ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮತದಾನ ಬಹಿಷ್ಕಾರ: ಸಂಧಾನ ವಿಫಲ

Rashmi Kasaragodu
Updated On : 3 Apr 2014, 2:12 am

ಮುದಗಲ್: ತಮ್ಮ ಬೇಡಿಕೆಗಳು ಈಡೇರದ ಹೊರತು ನಾವು ಮತದಾನಕ್ಕೆ ಮುಂದಾಗುವುದಿಲ್ಲ. ನಮ್ಮ ನಿರ್ಧಾರ ಅಚಲ ಎಂದು ಕೃಷ್ಣಾ ನದಿ ತೀರದ 4 ಗ್ರಾಮಗಳ ಗ್ರಾಮಸ್ಥರು ಸಂಧಾನಕ್ಕೆ ಆಗಮಿಸಿದ್ದ ಅಧಿಕಾರಿಗಳಿಗೆ ಖಡಕ್ ಉತ್ತರ ನೀಡಿದ್ದಾರೆ.
ತಾಲೂಕಿನ ಅಂಕನಾಳ, ಉಪನಾಳ, ಹಲ್ಕಾವಟಗಿ, ತೊಂಡಿಹಾಳ ಗ್ರಾಮಸ್ಥರು ತಮ್ಮ ಗ್ರಾಮಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸುವವರೆಗೆ ಮತದಾನ ಬಹಿಸ್ಕರಿಸುವುದಾಗಿ ಹೇಳಿಕೆ ನೀಡಿದ್ದರ ಹಿನ್ನೆಲೆಯಲ್ಲಿ ಲಿಂಗಸಸ್ಗೂರು ಸಹಾಯಕ ಆಯುಕ್ತ ಟಿ.ಯೋಗೇಶ್ವರ ಸದರಿ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ಮನವೊಲಿಸಿ ಮತದಾನ ಮಾಡುವಂತೆ ಮನವಿ ಮಾಡಿದರು.
ಸಾಲು ಸಾಲು ಸಮಸ್ಯೆ: ಅಧಿಕಾರಿಗಳ ಮನವಿಯನ್ನು ತಿರಸ್ಕರಿಸಿದ ಗ್ರಾಮಸ್ಥರು ನಮ್ಮ ಗ್ರಾಮಗಳು ಕೃಷ್ಣಾ ನದಿಗೆ ಹೊಂದಿಕೊಂಡಿವೆ. ಇದೇ ನದಿಯಿಂದ ದೂರದ ಲಿಂಗಸ್ಗೂರು, ಮುದಗಲ್, ನಾಗರಹಾಳ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಯೋಜನೆ ರೂಪಿಸಿದೆ. ಆದರೆ ಕೂಗಳತೆಯಲ್ಲಿ ನದಿ ಇದ್ದರೂ ನಮ್ಮ ಗ್ರಾಮಗಳಲ್ಲಿ ಕುಡಿಯಲು ನೀರಿಲ್ಲ.
ನಮ್ಮೂರು ಪಾಕಿಸ್ತಾನದಲ್ಲಿದೆಯಾ?: ಚುನಾವಣೆ ಬಂದಾಗ ಮಾತ್ರ ಮತ ಕೇಳಲು ಬರುವ ಜನಪ್ರತಿನಿಧಿಗಳು ಅಭಿವೃದ್ಧಿ ಕೆಲಸಗಳನ್ನು ಮಾಡಿಸಲು ಬರುವುದಿಲ್ಲ, ಸಂಪೂರ್ಣ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ನಮ್ಮ ಊರು ಪಾಕಿಸ್ತಾನದಲ್ಲಿದೆಯಾ ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ಪ್ರಶ್ನಿಸಿದರು. ನಮ್ಮ ಊರುಗಳ ರಸ್ತೆಯನ್ನು ಒಮ್ಮೆ ಕಣ್ಣು ತೆರೆದು ನೋಡಿರಿ, ಲಕ್ಷ ಬೆಲೆ ಬಾಳುವ ಎತ್ತುಗಳು ಈ ರಸ್ತೆಯಲ್ಲಿ ತಿರುಗಾಡಿ ಕಾಲು ಮುರಿದುಕೊಂಡಿದ್ದು ರೈತರ ಗೋಳು ಕೇಳುವವರಾರು ಇಲ್ಲ. ರಸ್ತೆ ದುರಸ್ತಿ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ, ಶಾಸಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಎಲ್ಲ ಸಮಸ್ಯೆಗಳನ್ನು ಕೇಳಿದ ಅಧಿಕಾರಿಗಳು ಮೂಕ ಪ್ರೇಕ್ಷಕರಾದರು. ಒಂದು ವಾರದಲ್ಲಿ ರಸ್ತೆ ದುರಸ್ತಿಗೊಳಿಸುವುದಾಗಿ ಸಹಾಯಕ ಆಯುಕ್ತ ಟಿ.ಯೋಗೇಶ್ವರ ಭರವಸೆ ನೀಡಿದರು. ಇದಕ್ಕೆ ಗ್ರಾಪಂ ಸದಸ್ಯ ಬಸವರಾಜ ರಡ್ಡೇರ ಪ್ರತಿಕ್ರಿಯಿಸಿ 'ನಮಗೆ ಬೇಕಿಲ್ಲ, ಮೂಲಭೂತ ಸೌಲಭ್ಯಗಳು ದೊರೆಯುವವರೆಗೂ ಮತದಾನ ಸಾಧ್ಯವಿಲ್ಲ' ಎಂದು ಹೇಳಿದರು.
ಬಂದ ದಾರಿಗೆ ಸುಂಕವಿಲ್ಲ: ಮತದಾನ ಬಹಿಷ್ಕಾರ ಹಾಕುವುದು ಬೇಡ, ನಿಮ್ಮ ಬೇಡಿಕೆಗಳೇನೇ ಇರಲಿ ಸರ್ಕಾರಕ್ಕೆ ತಲುಪಿಸುತ್ತವೆ ಎಂದು ಮನವೊಲಿಸಿದರೂ ಗ್ರಾಮಸ್ಥರು ಪಟ್ಟು ಬಿಡದ ಕಾರಣ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲ ಎಂದು ಹೊರಟು ಹೋದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement