ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಮಸ್ಯೆ ಬಗ್ಗೆ ಚಿಂತಿಸಿ: ದಿಲ್ಷಾದ್

Rashmi Kasaragodu
Updated On : 3 Apr 2014, 2:18 am

ಕ.ಪ್ರ. ವಾರ್ತೆ     ರಾಯಚೂರು     ಏ.2
ಸಮಾಜದಲ್ಲಿ ನೆಲೆಸಿರುವ ಭ್ರಷ್ಟಾಚಾರ, ಜಾತಿ ಪದ್ಧತಿಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಲೇಖಕ ಮಹಾಂತೇಶ್ ನವಲಕಲ್ ತಮ್ಮ ಭಾರತ ಭಾಗ್ಯ ವಿಧಾತಾ ಕೃತಿಯಲ್ಲಿ ಮಾಡಿದ್ದಾರೆ ಎಂದು ಮಾನವಿ ತಾಲೂಕಿನ ಸಿರವಾರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ದಿಲ್ಷಾದ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಂಗಳವಾರ ಸಂಜೆ ನಡೆದ ಮಹಾಂತೇಶ ನವಲಕಲ್ ಅವರ ಭಾರತ ಭಾಗ್ಯ ವಿಧಾತಾ ಪುಸ್ತಕ ಬಿಡುಗಡೆ ಸಮಾರಂಭ ಹಾಗೂ ಧಾರವಾಡದ ಆಟಮಾಟ ತಂಡದ ನಾಟಕ ಪ್ರದರ್ಶನ ಸಮಾರಂಭದಲ್ಲಿ ಕೃತಿಯ ಬಗ್ಗೆ ಮಾತನಾಡಿದರು.
ಸಮಾಜದಲ್ಲಿನ ವಿವಿಧ ಸಮಸ್ಯೆಗಳು, ಪ್ರಗತಿಪರ ಚಿಂತನೆಗಳು ಸಾಹಿತ್ಯದಲ್ಲಿ ಸೇರಿರಬೇಕು. ಅಂಥ ಸಾಹಿತ್ಯದಿಂದ ಸಮಾಜದಲ್ಲಿ ಜಾಗೃತಿ ಮೂಡಲು ಸಾಧ್ಯ. ಕಥೆಗಾರ ತಾನು ಕಂಡಂಥ ವಿಚಾರ, ಅನುಭವಗಳನ್ನು ಬರೆವಣಿಗೆಯಲ್ಲಿ ವ್ಯಕ್ತಪಡಿಸಿರುವುದು ಗಮನ ಸೆಳೆಯುತ್ತದೆ ಎಂದರು.
ಗದ್ಯ-ಪದ್ಯಗಳ ಗಾಳಿ ಸಮಾನಾಂತರ: ಸಮಾಜದಲ್ಲಿನ ಕೆಳವರ್ಗ, ಶೋಷಿತ ಸಮುದಾಯ ಮತ್ತು ರೈತ ವರ್ಗದವರು ಎದುರಿಸುತ್ತಿರುವ ಹತ್ತು ಹಲವು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕಾರ್ಯ ಭಾರತ ಭಾಗ್ಯ ವಿಧಾತಾ ಕೃತಿ ಮಾಡಿದೆ. ಹಾಳಾಗಿರುವ ವ್ಯವಸ್ಥೆಯ ಮತ್ತೊಂದು ಮುಖವನ್ನು ಪರಿಚಯಿಸುವ ಕಾರ್ಯ ಲೇಖಕರು ಮಾಡಿದ್ದಾರೆಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಾಂತೇಶ ಮಸ್ಕಿ, ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಯುವ ಸಾಹಿತಿಗಳು ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಗದ್ಯ-ಪದ್ಯಗಳ ಗಾಳಿ ಸಮಾನಾಂತರವಾಗಿ ಬೀಸುತ್ತಿದ್ದು, ಎರಡೂ ಪ್ರಕಾರಗಳು ಒಂದೇ ವೇಗದಲ್ಲಿ ಚಲಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ಮೂರು ಕಥೆಗಳು ರೈತರ ಬವಣೆ: ಲೇಖಕ ಮಹಾಂತೇಶ್ ನವಲಕಲ್ ಅವರು ಕೃಷಿ ಪದವೀಧರರಾಗಿರುವುದರಿಂದ ಸಹಜವಾಗಿಯೇ ಅವರ ಭಾರತ ಭಾಗ್ಯ ವಿಧಾತಾ ಕೃತಿಯಲ್ಲಿ ಕೃಷಿ ಮತ್ತು ಶೋಷಿತ ಸಮುದಾಯದ ಬಗ್ಗೆ ಒತ್ತು ನೀಡಲಾಗಿದೆ. ಪುಸ್ತಕದಲ್ಲಿನ ಒಟ್ಟು ಎಂಟು ಕಥೆಗಳಲ್ಲಿ ಮೂರು ಕಥೆಗಳು ರೈತರ ಬದುಕು ಬವಣೆಯ ಕುರಿತು ಬರೆದಿದ್ದಾಗಿವೆ ಎಂದು ಹೇಳಿದರು.
ಇದಕ್ಕೂ ಮುನ್ನ ಸಾಹಿತಿ ಮಹಾಂತೇಶ ನವಲಕಲ್ ಅವರು ಬರೆದ ಭಾರತ ಭಾಗ್ಯ ವಿಧಾತ ಪುಸ್ತಕವನ್ನು ಹಿರಿಯ ಸಾಹಿತಿ ಭಗತರಾಜ ನಿಜಾಮಕಾರಿ ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಲೋಹಿಯಾ ಪ್ರತಿಷ್ಠಾನದ ಅಧ್ಯಕ್ಷ ಭೀಮನಗೌಡ ಇಟಗಿ, ಲೇಖಕ ಮಹಾಂತೇಶ ನವಲಕಲ್, ಸಾಹಿತ್ಯಾಸಕ್ತರು, ನಗರದ ಜನತೆ ಉಪಸ್ಥಿತರಿದ್ದರು.
ನಾಟಕ ಪ್ರದರ್ಶನ: ಪುಸ್ತಕ ಬಿಡುಗಡೆ ಸಮಾರಂಭದ ನಂತರ ಧಾರವಾಡದ ಆಟಮಾಟ ತಂಡದಿಂದ ಮಹಾಂತೇಶ ನವಲಕಲ್ ರಚಿಸಿದ ಚಂದ್ರಗುಪ್ತನೆಂಬ ಮೌರ್ಯ ನಾಟಕ ಪ್ರದರ್ಶನ ಪ್ರಸ್ತುತಪಡಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement