2.05 ಲಕ್ಷ ಮೌಲ್ಯದ ಅಕ್ರಮ ಮದ್ಯ ಜಪ್ತಿ
ರಾಯಚೂರು: ಲೋಕಸಭೆ ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆಯೇ ಮತದಾರರಿಗೆ ಹಂಚಲು ಅಕ್ರಮ ಮದ್ಯ ಸಾಗಣೆ ದಂಧೆ ತೀವ್ರತೆ ಪಡೆದಿದ್ದು, ಬುಧವಾರ ರಾತ್ರಿ ಪೊಲೀಸರ ಕಾರ್ಯಾಚರಣೆಯ ವೇಳೆ ಆಂಧ್ರಕ್ಕೆ ವಾಹನದಲ್ಲಿ ಸಾಗಿಸುತ್ತಿದ್ದ 2.05 ಲಕ್ಷ ಮೌಲ್ಯದ ಮದ್ಯ ಜಪ್ತಿ ಮಾಡಲಾಗಿದೆ.
ಈ ಕುರಿತು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಎಸ್ಪಿ ಎಂ.ಎನ್. ನಾಗರಾಜ್ ವಿವರ ನೀಡಿ, ನಗರದಿಂದ ಆಂಧ್ರದ ಗದ್ವಾಲ್ ತಾಲೂಕಿನ ಉಪ್ಪೇರಿ ಗ್ರಾಮಕ್ಕೆ ಬುಧವಾರ ರಾತ್ರಿ 11ರ ಸುಮಾರಿಗೆ ಸಾಗಿಸುತ್ತಿದ್ದ 37 ಬಾಕ್ಸ್‌ಗಳಲ್ಲಿದ್ದ ಇಂಪೀರಿಯಲ್ ಬ್ಲ್ಯೂ ಮದ್ಯ ಸುಮಾರು 2,05,029 ಬೆಲೆಯದ್ದನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಆಂಧ್ರದ ಕೃಷ್ಣ, ನಗರದ ಬೋಳಮಾನದೊಡ್ಡಿಯ ಆಂಜನೇಯ ಹಾಗೂ ತಾಲೂಕಿನ ಗಾಣದಾಳ ಗ್ರಾಮದ ಮಹೇಶ್ ಎಂಬುವವರನ್ನು ಬಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ 2 ಲಕ್ಷ ಬೆಲೆಯ ಫೋರ್ಸ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ರಿಮ್ಸ್ ಕಾಲೇಜು ಬಳಿ ತಪಾಸಣೆ: ರಾತ್ರಿ ವೇಳೆ ನಗರದ ರಿಮ್ಸ್ ಕಾಲೇಜಿನ ಬಳಿ ಪೊಲೀಸರು ಶೋಧ ಕಾರ್ಯದಲ್ಲಿದ್ದಾಗ ರಾಯಚೂರು- ಹೈದರಾಬಾದ್ ರಸ್ತೆಯಲ್ಲಿ ಬಂದ ವಾಹನ ತಪಾಸಣೆಗೊಳಪಡಿಸಿದ ವೇಳೆ ಅಕ್ರಮ ಮದ್ಯ ಸಾಗಣೆ ಜಾಲ ಬಯಲಾಗಿದೆ ಎಂದ ಅವರು, ಮದ್ಯ ಮಾರಾಟ ಮಾಡಿದ್ದ ಯರಮರಸ್‌ನ ಮೀನಾಕ್ಷಿ ಬಾರ್‌ನ ನಾಗರಾಜ್ ಗಾಣದಾಳ ತಲೆಮರೆಸಿಕೊಂಡಿದ್ದು ಶೋಧ ಕಾರ್ಯ ಜಾರಿಯಲ್ಲಿದೆ ಎಂದು ಹೇಳಿದರು.
ಈಗಾಗಲೇ ಅಬಕಾರಿ ಇಲಾಖೆಯ ಜಿಲ್ಲಾಧಿಕಾರಿಗೆ ಮದ್ಯದ ಅಕ್ರಮ ಸಾಗಣೆ ತಡೆಗೆ ಬಿಗಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಆಂಧ್ರದಲ್ಲಿ ಮದ್ಯದ ದರ ಕರ್ನಾಟಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಆಂಧ್ರಕ್ಕೆ ಚುನಾವಣೆ ಸಂದರ್ಭ ಹಂಚಲು ಮದ್ಯದ ಅಕ್ರಮ ಸಾಗಣೆಯಾಗುತ್ತಿರುವ ಬಗ್ಗೆ ಶಂಕೆಯಿದೆ ಎಂದು ಹೇಳಿದರು. ಇದುವರೆಗೆ ಜಿಲ್ಲಾ ಪೊಲೀಸ್ ಇಲಾಖೆಯು ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 21 ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ. 3 ಲಕ್ಷ ಬೆಲೆಯ 657 ಲೀಟರ್ ಅಕ್ರಮ ಮದ್ಯ ಜಪ್ತಿ ಮಾಡಲಾಗಿದೆ. ಅದೇ ರೀತಿ 259 ಲೀಟರ್ ಕೆಲಬೆರಕೆ ಸೇಂದಿ ಜಪ್ತಿ ಮಾಡಿದ್ದು, ಈ ಎಲ್ಲ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 41 ಜನರನ್ನು ಬಂಧಿಸಲಾಗಿದೆ ಎಂದರು.
ಜಾಗೃತಿ: ಪೊಲೀಸ್ ಇಲಾಖೆ ಸಹ ಮತದಾರರ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿದೆ. ಈಗಾಗಲೇ ಅನೇಕ ಕಡೆ ಜಾಥಾ ಕೈಗೊಳ್ಳಲಾಗಿದೆ ಎಂದ ಅವರು, ಆಂಧ್ರದ ಗಡಿ ಸೇರಿದಂತೆ ವಿವಿಧೆಡೆ ಒಟ್ಟು 25 ಸ್ಥಳಗಳಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಆಂಧ್ರ ಮತ್ತು ಕರ್ನಾಟಕ ಪೊಲೀಸರು ಪ್ರತಿಯೊಂದೂ ವಾಹನ ತಪಾಸಣೆ ಮಾಡಿಯೇ ಕಳಿಸಲಾಗುತ್ತಿದೆ ಎಂದು ತಿಳಿಸಿದರು.ಈ ಹಿಂದೆ ಜಿಲ್ಲೆಯ ಆಂಧ್ರದ ಗಡಿಯಲ್ಲಿದ್ದ ನಕ್ಸಲ್ ಪ್ರಭಾವಿತ ಪ್ರದೇಶದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳುವ ವಿಚಾರಕ್ಕೆ ಸಂಬಂಧಿಸಿ ನೆರೆಯ ಆಂಧ್ರದ ಪೊಲೀಸ್ ಇಲಾಖೆ ಜತೆ ಚರ್ಚಿಸಿ ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಆಂಧ್ರ ಪೊಲೀಸ್ ಇಲಾಖೆಯಿಂದ ಉತ್ತಮ ಸಹಕಾರ: ಲೋಕಸಭೆ ಚುನಾವಣೆಯ ಸಂದರ್ಭ ಅಕ್ರಮ ಮದ್ಯ ಮತ್ತು ಹಣ ಸಾಗಣೆ ತಡೆಗೆ ಆಂಧ್ರದ ಪೊಲೀಸ್ ಇಲಾಖೆಯಿಂದ ಉತ್ತಮ ರೀತಿಯ ಸಹಕಾರ ದೊರೆಯುತ್ತಿದೆ. ಕರ್ನಾಟಕದಿಂದಲೂ ಸಹಕಾರ ಒದಗಿಸಲಾಗುತ್ತಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿ ಅಶೋಕ ಸದಲಗಿ ಸೇರಿದಂತೆ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳಿದ್ದರು.