟಿದೆ. ಆದರೆ ಈಗಾಗಲೇ ಗುಜರಾತ್ ಬಂಡವಾಳಶಾಹಿಗಳ ಕೈವಶದಲ್ಲಿದ್ದು, ಅಸಮಾನತೆಗೆ ದಾರಿ ಮಾಡಿದೆ. ಇಂಥ ಅಸಮಾನತೆಯನ್ನು ರಾಷ್ಟ್ರವ್ಯಾಪಿ ವಿಸ್ತರಿಸಲು ಬಿಜೆಪಿ ಚಿಂತನೆ ನಡೆಸಿದೆ ಎಂದು ಆರೋಪಿಸಿದರು.
ದುರಾಡಳಿತ ತಡೆಗೆ ಕಾಂಗ್ರೆಸ್ ಬೆಂಬಲಿಸಿ: ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಅವರು ಬಿಜೆಪಿ ಸರ್ಕಾರದಲ್ಲಿ ಸಚಿವರಾದ ನಂತರ ಅಪಾರ ಅಕ್ರಮ ಆಸ್ತಿ ಸಂಪಾದಿಸಿದ್ದು, ಕ್ಷೇತ್ರ ವ್ಯಾಪ್ತಿಯಲ್ಲಿ ಶೋಷಿತ ವರ್ಗಗಳ ಮೇಲೆ ದೌರ್ಜನ್ಯಕ್ಕೆ ಕಾರಣರಾಗಿದ್ದಾರೆಂದು ಆರೋಪಿಸಿದ ಅವರು, ಕ್ಷೇತ್ರದಲ್ಲಿ ದುರಾಡಳಿತ ತಡೆಗೆ ಕಾಂಗ್ರೆಸ್ ಬೆಂಬಲಿಸಲು ಕರೆ ನೀಡಿದರು. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಗೋವಿಂದರಾಜ್ ಹೊಸೂರು, ರಂಗಪ್ಪ ಶಕ್ತಿನಗರ, ನಾಗರಾಜ್, ಜಂಬಣ್ಣ, ಮಾರೇಶ್ ಭಂಡಾರಿ, ಹುಸೇನಪ್ಪ ಸೇರಿ ಅನೇಕರಿದ್ದರು.
'ಕಾಂಗ್ರೆಸ್ ಗೆಲವಿಗೆ ಶ್ರಮಿಸುವೆ'
ಲಿಂಗಸ್ಗೂರು: ರಾಯಚೂರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕರ ಗೆಲವಿಗೆ ಶ್ರಮಿಸುವುದಾಗಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶರಣಪ್ಪ ಮೇಟಿ ಹೇಳಿದರು. ಪಟ್ಟಣದ ತಮ್ಮ ಕಚೇರಿಯಲ್ಲಿ ಸೋಮವಾರ ಅಬಕಾರಿ ಸಚಿವ ಬಾಲಚಂದ್ರ ಜಾರಕಿಹೊಳಿ ಹಾಗೂ ಮಾಜಿ ಸಚಿವ ರಾಜಾ ಅಮರೇಶ್ವರ ನಾಯಕರಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ದೇಶದಲ್ಲಿ ಆಡಳಿತ ನಡೆಸಿದ ಯುಪಿಎ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಹಾಗೂ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಜಾರಿಗೆ ತಂದ ಯೋಜನೆಗಳು ಪಕ್ಷದ ಅಭ್ಯರ್ಥಿ ಗೆಲವಿಗೆ ಸಹಕಾರಿಯಾಗಲಿವೆ. ಪಕ್ಷದ ಅಭ್ಯರ್ಥಿಗೆ ಕ್ಷೇತ್ರದಲ್ಲಿ ಅತಿ ಹೆಚ್ಚು ಮತ ಲಭಿಸುವಂತೆ ಕಾರ್ಯನಿರ್ವಹಿಸಲು ಪಕ್ಷದ ನಾಯಕರು ನಮಗೆ ಜವಬ್ದಾರಿ ವಹಿಸಬೇಕೆಂದು ಮನವಿ ಮಾಡಿದರು. ಅಮರಗುಂಡಪ್ಪ ಮೇಟಿ, ಪಾಮಯ್ಯ ಮುರಾರಿ, ಬಸವರಾಜಗೌಡ ಗಣೇಕಲ್, ಹನುಮಂತಪ್ಪ ಕಂದಗಲ್, ಬಸವರಾಜ ನಾಯಕ ದೊಡ್ಡಹೊಲ, ಎಲ್.ಟಿ.ನಾಯಕ, ಬಸನಗೌಡ ಮರಳಿ, ಶೇಖರಗೌಡ ನಾಗಲಾಪುರ, ಶಿವಪ್ಪ ಮಾಚನೂರ, ರುದ್ರಗೌಡ ತುರಡಗಿ, ವಿರುಪಾಕ್ಷಪ್ಪ ಹಂದ್ರಾಳ ಸೇರಿದಂತೆ ಇದ್ದರು.